ಲೋಕಸಭಾ ಚುನಾವಣೆಗೆ ಜಿಲ್ಲಾಡಳಿತ ಸಜ್ಜು

ಸೋಮವಾರ, ಮಾರ್ಚ್ 25, 2019
21 °C
1111 ಮತಗಟ್ಟೆ, ಮತದಾರರ ಮಾಹಿತಿಗೆ 1950 ಸಹಾಯವಾಣಿ: ಜಿಲ್ಲಾಧಿಕಾರಿ

ಲೋಕಸಭಾ ಚುನಾವಣೆಗೆ ಜಿಲ್ಲಾಡಳಿತ ಸಜ್ಜು

Published:
Updated:
Prajavani

ಉಡುಪಿ: ಚುನಾವಣಾ ಆಯೋಗದ ನಿರ್ದೇಶನದಂತೆ ಲೋಕಸಭಾ ಚುನಾವಣೆಗೆ ಜಿಲ್ಲಾಡಳಿತ ಸಕಲ ರೀತಿಯಲ್ಲಿ ಸಜ್ಜಾಗುತ್ತಿದೆ ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿದ ಅವರು, ಜಿಲ್ಲೆಯಲ್ಲಿ 1,111 ಮತಗಟ್ಟೆಗಳನ್ನು ರಚಿಸಲಾಗಿದ್ದು, ಪ್ರತಿಯೊಂದು ಮತಗಟ್ಟೆಗೂ ಕುಡಿಯುವ ನೀರು, ಪ್ರತ್ಯೇಕ ಶೌಚಾಲಯ, ವಿದ್ಯುತ್‌, ಮತದಾನಕ್ಕೆ ಅಗತ್ಯ ಪೀಠೋಪಕರಣಗಳನ್ನು ಒದಗಿಸಲಾಗುವುದು. ಮತಗಟ್ಟೆ ಮೂಲಸೌಕರ್ಯ ಪರಿಶೀಲಿಸಲು ಮೊದಲ ಬಾರಿಗೆ ಕೆಪಿಎಸ್‌ಐಎಸ್‌ ಎಂಬ ಆ್ಯಪ್ ಬಳಸಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಮಾರ್ಚ್‌ 2 ಹಾಗೂ 3ರಂದು ಎಲ್ಲ ಮತಗಟ್ಟೆಗಳಲ್ಲಿ ವಿಶೇಷ ಮಿಂಚಿನ ನೋಂದಣಿ ನಡೆಸಲಾಗಿದ್ದು, ಹೊಸ ಮತದಾರರನ್ನು ನೋಂದಣಿ ಮಾಡಿಕೊಂಡು ಎಪಿಕ್‌ ಕಾರ್ಡ್‌ಗಳನ್ನು ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದ್ದು, ಹೆಚ್ಚಿನ ಭದ್ರತೆ ನೀಡಲಾಗುವುದು. ಜತೆಗೆ ಮತದಾನಕ್ಕೆ ಜನರನ್ನು ಪ್ರೇರೇಪಿಸಲಾಗುವುದು ಎಂದರು.

ಮತದಾನ ಪ್ರಮಾಣ ಹೆಚ್ಚಿಸಲು ಸ್ವೀಪ್‌ ಸಮಿತಿಯಿಂದ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಇವಿಎಂ ಹಾಗೂ ವಿವಿ ಪ್ಯಾಟ್‌ಗಳ ಕಾರ್ಯ ನಿರ್ವಹಣೆ ಕುರಿತು ಪ್ರಾತ್ಯಕ್ಷಿಕೆ ನೀಡಲಾಗುತ್ತಿದೆ. ಕುಂದಾಪುರಕ್ಕೆ ಡಾ.ಎಸ್‌.ಮಧುಕೇಶ್ವರ್, ಉಡುಪಿಗೆ ಜಂಟಿ ಕೃಷಿ ನಿರ್ದೇಶಕ ಕೆಂಪೇಗೌಡ, ಕಾಪು ಕ್ಷೇತ್ರಕ್ಕೆ ಆಹಾರ ಇಲಾಖೆ ಡಿಡಿ ಡಾ.ಎಲ್‌.ನಾಗರಾಜ್‌, ಕಾರ್ಕಳ ಕ್ಷೇತ್ರಕ್ಕೆ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸಂತೋಷ್ ಕುಮಾರ್ ಅವರನ್ನು ಸಹಾಯಕ ಚುಣಾವಣಾಧಿಕಾರಿಗಳಾಗಿ ನೇಮಕ ಮಾಡಲಾಗಿದೆ ಎಂದು ಮಾಹಿತಿ ನೀಡಿದರು. 

ಚುನಾವಣಾ ಆಯೋಗ ಈ ಬಾರಿ ‘ಸಿ–ವಿಜಿಲ್‌’ ಎಂಬ ಆ್ಯಪ್‌ ಜಾರಿಗೆ ತಂದಿದ್ದು, ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಸಂಬಂಧ ಸಾರ್ವಜನಿಕರು ಆ್ಯಪ್‌ ಮೂಲಕ ನೇರವಾಗಿ ದೂರು ನೀಡಬಹುದು. ದೂರು ಬಂದ ತಕ್ಷಣ ತ್ವರಿತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಈ ಬಾರಿ ಅಂಗವಿಕಲರು ಮತದಾನ ಮಾಡಲು ಅಗತ್ಯ ನೆರವು ನೀಡಲಾಗುವುದು. ಮತದಾರರ ಪಟ್ಟಿಯಲ್ಲಿ 6,600 ಅಂಗವಿಕಲರನ್ನು ಗುರುತಿಸಲಾಗಿದ್ದು, ಅವರಿಗೆ ಮತಗಟ್ಟೆಗೆ ಬರಲು ವಾಹನ ಸೌಲಭ್ಯ ಹಾಗೂ ವೀಲ್‌ಚೇರ್ ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.

ಜಿಲ್ಲೆಯಲ್ಲಿ ಚುನಾವಣೆಗೆ ಅಗತ್ಯವಿರುವ 1,669 ಬ್ಯಾಲೆಟ್‌ ಯುನಿಟ್‌, 1,348 ಕಂಟ್ರೋಲ್ ಯುನಿಟ್‌, 1,584 ವಿವಿ ಪ್ಯಾಟ್‌ ಲಭ್ಯವಿದ್ದು, ಮೊದಲ ಹಂತದ ತಾಂತ್ರಿಕ ಪರಿಶೀಲನೆ ನಡೆಯುತ್ತಿದೆ ಎಂದರು.

ಸಹಾಯವಾಣಿ: ಮತದಾರರು 1950 ಸಹಾಯವಾಣಿಗೆ ಕರೆಮಾಡಿ ಚುನಾವಣಾ ಸಂಬಂಧಿ ಮಾಹಿತಿ ಪಡೆಯಬಹುದು. ಸಹಾಯವಾಣಿ ಕೇಂದ್ರ ಸದ್ಯ ಬೆಳಿಗ್ಗೆ 9ರಿಂದ ರಾತ್ರಿ9ರವರೆಗೆ ಕಾರ್ಯ ನಿರ್ವಹಿಸುತ್ತದೆ. ನಂತರ ದಿನಪೂರ್ತಿ ಕಾರ್ಯ ನಿರ್ವಹಿಸಲಿದೆ. ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ತಿದ್ದುಪಡಿ, ಎಪಿಕ್‌ ಕಾರ್ಡ್‌ ಸೇರಿಸುವುದು, ತೆಗೆದುಹಾಕುವುದು ಹಾಗೂ ದೂರುಗಳನ್ನು ಸಲ್ಲಿಸಬಹುದು ಎಂದು ತಿಳಿಸಿದರು.

ಮತದಾರರು ಭಯ, ಸಂಶಯಗಳನ್ನು ದೂರವಿಟ್ಟು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು. 

ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಅವರು ಇದ್ದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !