ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಷ್ಕರ; ಒಪಿಡಿ ಬಂದ್‌; ತುರ್ತು ಸೇವೆ ಲಭ್ಯ

ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚಳ
Last Updated 17 ಜೂನ್ 2019, 16:13 IST
ಅಕ್ಷರ ಗಾತ್ರ

ಉಡುಪಿ: ವೈದ್ಯರ ಮೇಲಿನ ಹಲ್ಲೆ ಖಂಡಿಸಿ ಭಾರತೀಯ ವೈದ್ಯಕೀಯ ಸಂಸ್ಥೆ ಸೋಮವಾರ ರಾಷ್ಟ್ರದಾದ್ಯಂತ ಕರೆ ನೀಡಿದ್ದ ಮುಷ್ಕರಕ್ಕೆ ಜಿಲ್ಲೆಯ ಖಾಸಗಿ ಆಸ್ಪತ್ರೆಗಳು ಬೆಂಬಲ ವ್ಯಕ್ತಪಡಿಸಿ ಒಪಿಡಿ ಸೇವೆಯನ್ನು ಬಂದ್ ಮಾಡಿದ್ದವು.

ಮಣಿಪಾಲದ ಕೆಎಂಸಿ ಆಸ್ಪತ್ರೆ, ಉಡುಪಿಯ ಡಾ.ಟಿಎಂಎ ಪೈ ಆಸ್ಪತ್ರೆ, ಗಾಂಧಿ ಆಸ್ಪತ್ರೆ, ಆದರ್ಶ ಆಸ್ಪತ್ರೆ, ಹೈಟೆಕ್ ಆಸ್ಪತ್ರೆ ಸೇರಿದಂತೆ ಬಹುತೇಕ ಖಾಸಗಿ ಆಸ್ಪತ್ರೆಗಳಲ್ಲಿ ಹೊರ ರೋಗಿಗಳ ಚಿಕಿತ್ಸಾ ಸೌಲಭ್ಯ ಲಭ್ಯವಿರಲಿಲ್ಲ.

ತುರ್ತು ಚಿಕಿತ್ಸೆಗೆ ಅಡ್ಡಿ ಇಲ್ಲ:

ರೋಗಿಗಳಿಗೆ ತುರ್ತು ಚಿಕಿತ್ಸೆ ಪಡೆಯಲು ಸಮಸ್ಯೆಯಾಗಲಿಲ್ಲ. ಅಪಘಾತ ಸೇರಿದಂತೆ ತುರ್ತು ಚಿಕಿತ್ಸೆಗೆ ಬಂದ ರೋಗಿಗಳನ್ನು ಅಡ್ಮಿಟ್ ಮಾಡಿಕೊಂಡು ಚಿಕಿತ್ಸೆ ನೀಡಲಾಯಿತು. ಯಾವುದೇ ಅಹಿತಕರ ಘಟನೆಗಳು ನಡೆಯಲಿಲ್ಲ.

ಕೆಎಂಸಿ ಬಿಕೋ:

ಸದಾ ರೋಗಿಗಳಿಂದ ತುಂಬಿ ತುಳುಕುತ್ತಿದ್ದ ಮಣಿಪಾಲದ ಕೆಎಂಸಿ ಆಸ್ಪತ್ರೆಯ ಒಪಿಡಿ ವಿಭಾಗ ಬಂದ್ ಹಿನ್ನೆಲೆಯಲ್ಲಿ ಬಿಕೋ ಎನ್ನುತ್ತಿತ್ತು. ಗಿಜಿಗುಡುತ್ತಿದ್ದ ನೋಂದಣಿ ವಿಭಾಗ ಖಾಲಿಯಾಗಿತ್ತು. ಬೆರಳೆಣಿಕೆಯ ಭದ್ರತಾ ಸಿಬ್ಬಂದಿ ಮಾತ್ರ ಇದ್ದರು. ಆಸ್ಪತ್ರೆಯ ಸಿಬ್ಬಂದಿ ಸಂಖ್ಯೆಯೂ ಕಡಿಮೆ ಇತ್ತು.

ಸಾಮಾನ್ಯವಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಪ್ರತಿದಿನ ರಾಜ್ಯದೆಲ್ಲೆಡೆಯಿಂದ 3 ಸಾವಿರಕ್ಕೂ ಹೆಚ್ಚು ಹೊರ ರೋಗಿಗಳು ಚಿಕಿತ್ಸೆಗೆ ಬರುತ್ತಿದ್ದರು. ದಾವಣಗೆರೆ, ಚಿತ್ರದುರ್ಗ, ಹಾವೇರಿ, ಶಿವಮೊಗ್ಗ, ಭಟ್ಕಳ, ಕಾರವಾರ ಭಾಗದ ರೋಗಿಗಳ ಸಂಖ್ಯೆ ಹೆಚ್ಚಾಗಿರುತ್ತಿತ್ತು.

ಮಾಹಿತಿ ಇಲ್ಲದೆ ಆಸ್ಪತ್ರೆಗೆ ಬಂದಿದ್ದರು:

ಮಾಧ್ಯಮಗಳಲ್ಲಿ ಒಪಿಡಿ ಸೇವೆ ಲಭ್ಯವಿಲ್ಲ ಎಂಬ ಮಾಹಿತಿ ನೀಡಲಾಗಿದ್ದರೂ, ತಲುಪದೆ ಹಲವರು ಆಸ್ಪತ್ರೆಗೆ ಬಂದಿದ್ದರು. ಬಳಿಕ ಬಂದ್ ವಿಚಾರ ತಿಳಿದು ಮತ್ತೆ ಬಸ್‌ ಹತ್ತಿ ಊರಿನತ್ತ ಮುಖಮಾಡಿದರು. ಕೆಲವರು ಆಶಾಭಾವದಿಂದ ಹಲವು ಖಾಸಗಿ ಆಸ್ಪತ್ರೆಗಳಿಗೆ ತೆರಳಿ ಕೊನೆಗೆ ನಿರಾಶರಾಗಿ ಮರಳಬೇಕಾಯಿತು.

ಮಾರ್ಗಮಧ್ಯೆ ಬಸ್ ಇಳಿದರು:

ಶಿವಮೊಗ್ಗ, ದಾವಣಗೆರೆ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳಿಂದ ಮಣಿಪಾಲಕ್ಕೆ ಚಿಕಿತ್ಸೆ ಪಡೆಯಲು ಬರುತ್ತಿದ್ದ ಹಲವು ರೋಗಿಗಳು ಒಪಿಡಿ ಬಂದ್ ವಿಚಾರ ತಿಳಿದು ಮಾರ್ಗಮಧ್ಯೆಯೇ ಬಸ್ ಇಳಿದು ಊರಿಗೆ ವಾಪಾಸಾದರು.

ಒಪಿಡಿ ಬಂದ್ ಫಲಕ:

ನಗರದ ಬಹುತೇಕ ಆಸ್ಪತ್ರೆಗಳ ಮುಂದೆ ಹೊರ ರೋಗಿಗಳ ಚಿಕಿತ್ಸಾ ಸೌಲಭ್ಯ ಲಭ್ಯವಿರುವುದಿಲ್ಲ ಎಂಬ ಫಲಕ ಹಾಕಲಾಗಿತ್ತು. ಜತೆಗೆ, ಅಲ್ಲಿನ ಭದ್ರತಾ ಸಿಬ್ಬಂದಿ ಬಂದ ರೋಗಿಗಳಿಗೆಲ್ಲ ಒಪಿಡಿ ಎಲ್ಲ ಎಂಬ ಮಾಹಿತಿ ನೀಡುತ್ತಿದ್ದ ದೃಶ್ಯ ಕಂಡುಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT