ಆಧುನಿಕ ಪ್ರಪಂಚವನ್ನೆ ಅಣಕಿಸುತ್ತಿರುವ ಗೋಡೆಯಿಲ್ಲದ ಟರ್ಪಾಲಿನ ಮನೆ

5
ದನದ ಹಟ್ಟಿಯಲ್ಲಿ ವಾಸವಿರುವ ಮೂರು ತಲೆಮಾರಿನ ಜೀವಗಳು

ಆಧುನಿಕ ಪ್ರಪಂಚವನ್ನೆ ಅಣಕಿಸುತ್ತಿರುವ ಗೋಡೆಯಿಲ್ಲದ ಟರ್ಪಾಲಿನ ಮನೆ

Published:
Updated:
kullunje

ಸಿದ್ದಾಪುರ: ವೈಜ್ಞಾನಿಕವಾಗಿ ಮುಂದುವರಿದ ಸಮಾಜದಲ್ಲಿ ಹೆಂಚಿನ ಮನೆಗಳು ಸಾಕಷ್ಟು ಕಡಿಮೆಯಾಗಿ ಕಾಂಕ್ರೀಟಿಕರಣಗೊಂಡಿರುವ ಮನೆಗಳು ಕಣ್ಣಿಗೆ ಕಾಣುತ್ತಿವೆ. ಆದರೆ ಶಂಕರನಾರಾಯಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಳ್ಳುಂಜೆಯ ಮಾವಿನಕೋಡ್ಲು ಎಂಬಲ್ಲಿ ಆಧುನಿಕ ಪ್ರಪಂಚವನ್ನೆ ಅಣಕಿಸುವಂತೆ ಟರ್ಪಾಲು ಹೊದೆಸಿದ ದನದ ಕೊಟ್ಟಿಗೆಯಲ್ಲಿ ಎರಡು ದಶಕಗಳಿಂದ ಮೂರು ತಲೆಮಾರಿನ ಜೀವಗಳು ವಾಸವಿದ್ದಾರೆ.

ಆಶ್ಚರ್ಯವಾದರೂ ಸತ್ಯ! ಬೈಂದೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಶಂಕರನಾರಾಯಣ ಕುಳ್ಳುಂಜೆ ಮಾವಿನಕೋಡ್ಲು ಕೋವಿನ ಗುಡ್ಡೆ ಕೋಣನಕುಂದ್ರಿ ಎಂಬಲ್ಲಿ ಕುಡುಬಿ ಸಮುದಾಯದ ಕುಟುಂಬವೊಂದು ಗೋಡೆಗಳಿಲ್ಲದ ಟರ್ಪಾಲು ಹೊದೆಸಿದ ಮನೆಯಲ್ಲಿ ವಾಸವಿದ್ದಾರೆ. ಇದನ್ನು ಮನೆ ಅನ್ನುವುದಕ್ಕಿಂತಲೂ ದನದ ಕೊಟ್ಟಿಗೆಯೆಂದೆ ಕರೆಯಬಹುದು. ಗೋಡೆಗಳಿಲ್ಲದ ಕೊಟ್ಟಿಗೆಗೆ ಖಾಲಿ ಸಿಮೆಂಟ್ ಚೀಲ, ಹಳೆಯ ಸೀರೆಯನ್ನು ಅಡ್ಡಲಾಗಿ ಕಟ್ಟಲಾಗಿದೆ. ಹಟ್ಟಿಯೊಳಗೆ ದನಕರುಗಳಿಗೆ ಮರೆಯಾಗಿ ಟರ್ಪಾಲು ಕಟ್ಟಿ ಕೋಣೆಯಂತೆ ಮಾಡಿಕೊಂಡಿದ್ದಾರೆ. ಆ ಕೋಣೆಯಲ್ಲಿಯೆ ಇತ್ತೀಚಿಗೆ ಹಾಕಿದ ದನದ ಕರುವನ್ನು ಕಟ್ಟಿದ್ದಾರೆ. ಮಳೆ ಜೋರಾಗಿ ಸುರಿದರೆ ಮನೆಯೊಳಗೆ ನೀರು ಬರುತ್ತದೆ. ಗೋಡೆಗಳಿಲ್ಲದಿರುವ ದನದ ಹಟ್ಟಿಯಲ್ಲಿ ವಿಷಜಂತುಗಳ ಭೀತಿಯಲ್ಲಿಯೆ ಎರಡು ದಶಕಗಳಿಂದ ಒಂದೇ ಸೂರಿನಡಿ ದನಕರು ಹಾಗೂ ಸಾಂತುಬಾಯಿ ಅವರು ತನ್ನ ಮಗಳು, ಮೊಮ್ಮಗಳೊಂದಿಗೆ ವಾಸವಿದ್ದಾರೆ.

ಸಾಂತುಬಾಯಿ ಅವರಿಗೆ ಒಂದೂವರೆ ಎಕರೆ ಜಾಗವಿದ್ದರೂ ದಾಖಲೆ ಸರಿಯಿಲ್ಲದೆ ಸರ್ಕಾರಿ ಯೋಜನೆಗಳು ಮಂಜೂರಾಗುತ್ತಿಲ್ಲ. ಬಹಳ ವರ್ಷಗಳ ಹಿಂದೆ ತಾವು ನಂಬಿದವರಿಂದಲೆ ಮೋಸ ಹೋದ ಪರಿಣಾಮ ಈಗ ದಾಖಲೆ ಸರಿ ಮಾಡಿಸುತ್ತೇನೆ ಎಂದು ಯಾರು ಮುಂದೆ ಬಂದರೂ ಸಹ ಇತರರನ್ನು ನಂಬದ ಸ್ಥಿತಿ ನಿರ್ಮಾಣವಾಗಿದೆ. ಮನೆಯಲ್ಲಿ ವಿದ್ಯುತ್ ಸಂಪರ್ಕವಿಲ್ಲ. ಮೂಲಸೌಕರ್ಯದ ಕೊರತೆಯಿಂದ ನರಳುತ್ತಿರುವ ಈ ಪ್ರದೇಶದಲ್ಲಿ ಅವರು ಕಳೆದ ಎರಡು ದರ್ಶಕಗಳಿಂದ ವಾಸಿಸುತ್ತಿದ್ದಾರೆ.

ಶಂಕರನಾರಾಯಣ ಗ್ರಾಮಪಂಚಾಯಿತಿ ಇವರ ದಾಖಲೆ ಸರಿಯಿಲ್ಲದಿದ್ದರೂ ೨೦೧೫-೧೬ ಸಾಲಿನಲ್ಲಿ ಆಶ್ರಯ ಮನೆ ಮಂಜೂರುಗೊಳಿಸಿತ್ತು. ಇತ್ತೀಚಿಗೆ ಅವರು ಮನೆಯ ಪಂಚಾಂಗ ನಿರ್ಮಿಸಿದ್ದು, ಅಧಿಕಾರಿಗಳು ಈಗಾಗಲೆ ಜಿಪಿಎಸ್ ಪೂರ್ಣಗೊಳಿಸಿದ್ದಾರೆ. ಸೀತು ಬಾಯಿ ಅವರ ಹೆಸರಿನಲ್ಲಿ ಮನೆ ಮಂಜೂರಾಗಿದ್ದು, ಅವರ ಆಧಾರ್ ಕಾರ್ಡ್‌ನಲ್ಲಿ ಹೆಸರು ವ್ಯತ್ಯಾಸವಾಗಿದ್ದರಿಂದ ಇದುವರೆಗೆ ಅವರಿಗೆ ಅನುದಾನ ಮಂಜೂರಾಗಿಲ್ಲ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಸಾಲಮಾಡಿ ಪಂಚಾಂಗ ನಿರ್ಮಿಸಿದ ಅವರು ಕೂಲಿ ಕೆಲಸ ಮಾಡಿ ಸಾಲದ ಕಂತು ಪಾವತಿಸುತ್ತಿದ್ದಾರೆ.

ಚಿಮಣಿ ಬೆಳಕಿನಲ್ಲಿ ಓದು!
ಎಲ್ಲೆಡೆ ವಿದ್ಯುತ್ ಸಂಪರ್ಕವಿದ್ದರೂ ಸೀತುಬಾಯಿ ಅವರ ಮನೆಯಲ್ಲಿ ವಿದ್ಯುತ್ ಸಂಪರ್ಕವಿಲ್ಲ. ದನದ ಹಟ್ಟಿಗೆ ಗೋಡೆಗಳಿಲ್ಲದೆ ಟರ್ಪಾಲು ಕಟ್ಟಿದ್ದರಿಂದ ವಿದ್ಯುತ್ ಸಂಪರ್ಕ ಪಡೆದುಕೊಂಡಿಲ್ಲ. ಇವರ ೧೧ ವರ್ಷದ ಮಗಳು ಸುಶ್ಮಿತಾ ಮಾವಿನ ಕೋಡ್ಲು ಸರ್ಕಾರಿ ಶಾಲೆಯಲ್ಲಿ ಆರನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ. ಈಕೆಗೆ ಸ್ಥಳೀಯ ಪಡಿತರ ಅಂಗಡಿಯಲ್ಲಿ ದೊರಕುವ ಸೀಮೆಎಣ್ಣೆಯ ಚಿಮಣಿ ದೀಪವೇ ಓದಿಗೆ ಆಸರೆಯಾಗಿದೆ. ಒಟ್ಟಾರೆಯಾಗಿ ಮೂಲಸೌಕರ್ಯದಿಂದ ವಂಚಿತವಾಗಿರುವ ಕುಟುಂಬಕ್ಕೆ ಜನಪ್ರತಿನಿಧಿಗಳು, ಅಧಿಕಾರಿಗಳು ಸೂಕ್ತ ಭದ್ರತೆ ಒದಗಿಸಬೇಕು ಎನ್ನುವುದು ಪ್ರತಿಯೊಬ್ಬರ ಕಾಳಜಿಯಾಗಿದೆ.

ಕಳೆದ ಎರಡು ದಶಕಗಳಿಂದ ದನದ ಕೊಟ್ಟಿಗೆಯಲ್ಲಿಯೆ ತಾಯಿ, ಮಗಳೊಂದಿಗೆ ವಾಸವಿದ್ದೇನೆ. ಎರಡು ದನಗಳಿದ್ದು, ಇತ್ತೀಚಿಗೆ ಒಂದು ಕರು ಹಾಕಿದೆ. ಕೊಟ್ಟಿಗೆಯಲ್ಲಿಯೆ ಟರ್ಪಾಲನ್ನು ಅಡ್ಡಲಾಗಿ ಕಟ್ಟಿ ಕೊಠಡಿಯಂತೆ ಮಾಡಿಕೊಂಡಿದ್ದೇವೆ. ಗೋಡೆಯಿಲ್ಲದ ಕೊಠಡಿಯಲ್ಲಿಯೆ ನಾವು ಮೂವರು ವಾಸವಾಗಿದ್ದು ಗಂಡಿನ ಆಸರೆಯೂ ಕೂಡ ನಮ್ಮ ಪಾಲಿಗಿಲ್ಲ. ಗ್ರಾಮ ಪಂಚಾಯಿತಿಯಿಂದ ಮನೆ ಮಂಜೂರಾಗಿದ್ದು, ಅನುದಾನ ದೊರೆತಿಲ್ಲ. ಆಧಾರ್ ಕಾರ್ಡ್‌ನಲ್ಲಿ ಹೆಸರು ವ್ಯತ್ಯಯದಿಂದಾಗಿ ಗುಂಪಿನಲ್ಲಿ ಮಾಡಿದ ಸಾಲವನ್ನು ಕೂಲಿ ಕೆಲಸ ಮಾಡಿ ಕಟ್ಟುತ್ತಿದ್ದೇನೆ. ಮಗಳು ಶಾಲೆಗೆ ಹೋಗುತ್ತಿದ್ದು, ಸೀಮೆಎಣ್ಣೆಯ ಚಿಮಣಿ ಬೆಳಕಿನಲ್ಲಿಯೆ ಓದುತ್ತಿದ್ದಾಳೆ. ಜನಪ್ರತಿನಿಧಿಗಳು, ಅಧಿಕಾರಿಗಳು ನಮ್ಮ ಜಾಗದ ದಾಖಲೆ ಸರಿಪಡಿಸಿದರೆ ಸರ್ಕಾರಿ ಯೋಜನೆ ಸಮರ್ಪಕವಾಗಿ ಪಡೆಯಬಹುದು ಎನ್ನುವುದು ಸೀತುಬಾಯಿ ಅವರ ನೋವಿನ ಮಾತು.

ಸಾಂತುಬಾಯಿ ಅವರ ಜಾಗದ ದಾಖಲೆಯನ್ನು ತಹಶೀಲ್ದಾರ್ ಕೂಡಲೆ ಸರಿಪಡಿಸಲು ಆಗ್ರಹಿಸುತ್ತೇನೆ. ಮೂಲಸೌಕರ್ಯ ವೃದ್ಧಿಗೆ ಶಾಸಕರು, ಅಧಿಕಾರಿಗಳ ಗಮನಕ್ಕೆ ತರಲಾಗುವುದು. ಸ್ನೇಹಿತರ ಸಹಕಾರದೊಂದಿಗೆ ಅವರಿಗೆ ಸಹಾಯ ಮಾಡಲಿದ್ದೇವೆ.
- ಉಮೇಶ್ ಶೆಟ್ಟಿ ಕಲ್ಲುಗದ್ದೆ, ತಾಲೂಕು ಪಂಚಾಯಿತಿ ಸದಸ್ಯ, ಶಂಕರನಾರಾಯಣ ಕ್ಷೇತ್ರ.

ಸೀತು ಬಾಯಿ ಅವರಿಗೆ ಆಶ್ರಯ ಮನೆ ಮಂಜೂರಾಗಿದೆ. ಅವರ ಆಧಾರ್ ಕಾರ್ಡ್‌ನಲ್ಲಿ ಹೆಸರು ವ್ಯತ್ಯಾಸವಾಗಿದ್ದರಿಂದ ಅನುದಾನ ಮಂಜೂರಾಗಲು ವಿಳಂಭವಾಗಿದೆ.
- ಸತೀಶ್-ಪಿಡಿಒ ಶಂಕರನಾರಾಯಣ ಗ್ರಾಮ ಪಂಚಾಯಿತಿ

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !