ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಾ.ಟಿಎಂಎ ಪೈ ಆಸ್ಪತ್ರೆ ಕೋವಿಡ್‌ ಸೋಂಕಿತರಿಗೆ ಮೀಸಲು

100 ಬೆಡ್‌ಗಳ ಸಾಮರ್ಥ್ಯ ಹೊಂದಿರುವ ಆಸ್ಪತ್ರೆ; ಏ.1ರಿಂದ ಚಿಕಿತ್ಸೆ
Last Updated 30 ಮಾರ್ಚ್ 2020, 14:39 IST
ಅಕ್ಷರ ಗಾತ್ರ

ಉಡುಪಿ: ಕೋವಿಡ್‌–19 ಸೋಂಕಿತರಿಗೆ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲು ಉಡುಪಿಯ ಡಾ.ಟಿಎಂಎ ಪೈ ಆಸ್ಪತ್ರೆಯನ್ನು ಸಂಪೂರ್ಣವಾಗಿ ಮೀಸಲಿಡಲಾಗಿದೆ ಎಂದು ಮಾಹೆ ಕುಲಪತಿ ಡಾ.ಎಚ್‌.ಎಸ್‌.ಬಲ್ಲಾಳ್‌ ತಿಳಿಸಿದರು.

ಸೋಮವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟಿಎಂಎ ಪೈ ಆಸ್ಪತ್ರೆಯು 100 ಬೆಡ್‌ಗಳ ಸಾಮರ್ಥ್ಯ ಹೊಂದಿದ್ದು, 11 ಐಸಿಯು, 15 ಹೈ ಡೆಪೆಂಡೆನ್ಸಿ ಯುನಿಟ್‌, 36 ಖಾಸಗಿ ಕೊಠಡಿ ಒಳಗೊಂಡಿದೆ. ಇಲ್ಲಿರುವ ಒಳ ರೋಗಿಗಳನ್ನೆಲ್ಲ ಈಗಾಗಲೇ ಮಣಿಪಾಲದ ಕೆಎಂಸಿಗೆ ಶಿಫ್ಟ್‌ ಮಾಡಲಾಗಿದ್ದು, ಕೋವಿಡ್‌ ಸೋಂಕಿತರಿಗೆ ಮಾತ್ರ ಇಲ್ಲಿ ಚಿಕಿತ್ಸೆ ಸಿಗಲಿದೆ ಎಂದರು.

ಕೆಎಂಸಿ ಹಾಗೂ ಟಿಎಂಎ ಪೈ ಆಸ್ಪತ್ರೆಯ ವೈದ್ಯರ ತಂಡ, ಅರೆ ವೈದ್ಯಕೀಯ ಸಿಬ್ಬಂದಿ, ಸಹಾಯಕ ಸಿಬ್ಬಂದಿ ದಿನದ 24 ಗಂಟೆ ಕಾರ್ಯ ನಿರ್ವಹಿಸಲಿದ್ದಾರೆ. ಸೋಂಕಿತರಿಗೆ ಚಿಕಿತ್ಸೆ ನೀಡಲು ಬೇಕಾದ ಪಿಪಿಇ (ಪರ್ಸನಲ್‌ ಪ್ರೊಟೆಕ್ಟಿವ್‌ ಎಕ್ವಿಪ್‌ಮೆಂಟ್‌) ಮಾಸ್ಕ್‌ ಹಾಗೂ ವೆಂಟಿಲೇಟರ್‌ ಸೌಲಭ್ಯಗಳು ಸಿದ್ಧವಿದ್ದು, ಎಲ್ಲರಿಗೂ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ ಎಂದು ಡಾ.ಎಚ್‌.ಎಸ್‌.ಬಲ್ಲಾಳ್‌ ತಿಳಿಸಿದರು.

ಜಿಲ್ಲಾಧಿಕಾರಿ ಜಿ.ಜಗದೀಶ್‌ ಮಾತನಾಡಿ, ಕೋವಿಡ್‌ ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿರುವ (ಹೈರಿಸ್ಕ್‌ ಪ್ರಕರಣ) ವ್ಯಕ್ತಿಗಳಿಗೆ 150 ಬೆಡ್‌ಗಳ ಸಾಮರ್ಥ್ಯವಿರುವ ಎಸ್‌ಡಿಎಂ ಆಯುರ್ವೇದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುವುದು. ಇಲ್ಲಿರುವ ವ್ಯಕ್ತಿಗಳಲ್ಲಿ ಸೋಂಕು ದೃಢಪಟ್ಟರೆ ಟಿಎಂಎ ಪೈ ಆಸ್ಪತ್ರೆಗೆ ವರ್ಗಾಯಿಸಲಾಗುವುದು. ಲೋ ರಿಸ್ಕ್‌ ಇರುವವರಿಗೆ ಹಾಸ್ಟೆಲ್‌ಗಳಲ್ಲಿ ಚಿಕಿತ್ಸೆ ನೀಡುವ ಉದ್ದೇಶವಿದೆ ಎಂದರು.

ಶಾಸಕ ರಘುಪತಿ ಭಟ್‌ ಮಾತನಾಡಿ,ಅತ್ಯಾಧುನಿಕ ವೈದ್ಯಕೀಯ ಉಪಕರಣಗಳ ಕೊರತೆ, ಐಸೊಲೇಟೆಡ್‌ ವಾರ್ಡ್‌ಗಳ ಅಲಭ್ಯತೆ ಇರುವ ಸಮಯದಲ್ಲಿ ಮಣಿಪಾಲದ ಮಾಹೆ ಸಂಸ್ಥೆ ಇಡೀ ಆಸ್ಪತ್ರೆಯನ್ನು ಕೋವಿಡ್‌ ಸೋಂಕಿತರಿಗೆ ಬಿಟ್ಟುಕೊಟ್ಟಿರುವುದು ಶ್ಲಾಘನೀಯ. ರಾಜ್ಯದಲ್ಲಿರುವ ಎಲ್ಲ ಮೆಡಿಕಲ್‌ ಕಾಲೇಜುಗಳಿಗೂ ಇದು ಮಾದರಿಯಾಗಬೇಕು ಎಂದರು.

ಕೆಎಂಸಿ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಮಾತನಾಡಿ, ಕೋವಿಡ್‌ ಸೋಂಕಿತರಿಗೆ ಚಿಕಿತ್ಸೆ ನೀಡಲು ವೈದ್ಯರಿಗೆ ಹಾಗೂ ಶುಶ್ರೂಷಕರಿಗೆ ವಿಶೇಷ ತರಬೇತಿ ನೀಡಲಾಗಿದೆ. ಮಾಸ್ಕ್‌, ಪಿಪಿಇ ಉಪಕರಣಗಳ ಕೊರತೆ ಇಲ್ಲ ಎಂದರು.

ಜಿಲ್ಲೆಯ ಮೂವರು ಸೋಂಕಿತರ ಆರೋಗ್ಯ ಸ್ಥಿರವಾಗಿದೆ. ಮುಂದೆ ಎರಡು ಬಾರಿ ಪರೀಕ್ಷೆ ನಡೆಸಿ, ನೆಗೆಟಿವ್ ಬಂದರೆ ಮಾತ್ರ ಆಸ್ಪತ್ರೆಯಿಂದ ಡಿಸ್‌ಚಾರ್ಜ್‌ ಮಾಡಲಾಗುವುದು ಎಂದು ಡಾ.ಅವಿನಾಶ್ ಶೆಟ್ಟಿ ಮಾಹಿತಿ ನೀಡಿದರು.

ಸಭೆಯಲ್ಲಿ ಮಾಹೆ ಸಹ ಕುಲಪತಿ ಡಾ.ವಿನೋದ್ ಭಟ್‌, ಎಸ್‌ಪಿ ವಿಷ್ಣುವರ್ಧನ್‌, ಜಿಲ್ಲಾ ಪಂಚಾಯಿತಿ ಸಿಇಒ ಪ್ರೀತಿ ಗೆಹ್ಲೋಟ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT