ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಸೈನರ್ ಡ್ರಗ್ಸ್ ಹಾವಳಿ: ಇಲಾಖೆಗೆ ಸವಾಲು

ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿರುವ ಮಾದಕ ವ್ಯಸನ: ಎಸ್‌ಪಿ ನಿಶಾ ಜೇಮ್ಸ್‌ ಕಳವಳ
Last Updated 21 ನವೆಂಬರ್ 2019, 11:33 IST
ಅಕ್ಷರ ಗಾತ್ರ

ಉಡುಪಿ: ಜಿಲ್ಲೆಯಲ್ಲಿ ಡಿಸೈನರ್ ಹಾಗೂ ಮ್ಯಾನುಫ್ಯಾಕ್ಚರಿಂಗ್ ಡ್ರಗ್ಸ್ ಹಾವಳಿ ತಡೆ ಪೊಲೀಸ್ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ. ಸಿಂಥೆಟಿಕ್ ಡ್ರಗ್ಸ್‌ ಜಾಲವನ್ನು ಮಟ್ಟಹಾಕಲು ಸಾಧ್ಯವಾಗುತ್ತಿಲ್ಲ. ಇದು ಇಲಾಖೆಯ ವೈಫಲ್ಯ ಎಂದು ಎಸ್‌ಪಿ ನಿಶಾ ಜೇಮ್ಸ್‌ ಅಸಮಾಧಾನ ವ್ಯಕ್ತಪಡಿಸಿದರು.

ಕೆಎಂಸಿ ಫೊರೆನ್ಸಿಕ್ ಮೆಡಿಸನ್‌ ವಿಭಾಗ, ನಾರ್ಕೊಟಿಕ್ಸ್‌ ಹಾಗೂ ಸೈಕೊಟ್ರೊಪಿಕ್‌ ಸಬ್‌ಸ್ಟಾನ್ಸಸ್‌ ಕೇಂದ್ರದ ಸಹಯೋಗದಲ್ಲಿ ಪೊಲೀಸ್ ಇಲಾಖೆ ಎಸ್‌ಪಿ ಕಚೇರಿಯಲ್ಲಿ ಗುರುವಾರ ಸಿಂಥೆಟಿಕ್ಸ್‌ ಡ್ರಗ್ಸ್ ಸೇವನೆ ಪ್ರಕರಣಗಳ ತನಿಖೆಯ ಕ್ರಮಗಳ ಅಧಿಕಾರಿಗಳಿಗೆ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಮಣಿಪಾಲ ವ್ಯಾಪ್ತಿಯಲ್ಲಿ ಗಾಂಜಾ ಸೇವನೆ ಪ್ರಕರಣಗಳು ಹೆಚ್ಚುತ್ತಿರುವುದರ ಜತೆಗೆ, ಸಿಂಥೆಟಿಕ್ ಡ್ರಗ್ಸ್‌ಗಳ ಬಳಕೆಯೂ ಹೆಚ್ಚಾಗಿರುವುದು ಆತಂಕಕಾರಿ.ಮಣಿಪಾಲ ವಿವಿಯಲ್ಲಿ ವಿದ್ಯಾರ್ಥಿಗಳು ಹೆಚ್ಚು ವ್ಯಸನಕ್ಕೆ ಬಲಿಯಾಗುತ್ತಿರುವುದರ ಬಗ್ಗೆ ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ವಿವಿಯ ಕ್ಯಾಂಪಸ್‌ ಅನ್ನು ಡ್ರಗ್ಸ್‌ ಮುಕ್ತವಾಗಿಸಲು ಇಲಾಖೆ ಕಠಿಣ ಕ್ರಮ ತೆಗೆದುಕೊಳ್ಳಲಿದೆ. ಅದಕ್ಕೆ ವಿವಿಯ ಸಹಕಾರ ಅಗತ್ಯ ಎಂದರು.

ಸಿಂಥೆಟಿಕ್ಸ್‌ ಡ್ರಗ್ಸ್‌ ಪತ್ತೆ ಹಚ್ಚುವಿಕೆ ಬಗ್ಗೆ ಅಧಿಕಾರಿಗಳಿಗೆ ಮಾಹಿತಿಯ ಕೊರತೆ ಇದೆ. ಜಿಲ್ಲೆಯಲ್ಲಿ ಇದುವರೆಗೂ ಗಾಂಜಾ ಪ್ರಕರಣಗಳನ್ನು ಹೊರತುಪಡಿಸಿ, ಒಂದೂ ಡಿಸೈನರ್ ಡ್ರಗ್ಸ್‌ ಪ್ರಕರಣ ಪತ್ತೆಯಾಗದಿರುವುದು ಇದಕ್ಕೆ ಸಾಕ್ಷಿ ಎಂದರು.

ಸಿಎನ್‌ಪಿಎಸ್‌ ವಿಭಾಗದ ಡಾ.ಶ್ರೀಕುಮಾರ್ ಮೆನನ್‌ ಮಾತನಾಡಿ, ಗಾಂಜಾ ಸೇವನೆ ಪ್ರಕರಣಗಳಲ್ಲಿ ಆರೋಪಿಯ ರಕ್ತದ ಮಾದರಿಯನ್ನು ಪರೀಕ್ಷೆಗೊಳಪಡಿಸಿದಾಗ ನಿಖರ ಫಲಿತಾಂಶ ಸಿಗುತ್ತದೆ. ಆದರೆ, ಡಿಸೈನರ್‌ ಡ್ರಗ್ಸ್‌ ಸೇವನೆ ಪ್ರಕರಣಗಳಲ್ಲಿ ಆರೋಪಿಯನ್ನು ಪರೀಕ್ಷೆಗೊಳಪಡಿಸಿದಾಗಲೂ ಡ್ರಗ್ಸ್‌ ಸೇವನೆ ಮಾಡಿರುವ ಅಂಶ ಪರೀಕ್ಷೆಯಲ್ಲಿ ಸುಲಭವಾಗಿ ಪತ್ತೆಮಾಡಲು ಸಾಧ್ಯವಿಲ್ಲ ಎಂದರು.

ಹಲವು ಔಷಧಗಳ ಸಂಯೋಜನೆಯೊಂದಿಗೆಡಿಸೈನರ್‌ ಡ್ರಗ್ಸ್‌ಗಳನ್ನು ತಯಾರಿಸುವುದರಿಂದ ಪರೀಕ್ಷೆಯಲ್ಲಿ ನಿಖರವಾದ ಫಲಿತಾಂಶ ಸಿಗುವುದಿಲ್ಲ. ಪರಿಣಾಮ ಆರೋಪಿ ಸುಲಭವಾಗಿ ಕಾನೂನಿನ ಕಣ್ಣಿಗೆ ಮಣ್ಣೆರಚಿ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಪ್ರತಿದಿನ ಹೊಸ ಡಿಸೈನರ್ ಡ್ರಗ್ಸ್‌ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಕೆಲವು ಕಾನೂನು ಬದ್ಧವಾಗಿಯೇ ಮಾರುಕಟ್ಟೆಗೆ ಬರುತ್ತಿವೆ. ಜೂನ್ 26, 2019ರಂದು ಯುಎನ್‌ಒಡಿಸಿ ಬಿಡುಗಡೆ ಮಾಡಿದ ವರದಿಯ ಪ್ರಕಾರ 2015ರ ಡಿಸೆಂಬರ್ ಅಂತ್ಯಕ್ಕೆ ವಿಶ್ವದಲ್ಲಿ 643 ಸೈಕೊಆಕ್ಟಿವ್‌ ಸಬ್‌ಸ್ಟಾನ್ಸ್‌ ಡಿಸೈನರ್ ಡ್ರಗ್ಸ್‌ಗಳು ನೋಂದಣಿ ಮಾಡಿಕೊಂಡಿವೆ. ಇವೆಲ್ಲವೂ ಮಾರುಕಟ್ಟೆಯಲ್ಲಿ ಲಭ್ಯವಿರುವುದು ಕಳವಳಕಾರಿ ವಿಚಾರ ಎಂದರು.

ಮಾತ್ರೆ, ಪುಡಿ, ಸಂಶೋಧನೆಗೆ ಬಳಸುವ ರಾಸಾಯನಿಕಗಳ ಮಾದರಿಯಲ್ಲಿಡಿಸೈನರ್ ಡ್ರಗ್ಸ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಇವುಗಳ ಪೈಕಿ ಸಂಶೋಧನೆಗೆ ಬಳಸುವ ಡ್ರಗ್ಸ್‌ ಸುಲಭವಾಗಿ ವ್ಯಸನಿಗಳ ಕೈಸೇರುತ್ತದೆ. ಇದನ್ನು ಮಾತ್ರೆ ಅಥವಾ ಪೌಡರ್ ರೂಪದಲ್ಲಿ ಸೇವಿಸಬಹುದು. ಇಂಜೆಕ್ಷನ್‌ ಮೂಲಕ ದೇಹಕ್ಕೆ ಸೇರಿಸಿಕೊಳ್ಳಬಹುದು, ಉಸಿರನ್ನು ಬಿಗಿಯಾಗಿ ಎಳೆಯುವ ಮೂಲಕವೇ ಸೇವನೆ ಮಾಡಬಹುದು. ಗಾಂಜಾ ಸೇವನೆಗಿಂತ 10 ಪಟ್ಟು ಹೆಚ್ಚಿನ ಅಮಲು ಇದರಿಂದ ಸಿಗುತ್ತದೆ ಎಂದು ವಿವರಿಸಿದರು.

ಕಾಲೇಜು ವಿದ್ಯಾರ್ಥಿಗಳಲ್ಲಿ ಸಿಂಥೆಟಿಕ್ಸ್‌ ಡ್ರಗ್ಸ್‌ ಬಳಕೆಯ ಪ್ರಮಾಣ ಹೆಚ್ಚಿದೆ. ಈ ನಿಟ್ಟಿನಲ್ಲಿ ವಿದ್ಯಾಸಂಸ್ಥೆಗಳು ನಿಯಮಿತವಾಗಿ ವಿದ್ಯಾರ್ಥಿಗಳ ರಕ್ತದ ಮಾದರಿಯನ್ನು ತಪಾಸಣೆ ಮಾಡಬೇಕು. ಇದರಿಂದ ಗಾಂಜಾ ಸೇವನೆಗೆ ಕಡಿವಾಣ ಬೀಳಲಿದೆ ಎಂದರು.

ಉಡುಪಿ ನಗರ ಸಿಪಿಐ ಮಂಜುನಾಥ್‌ ಕಾರ್ಯಕ್ರಮ ನಿರೂಪಿಸಿದರು. ಎಎಸ್‌ಪಿ ಕುಮಾರಚಂದ್ರ, ಕೆಎಂಸಿಯ ಫೊರೆನ್ಸಿಕ್‌ ಮೆಡಿಸಲ್‌ ಹಾಗೂ ಟಾಕ್ಸಿಕಾಲಜಿ ವಿಭಾಗದ ಮುಖ್ಯಸ್ಥ ಡಾ.ವಿನೋದ್ ನಾಯಕ್, ಪ್ರೊ.ಡಾ.ವಿಕ್ರಮ್ ಪಲಿಮಾರ್, ಸಹಾಯಕ ಪ್ರಾಧ್ಯಾಪಕ ಡಾ.ಶಂಕರ್ ಬಕ್ಕಣ್ಣನವರ್, ಡಾ.ಅಶ್ವಿನಿ ಕುಮಾರ್, ಡಾ.ಅನಿತಾ, ಡಾ.ನಿರ್ಮಲ ಕಿಶೋರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT