ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ಮೋದಿಗೆ ಪೇಜಾವರ ಶ್ರೀಗಳ ಇ ಮೇಲ್‌

ಮೀನುಗಾರರ ರಕ್ಷಣೆಗೆ ಕ್ರಮ ತೆಗೆದುಕೊಳ್ಳುವಂತೆ ಮನವಿ
Last Updated 10 ಜನವರಿ 2019, 18:48 IST
ಅಕ್ಷರ ಗಾತ್ರ

ಉಡುಪಿ: ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಬೋಟ್‌ ನಾಪತ್ತೆಯಾಗಿ 26 ದಿನಗಳು ಕಳೆದರೂ ಯಾವುದೇ ಸುಳಿವು ಪತ್ತೆಯಾಗಿಲ್ಲ. ಕರಾವಳಿ ಕಾವಲು ಪಡೆ, ನೌಕಾಪಡೆ, ಪೊಲೀಸರು ಸತತ ಕಾರ್ಯಾಚರಣೆ ನಡೆಸಿದರೂ ಪ್ರಯೋಜನವಾಗಿಲ್ಲ.

ಯಾವ ಯತ್ನಗಳೂ ಫಲನೀಡದ ಹಿನ್ನೆಲೆಯಲ್ಲಿ ಮೀನುಗಾರರು ಈಗ ದೇವರ ಹಾಗೂ ದೈವದ ಮೊರೆ ಹೋಗಿದ್ದಾರೆ. ಸುರಕ್ಷಿತವಾಗಿ ಮೀನುಗಾರರು ವಾಪಸ್ ಬರುವಂತೆ ಪೂಜೆ ಸಲ್ಲಿಸಲಾಗುತ್ತಿದೆ. ಜತೆಗೆ, ದೈವದ ನುಡಿ ಕೇಳಲು ಮುಂದಾಗಿದ್ದಾರೆ.

ಮತ್ತೊಂದೆಡೆ ದೆಹಲಿಗೆ ತೆರಳಿದ್ದ ಮೀನುಗಾರರ ಹಾಗೂ ಜನಪ್ರತಿನಿಧಿಗಳ ನಿಯೋಗ ಮಂಗಳವಾರ ತಡರಾತ್ರಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಶೀಘ್ರ ಮೀನುಗಾರರ ಪತ್ತೆಗೆ ಮನವಿ ಸಲ್ಲಿಸಿದೆ.

ಮೀನುಗಾರರ ನಾಪತ್ತೆಯಾಗಿ 25 ದಿನಗಳು ಕಳೆದರೂ ಪತ್ತೆಯಾಗಿಲ್ಲ. ಮೀನುಗಾರ ಕುಟುಂಬಗಳು ಆತಂಕದಲ್ಲಿವೆ. ತಕ್ಷಣ ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಮೀನುಗಾರರನ್ನು ಪತ್ತೆಮಾಡಬೇಕು ಎಂದು ನಿಯೋಗ ಮನವಿ ಮಾಡಿತು.

ಇದೇವೇಳೆ ಮೀನುಗಾರಿಕಾ ಬೋಟ್‌ಗಳಿಗೆ ಬಳಸುವ ಡೀಸೆಲ್‌ ಮೇಲಿನ ರೋಡ್‌ಸೆಸ್‌ ವಿನಾಯಿತಿ ನೀಡಬೇಕು. ಮೀನುಗಾರಿಕೆಯಲ್ಲಿ ಬಳಸಲಾಗುವ ಉಪಕರಣಗಳ ಮೇಲಿನ ಜಿಎಸ್‌ಟಿ ಶೂನ್ಯಕ್ಕೆ ಇಳಿಸಬೇಕು. ಮೀನುಗಾರಿಕೆಗೆ ಪ್ರತ್ಯೇಕ ಸಚಿವಾಲಯ ಸ್ಥಾಪನೆ, ಮೀನುಗಾರರಿಗೆ ಪಿಂಚಣಿ, ಹಿಂದಿನಂತೆ ಸಬ್ಸಿಡಿ ದರದಲ್ಲಿ ಸೀಮೆ ಎಣ್ಣೆ ವಿತರಣೆ ಮಾಡಬೇಕು. ಮೀನುಗಾರರ ಅಭಿವೃದ್ಧಿಗೆ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಮನವಿ ಮಾಡಿದರು.

ಮನವಿಗೆ ಪ್ರಧಾನಿ ಸ್ಪಂದಿಸಿದ್ದಾರೆ ಎಂದು ಮೀನುಗಾರ ಮುಖಂಡರು ತಿಳಿಸಿದ್ದಾರೆ.

ನಿಯೋಗದಲ್ಲಿ ಅಖಿಲ ಭಾರತ ಮೀನುಗಾರ ವೇದಿಕೆ ಅಧ್ಯಕ್ಷ ವೆಲ್ಜಿಭಾಯಿ ಮಸಾನಿ, ಸಂಸದರಾದ ನಳಿನ್‌ ಕುಮಾರ್‌ ಕಟೀಲ್‌, ಶೋಭಾ ಕರಂದ್ಲಾಜೆ, ಶಾಸಕ ಕೆ. ರಘುಪತಿ ಭಟ್‌, ಉಡುಪಿ ದಕ್ಷಿಣ ಕನ್ನಡ ಮೀನು ಮಾರಾಟ ಫೆಡರೇಶನ್‌ ಅಧ್ಯಕ್ಷ ಯಶ್‌ಪಾಲ್‌ ಸುವರ್ಣ, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಸತೀಶ್‌ ಕುಂದರ್‌, ಮಖಂಡರಾದ ದಯಾನಂದ ಸುವರ್ಣ, ಕರುಣಾಕರ ಸಾಲ್ಯಾನ್‌, ಕಿಶೋರ್‌ ಸುವರ್ಣ, ಅನಿಲ್ ಇದ್ದರು.

ನಾಪತ್ತೆಯಾದವರ ಪಟ್ಟಿ ನೀಡಲು ಸೂಚನೆ

ನಾಪತ್ತೆಯಾಗಿರುವ ಮೀನುಗಾರರ ಕುಟುಂಬಕ್ಕೆ ರಾಜ್ಯ ಸರ್ಕಾರ ತಾತ್ಕಾಲಿಕವಾಗಿ ₹ 1 ಲಕ್ಷ ಪರಿಹಾರ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ನಾಪತ್ತೆಯಾದ ಮೀನುಗಾರರ ವಿವರಗಳನ್ನು ಮುಖ್ಯಮಂತ್ರಿ ಕಚೇರಿಗೆ ಸಲ್ಲಿಸುವಂತೆ ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲಾ ತಿಳಿಸಿದ್ದಾರೆ.

ಮೀನುಗಾರರನ್ನು ಕಡಲ್ಗಳ್ಳರು ಅಥವಾ ಭಯೋತ್ಪಾದಕರು ಅಪಹರಿಸಿರುವ ಶಂಕೆ ಇದ್ದು, ಈ ಸಂಬಂಧ ಮುಖ್ಯಮಂತ್ರಿ ಕುಮಾರಸ್ವಾಮಿ ಕೇಂದ್ರದ ಗೃಹಸಚಿವರೊಂದಿಗೆ ಮಾತನಾಡಿ ಅಗತ್ಯ ನೆರವಿಗೆ ಮನವಿ ಮಾಡಿದ್ದಾರೆ. ಮೀನುಗಾರರು ಪತ್ತೆಯಾಗುವವರೆಗೂ ಶೋಧ ಕಾರ್ಯ ನಡೆಯಲಿದೆ ಎಂದು ಸಚಿವರು ತಿಳಿಸಿದ್ದಾರೆ.

ಪ್ರಧಾನಿಗೆ ಪೇಜಾವರ ಶ್ರೀ ಇ–ಮೇಲ್‌

ಮೀನುಗಾರರನ್ನು ಸುರಕ್ಷಿತವಾಗಿ ಕರೆತರಲು ಕೇಂದ್ರ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳು ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ರಾಜನಾಥ್ ಸಿಂಗ್ ಹಾಗೂ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಇ ಮೇಲ್ ರವಾನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT