ಸೋಮವಾರ, ಆಗಸ್ಟ್ 26, 2019
20 °C
ರಾಷ್ಟ್ರಧ್ವಜಕ್ಕೂ ಗೌರವ, ಪರಿಸರಕ್ಕೂ ಹಾನಿ ಇಲ್ಲ

ಉಡುಪಿಯಲ್ಲಿ ಪರಿಸರ ಸ್ನೇಹಿ ತ್ರಿವರ್ಣ

Published:
Updated:
Prajavani

ಉಡುಪಿ: ಸ್ವಾತಂತ್ರ್ಯ ದಿನಾಚರಣೆಯ ದಿನ ಪ್ಲಾಸ್ಟಿಕ್‌ ತ್ರಿವರ್ಣ ಧ್ವಜಗಳ ಹಾವಳಿ ತಡೆಯುವ ಉದ್ದೇಶದಿಂದ ಉಡುಪಿಯ ಉದ್ಯಮಿ ಮಹೇಶ್‌ ಶೆಣೈ ಕಾಗದ ಹಾಗೂ ಹೂವಿನ ಬೀಜದಿಂದ ತಯಾರಿಸಿದ ಪರಿಸರ ಸ್ನೇಹಿ ತ್ರಿವರ್ಣ ಧ್ವಜವನ್ನು ತಯಾರಿಸಿದ್ದಾರೆ.

ಈ ಮೂಲಕ ದೇಶಪ್ರೇಮವನ್ನು ಜಾಗೃತಗೊಳಿಸುವುದರ ಜತೆಗೆ, ಪರಿಸರ ಸ್ನೇಹಿ ಸ್ವಾತಂತ್ರ್ಯ ದಿನಾಚರಣೆಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ವಿಭಿನ್ನ ಪರಿಕಲ್ಪನೆಯ ಕುರಿತು ಉದ್ಯಮಿ ಮಹೇಶ್‌ ಶೆಣೈ ‘ಪ್ರಜಾವಾಣಿ’ ಜತೆ ಮಾತನಾಡಿದರು. 

‘ಸ್ವಾತಂತ್ರ್ಯೋತ್ಸವ ದಿನ ಮಕ್ಕಳು ಬಾವುಟಗಳನ್ನು ಹಿಡಿದು ಸಂಭ್ರಮಿಸುವುದನ್ನು ನೋಡುವುದೇ ಚೆಂದ. ಆದರೆ, ಸಂಭ್ರಮ ಮುಗಿದ ಕೂಡಲೇ ಮಕ್ಕಳು ಬಾವುಟಗಳನ್ನು ರಸ್ತೆ, ಕೊಳಚೆ ಎನ್ನದೆ ಎಲ್ಲೆಂದರಲ್ಲಿ ಬಿಸಾಡಿ ಮನೆಗೆ ಹೋಗುತ್ತಾರೆ. ಪ್ರತಿವರ್ಷ ಇಂತಹ ದೃಶ್ಯಗಳು ಮನಸ್ಸಿಗೆ ನೋವುಟು ಮಾಡುತ್ತಿದ್ದವು.

ಒಂದುಕಡೆ ರಾಷ್ಟ್ರಧ್ವಜಕ್ಕೆ ಅಗೌರವವಾದರೆ, ಮತ್ತೊಂದು ಕಡೆ ಪರಿಸರಕ್ಕೂ ಹಾನಿಯಾಗುತ್ತಿತ್ತು. ಇದನ್ನು ತಡೆಯುವ ಉದ್ದೇಶದಿಂದ ಮುಂಬೈನಿಂದ ಪರಿಸರ ಸ್ನೇಹಿ ಬಾವುಟಗಳನ್ನು ತರಿಸಿಕೊಳ್ಳಲಾಗಿದೆ ಎನ್ನುತ್ತಾರೆ ಮಹೇಶ್‌.

ಈ ಪರಿಸರ ಸ್ನೇಹಿ ತ್ರಿವರ್ಣ ಧ್ವಜವು 2.4 ಸೆ.ಮೀ. ಉದ್ದ ಹಾಗೂ 4 ಸೆ.ಮೀ. ಅಗಲ ಇದೆ. ಇದನ್ನು ಪೇಪರ್‌ ಹಾಗೂ ಗೊಂಡೆ ಹೂವಿನ ಬೀಜಗಳನ್ನು ಬಳಸಿ ತಯಾರಿಸಲಾಗಿದೆ. ಜತೆಗೆ, ನೈಸರ್ಗಿಕ ಬಣ್ಣವನ್ನು ಬಳಸಲಾಗಿದೆ.

ಸ್ವಾತಂತ್ರ್ಯೋತ್ಸವ ಸಂಭ್ರಮ ಮುಗಿದ ನಂತರ ಈ ಬಾವುಟವನ್ನು ಎಲ್ಲೆಂದರಲ್ಲಿ ಬಿಸಾಡುವ ಬದಲು ಮಣ್ಣಿನಲ್ಲಿ ವಿಲೀನಗೊಳಿಸಬಹುದು. ಅದರಿಂದ ಹೂವಿನ ಗಿಡಗಳು ಬೆಳೆಯುತ್ತದೆ. ಹೂಗಳನ್ನು ಕಂಡಾಗಲೆಲ್ಲ  ಸ್ವಾತಂತ್ರ್ಯೋತ್ಸವ ದಿನದ ಸಂಭ್ರಮ ನೆನಪಾಗುತ್ತದೆ. ಜತೆಗೆ ಮಕ್ಕಳಲ್ಲಿ ಪರಿಸರ ಕಾಳಜಿಯನ್ನೂ ಬೆಳೆಸಿದಂತಾಗುತ್ತದೆ ಎನ್ನುತ್ತಾರೆ ಮಹೇಶ್‌.

ಮುಂಬೈನಿಂದ ಸುಮಾರು 400 ಬಾವುಟಗಳನ್ನು ತರಿಸಿಕೊಳ್ಳಲಾಗಿದೆ. ಈಗಾಗಲೇ 200 ಧ್ವಜಗಳು ಮಾರಾಟವಾಗಿದೆ ಎಂದು ಮಹೇಶ್‌ ಶೆಣೈ ಮಾಹಿತಿ ನೀಡಿದರು.

ದೊಡ್ಡಗಾತ್ರದ ಬಾವುಟಕ್ಕೆ ₹ 12 ಹಾಗೂ ಸಣ್ಣ ಗಾತ್ರದಕ್ಕೆ ₹ 6 ದರವಿದೆ. ಶಾಲಾ ಕಾಲೇಜುಗಳಲ್ಲಿ ಮಕ್ಕಳಿಗೆ ಪರಿಸರ ಸ್ನೇಹಿ ಬಾವುಟಗಳನ್ನು ಖರೀದಿಸಿ ವಿತರಿಸಿದರೆ ದೇಶಪ್ರೇಮವೂ ಜಾಗೃತವಾಗುತ್ತದೆ. ಪರಿಸರವೂ ರಕ್ಷಣೆ ಮಾಡಿದಂತಾಗುತ್ತದೆ ಎಂದರು. 

Post Comments (+)