ಉಡುಪಿ: ಆನ್‌ಲೈನ್ ಶಿಕ್ಷಣ ಪಡೆಯುತ್ತಿದ್ದರೂ ಸಾಲ

ಉಡುಪಿ: ಕೋವಿಡ್ ಸೋಂಕಿನ ಕಾರಣದಿಂದ ರಾಜ್ಯದಲ್ಲಿ ಶಾಲಾ–ಕಾಲೇಜುಗಳು ಆರಂಭವಾಗದಿದ್ದರೂ ವಿದ್ಯಾರ್ಥಿಗಳು ಶೈಕ್ಷಣಿಕ ಸಾಲ ಪಡೆಯಲು ಅಡ್ಡಿ ಇಲ್ಲ. ಆನ್‌ಲೈನ್ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಕೂಡ ಅಗತ್ಯ ದಾಖಲಾತಿಗಳನ್ನು ಸಲ್ಲಿಸಿ ಬ್ಯಾಂಕ್‌ಗಳಿಂದ ಶೈಕ್ಷಣಿಕ ಸಾಲ ಪಡೆಯಬಹುದು.
ಕೊರೊನಾದಿಂದಾಗಿ ಈ ವರ್ಷ ಉನ್ನತ ಶಿಕ್ಷಣ ಪಡೆಯಲು ಬ್ಯಾಂಕ್‌ಗಳಲ್ಲಿ ಶೈಕ್ಷಣಿಕ ಸಾಲ ಸಿಗುವುದೊ, ಇಲ್ಲವೊ. ಕಾಲೇಜು ಆರಂಭವಾಗದಿದ್ದರೂ ಸಾಲ ಪಡೆಯಲು ಸಾದ್ಯವೇ ಎಂಬ ಗೊಂದಲಗಳಿದ್ದವು. ಈ ವರ್ಷ ಶೈಕ್ಷಣಿಕ ಸಾಲ ಸಿಗುವುದಿಲ್ಲ ಎಂಬ ವದಂತಿಗಳು ಹಬ್ಬಿದ್ದವು. ಈ ಬಗ್ಗೆ ವಿದ್ಯಾರ್ಥಿಗಳಲ್ಲಿ ಆತಂಕಬೇಡ. ಪ್ರತಿ ವರ್ಷದಂತೆ ಈ ವರ್ಷವೂ ಶೈಕ್ಷಣಿಕ ಸಾಲ ನೀಡಲಾಗುತ್ತಿದೆ ಎಂದು ಲೀಡ್ ಬ್ಯಾಂಕ್ ಮ್ಯಾನೇಜರ್ ಟಿ.ಸಿ. ರುದ್ರೇಶ್ ತಿಳಿಸಿದರು.
ಶಿಕ್ಷಣ ಸಂಸ್ಥೆಗಳು ಆನ್‌ಲೈನ್ ಶಿಕ್ಷಣ ನೀಡಲು ದಾಖಲಾತಿ ಆರಂಭಿಸಿರುವ ಕುರಿತು ಮಾಹಿತಿ, ಪ್ರಸಕ್ತ ಸಾಲಿನಲ್ಲಿ ವಿದ್ಯಾರ್ಥಿಯ ಶಿಕ್ಷಣಕ್ಕೆ ತಗುಲುವ ಅಂದಾಜು ವೆಚ್ಚದ ವಿವರ ಹಾಗೂ ಕಾಲೇಜಿಗೆ ಸೇರಿದ ದಾಖಲಾತಿಗಳನ್ನು ವಿದ್ಯಾರ್ಥಿಗಳು ಬ್ಯಾಂಕ್‌ಗೆ ಸಲ್ಲಿಸಿದರೆ ಸಾಲ ಮಂಜೂರಾಗಲಿದೆ ಎಂದು ತಿಳಿಸಿದರು.
ಪ್ರತಿವರ್ಷ ಸಿಇಟಿ ಫಲಿತಾಂಶ ಪ್ರಕಟವಾದ ಕೂಡಲೇ ಮೆಡಿಕಲ್, ಎಂಜಿನಿಯರಿಂಗ್ ಸೇರುವ ವಿದ್ಯಾರ್ಥಿಗಳು ಹೆಚ್ಚಾಗಿ ಶೈಕ್ಷಣಿಕ ಸಾಲಕ್ಕೆ ಅರ್ಜಿ ಹಾಕುತ್ತಿದ್ದರು. ಆದರೆ, ಈ ವರ್ಷ ಕೆಲವು ಕಾಲೇಜುಗಳು ದಾಖಲಾತಿ ಆರಂಭಿಸದ ಕಾರಣ ನಿರೀಕ್ಷಿತ ಪ್ರಮಾಣದಲ್ಲಿ ಸಾಲಕ್ಕಾಗಿ ಅರ್ಜಿಗಳು ಬಂದಿಲ್ಲ.
ಉಡುಪಿ ಜಿಲ್ಲೆಯಲ್ಲಿ 2020–21ನೇ ಸಾಲಿನಲ್ಲಿ ₹ 160 ಕೋಟಿ ಶೈಕ್ಷಣಿಕ ಸಾಲ ವಿತರಣೆ ಗುರಿ ಹೊಂದಿದ್ದು, ಇಲ್ಲಿಯವರೆಗೂ ಸಾಲಕ್ಕಾಗಿ ಶೇ 30ರಿಂದ 40ರಷ್ಟು ಅರ್ಜಿಗಳು ಬಂದಿವೆ ಎಂದು ಮಾಹಿತಿ ನೀಡಿದರು.
ಬ್ಯಾಂಕ್‌ಗಳು ಆದ್ಯತೆಯ ಮೇಲೆ ಶೇ 9 ರಿಂದ 11ರ ಬಡ್ಡಿದರದಲ್ಲಿ ಸಾಲ ನೀಡುತ್ತಿವೆ. ದೇಶದೊಳಗಿನ ವಿದ್ಯಾಸಂಸ್ಥೆಗಳಲ್ಲಿ ಪ್ರವೇಶಾತಿ ಪಡೆಯಲು ₹ 10 ಲಕ್ಷ, ವಿದೇಶಗಳಲ್ಲಿ ಅಧ್ಯಯನ ಮಾಡಲು ₹ 20 ಲಕ್ಷ ಅಥವಾ ಅದಕ್ಕಿಂತಲೂ ಹೆಚ್ಚು ಸಾಲ ಪಡೆಯಬಹುದು. ಕೋರ್ಸ್ ಹಾಗೂ ಮರುಪಾವತಿ ಸಾಮರ್ಥ್ಯದ ಮೇಲೆ ಸಾಲ ವಿತರಣೆಯಾಗಲಿದೆ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.