ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇವಂತಿಗೆ ತಂದ ಖುಷಿ

Last Updated 2 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಸುಸ್ಥಿರ ಹಾಗೂ ನೆಮ್ಮದಿಯ ಜೀವನ ಸಾಗಿಸಲು ಉನ್ನತ ವಿದ್ಯಾಭ್ಯಾಸ ಬೇಕೆಂದಿಲ್ಲ, ಯೋಜನೆ ಹಾಗೂ ದೃಢ ನಿರ್ಧಾರವಿದ್ದಲ್ಲಿ ಏನನ್ನಾದರೂ ಸಾಧಿಸಬಹುದೆಂಬುದಕ್ಕೆ ಉದಾಹರಣೆ, ಕೆ.ಆರ್.ಪೇಟೆ ತಾಲ್ಲೂಕಿನ ವಡ್ಡರಗುಡಿಯ ಅನಿಲ್ ಕುಮಾರ್ ವಿ.ಎನ್‍.

ಬಾಲ್ಯದಲ್ಲಿ ವಿದ್ಯಾಭ್ಯಾಸ ತಲೆಗೆ ಹತ್ತಲಿಲ್ಲವಾದ್ದರಿಂದ ವಿದ್ಯೆಗೂ ನನಗೂ ಆಗಿ ಬರುವುದಿಲ್ಲವೆಂದು ನಿರ್ಧರಿಸಿದ ಇವರು ಏಳನೇ ತರಗತಿಯಲ್ಲೇ ವಿದ್ಯಾಭ್ಯಾಸಕ್ಕೆ ಗುಡ್‍ಬೈ ಹೇಳಿದರು. ನಂತರ ಜೀವನ ನಿರ್ವಹಣೆಗೆ ಆಯ್ದುಕೊಂಡಿದ್ದು ಬೆಂಗಳೂರನ್ನು. ಇಲ್ಲಿ ರಾತ್ರಿ ಹಗಲು ದುಡಿದರೂ ಸಂಪಾದನೆ ಕೈಸೇರಲಿಲ್ಲ. ನಂತರ ಹೋಟೆಲ್ ಒಂದರಲ್ಲಿ ಕ್ಲೀನರ್ ಆಗಿ, ದಿನಕ್ಕೆ ₹ 450 ಪಡೆಯುವ ಕೂಲಿ ಕೆಲಸಕ್ಕೆ ಸೇರಿದರು.

ಆದರೆ ಇದಾವುದೂ ನೆಮ್ಮದಿ ನೀಡಲಿಲ್ಲ. ವಿದ್ಯೆಯಿಲ್ಲದಿದ್ದರೂ ಏನನ್ನಾದರೂ ಸಾಧನೆ ಮಾಡಲೇಬೇಕೆಂಬ ಅದಮ್ಯ ಉತ್ಸಾಹ ಮನದಾಳದಲ್ಲಿ ಟಿಸಿಲೊಡೆದಿತ್ತು. ಊರಲ್ಲಿ ತಂದೆ ತೀರಿಕೊಂಡಾಗ, ಮರಳಿ ಗೂಡಿಗೆ ಎಂಬಂತೆ ಮತ್ತೆ ಊರಿಗೆ ವಾಪಸ್ಸಾದರು. ಆಗಲೇ ಅವರಲ್ಲಿ ಕೃಷಿಯ ಆಲೋಚನೆ ಹೊಳೆದದ್ದು. ತಂದೆ ಹೆಸರಲ್ಲಿದ್ದ ಎರಡು ಎಕರೆ ಜಮೀನಿನಲ್ಲಿ ಕೃಷಿ ಮಾಡಲು ನಿರ್ಧರಿಸಿದರು.

‘ಹೂವಿನ ಕೃಷಿ ಮಾಡಬೇಕೆಂದು ಅನ್ನಿಸಿತ್ತು. ಅದರಂತೆ ಎರಡು ಎಕರೆ ಜಮೀನಿನ ಪೈಕಿ ಹದಿನೈದು ಗುಂಟೆ ಜಮೀನಿನಲ್ಲಿ ಸೇವಂತಿಗೆ ಕೃಷಿ ಮಾಡಲು ನಿರ್ಧರಿಸಿದೆ. ಬೈಕನ್ನು ಮಾರಿ ಅದರಿಂದ ಬಂದ ಹಣದಿಂದ ಒಂದು ಕೊಳವೆ ಬಾವಿ ತೆಗೆಸಿದೆ. ಕೃಷಿ ಅಭಿವೃದ್ಧಿಗಾಗಿ ಸ್ಥಳೀಯ ಕೃಷಿ ಪತ್ತಿನ ಸಹಕಾರ ಸಂಘದಿಂದ ₹ 40 ಸಾವಿರ ಸಾಲ ಪಡೆದು ಕೃಷಿ ಕೈಗೊಂಡೆ’ ಎಂದು ವಿವರಿಸಿದರು ಅನಿಲ್.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಸುಮಾರು ಆರು ಮಂದಿ ಯುವ ರೈತರು ಸೇರಿ ಸ್ನೇಹ ಪ್ರಗತಿಬಂಧು ಸಂಘ ರಚಿಸಿಕೊಂಡರು. ಮುಯ್ಯಾಳು ಪದ್ಧತಿಯಂತೆ ಪರಸ್ಪರ ಕೃಷಿ ಜಮೀನಿನ ಕೆಲಸವನ್ನು ಸಂಘದ ಸದಸ್ಯರೇ ಸೇರಿ ನಿರ್ವಹಿಸುವ ಮೂಲಕ ಕೃಷಿಗೆ ಇದ್ದ ಕೂಲಿ ಕಾರ್ಮಿಕರ ಸಮಸ್ಯೆಗೆ ಶಾಶ್ವತವಾದ ಪರಿಹಾರವನ್ನು ಕಂಡುಕೊಂಡರು.

ಪ್ರಗತಿಪರ ಪುಷ್ಪ ಕೃಷಿಕ: ಚಿಕ್ಕಪ್ಪ ರಾಮಚಂದ್ರು ಅವರು ಸುಮಾರು ಒಂಬತ್ತು ವರ್ಷ ಗಳಿಂದ ಸೇವಂತಿಗೆ ಕೃಷಿ ಮಾಡುತ್ತಿದ್ದವರು. ಅದನ್ನು ಕಂಡಿದ್ದ ಅನಿಲ್ ಅವರೂ ಸೇವಂತಿಗೆ ಕೃಷಿಗೆ ಮುಂದಾದರು. ಚಿಕ್ಕಮಗಳೂರಿನ ಕಡೂರಿನಿಂದ ‘ರೆಡ್‍ಬಟನ್’ ಹಾಗೂ ಚಿತ್ರದುರ್ಗದಿಂದ ‘ವೈಟ್’ ತಳಿಯನ್ನು ತಂದು ನಾಟಿಯನ್ನು ಮಾಡಿ ಅದಕ್ಕೆ ಹೇರಳವಾಗಿ ಕೊಟ್ಟಿಗೆ ಗೊಬ್ಬರ ಹಾಗೂ ರಸಗೊಬ್ಬರವನ್ನು ನೀಡಿದರು.

‘ಸಸಿಗಳ ನಾಟಿಗೆ ಫೆಬ್ರುವರಿ-ಮಾರ್ಚ್ ತಿಂಗಳು ಪ್ರಶಸ್ತವಾಗಿದ್ದು, ನಾಟಿಯಾದ 45 ದಿನಕ್ಕೇ ಹೂವು ಬಿಡಲಾರಂಭಿಸುತ್ತದೆ. ಗಿಡಗಳ ಆಯಸ್ಸು ಸರಾಸರಿ ಒಂಬತ್ತು ತಿಂಗಳು ಇದ್ದು, ಸುಮಾರು 15-20 ಬಾರಿ ಕಟಾವಿಗೆ ಹೂವು ದೊರೆಯುತ್ತದೆ. ಇದಕ್ಕೆ ನೀರಿನ ಅವಶ್ಯಕತೆ ತುಂಬಾ ಕಡಿಮೆಯಿದ್ದು, ಹೊಸದಾಗಿ ನಾಟಿ ಮಾಡಿದ ಸಸಿಗಳನ್ನು ಪುಷ್ಪ ಕೃಷಿಯಲ್ಲಿ ತೆನೆ ಸಸಿಯೆಂದೂ, ಪ್ರಥಮ ಇಳುವರಿಯ ನಂತರ ಕಾಂಡವನ್ನು ಕತ್ತರಿಸಿ ಮತ್ತೆ ಚಿಗುರಿದ ಗಿಡವನ್ನು ಕೂಳೆ ಸಸಿಯೆಂದೂ ಕರೆಯಲಾಗುತ್ತದೆ. ತೆನೆ ಸಸಿಯಲ್ಲಿ ಹೂವು ಅತ್ಯಂತ ಗುಣಮಟ್ಟದಿಂದ ಕೂಡಿ ದೊಡ್ಡ ಗಾತ್ರದ ಹೂವುಗಳನ್ನು ಬಿಡುತ್ತದೆ. ಇನ್ನು ಕೂಳೆ ಸಸಿಯಲ್ಲಿ ಎರಡನೇ ಹಂತದ ಇಳುವರಿಯಾಗಿದ್ದು ಇದರಲ್ಲಿ ಇಳುವರಿ ಜಾಸ್ತಿಯಿದ್ದರೂ ಹೂವಿನ ಗಾತ್ರ ಹಾಗೂ ಗುಣಮಟ್ಟ ಸ್ವಲ್ಪ ಕಡಿಮೆಯಿರುತ್ತದೆ. ಆದರೂ ಬೆಲೆಗೆ ಅಡ್ಡಿಯಿಲ್ಲ’ ಎಂದು ಲಾಭದ ಕುರಿತು ಮಾತನಾಡಿದರು.

ಒಂದು ಬಾರಿ ತೆನೆ ಸಸಿಯನ್ನು ನಾಟಿ ಮಾಡಿದರೆ ಎರಡನೇ ಬಾರಿಗೆ ಕಾಂಡ ಕತ್ತರಿಸಿ ಕೂಳೆ ಸಸಿಯಿಂದ ಪರಿಣಾಮಕಾರಿ ಹಾಗೂ ಕಡಿಮೆ ಖರ್ಚಿನಲ್ಲಿ ಅಧಿಕ ಇಳುವರಿ ತೆಗೆಯುತ್ತಿದ್ದಾರೆ. ಹೂವು ಬಿಡುವ ಒಂದು ತಿಂಗಳು ಮೊದಲೇ ಸಸಿಗಳಿಗೆ ಗೊಬ್ಬರ ನಿಲ್ಲಿಸುವ ಇವರು, ಇಳುವರಿ ಅಂತ್ಯಗೊಳ್ಳುವ ಒಂದು ತಿಂಗಳು ಮುಂಚಿತವಾಗಿ ಮತ್ತೆ ಗೊಬ್ಬರ ಪ್ರಾರಂಭಿಸುತ್ತಾರೆ. ಇದರಿಂದ ಕೂಳೆ ಸಸಿಯು ಸೊಂಪಾಗಿ ಬೆಳೆಯಲು ಸಹಾಯವಾಗುತ್ತದೆ. ಹೂವು ಬಿಡುವ ಸಂದರ್ಭದಲ್ಲಿ ಗೊಬ್ಬರ ನೀಡಿದ ಪಕ್ಷದಲ್ಲಿ ಇಳುವರಿಯಲ್ಲಿ ಗಣನೀಯ ಇಳಿಕೆಯಾಗುತ್ತದೆ ಎನ್ನುತ್ತಾರೆ.

‘ಹೂವಿನ ಕಟಾವು ಹಾಗೂ ಹೂವನ್ನು ಕಟ್ಟುವ ಕೆಲಸಕ್ಕಾಗಿ ಕೂಲಿ ಆಳುಗಳನ್ನು ನಿಯೋಜಿಸಿದ್ದೇನೆ. ಕೂಲಿ, ನಿರ್ವಹಣಾ ವೆಚ್ಚವಾಗಿ ₹30ಸಾವಿರದಷ್ಟು ಮೊತ್ತವನ್ನು ಪಾವತಿಸಿದ್ದು, ಇದರಿಂದ ಕನಿಷ್ಠ ₹1.10 ಲಕ್ಷದಷ್ಟು ನಿವ್ವಳ ಲಾಭವನ್ನು ಗಳಿಸಿದ್ದೇನೆ. ₹450 ದಿನಗೂಲಿಗೆ ಕೆಲಸ ಮಾಡುತ್ತಿದ್ದೆ. ಇಂದು ನಾನೇ ಸಾವಿರದಷ್ಟು ಕೂಲಿಯನ್ನು ಆಳುಗಳಿಗೆ ನೀಡುತ್ತಿದ್ದೇನೆ’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ಹಬ್ಬ ಹರಿದಿನಗಳು ಹಾಗೂ ವಿಶೇಷ ಸಂದರ್ಭಗಳಲ್ಲಿ ಹೂವಿನ ಮಂಡಿಯ ಮಾಲೀಕರೇ ಕೃಷಿ ಜಮೀನಿಗೆ ಬಂದು ಹೂವನ್ನು ಖರೀದಿಸುತ್ತಾರೆ. ಉಳಿದ ದಿನಗಳಲ್ಲಿ ಹಾಸನ, ಮೈಸೂರು ಮತ್ತು ಕೆ.ಆರ್.ಪೇಟೆಯ ಬಲ್ಲೇನಹಳ್ಳಿಯ ಹೂವಿನ ಮಾರುಕಟ್ಟೆಗೆ ಸ್ವತಃ ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತಾರೆ. ತನ್ನ ಉಳಿದ ಜಮೀನಿನಲ್ಲಿ ‘ಪಚ್ಚೆ’, ‘ಚಾಂದಿನಿ’ ಮತ್ತು ‘ಪೂರ್ಣಿಮಾ’ ತಳಿಯ ಸೇವಂತಿಗೆ, ‘ಚಿಂತಾಮಣಿ’ ತಳಿಯ ಚೆಂಡು ಹೂವು, ಕುಂಬಳ ಕಾಯಿ, ಕೋಸು, ಗೆಣಸು ಮತ್ತು ನೀರಿನ ಲಭ್ಯತೆಯಿದ್ದಲ್ಲಿ ಭತ್ತವನ್ನು ಬೆಳೆಯುವ ಮೂಲಕ ಸಮಗ್ರ ಕೃಷಿ ಪದ್ಧತಿ ಅನುಸರಿಸುತ್ತಿದ್ದಾರೆ. ಬಾಳೆ ಕೃಷಿ ಕೂಡ ಇವರ ಕೈಹಿಡಿದಿದೆ.

ಮರಳಿ ಹಳ್ಳಿಗೆ ಬಂದು ಕೃಷಿಯಲ್ಲಿ ಯಶಸ್ಸು ಕಾಣುತ್ತಿರುವ ಅನಿಲ್, ಶಿಕ್ಷಣ ಪಡೆಯದಿದ್ದರೂ ಬುದ್ಧಿವಂತಿಕೆಯಿದ್ದರೆ ಸ್ವಾವಲಂಬಿ ಬದುಕನ್ನು ನಡೆಸಬಹುದು ಎಂಬುದಕ್ಕೆ ತಕ್ಕ ಉದಾಹರಣೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT