ಉಡುಪಿ: ಪ್ರಜಾತಂತ್ರದ ಹಬ್ಬ ಎಂದೇ ಕರೆಯಲಾಗುವ ರಾಜ್ಯ ವಿಧಾನಸಭಾ ಚುನಾವಣೆಗೆ ಮುಹೂರ್ತ ನಿಗದಿಯಾಗಿದ್ದು ಮೇ 10ರಂದು ಚುನಾವಣೆ ನಡೆಯಲಿದ್ದು 13ರಂದು ಫಲಿತಾಂಶ ಹೊರಬೀಳಲಿದೆ. ಚುನಾವಣೆ ಘೋಷಣೆ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಮಾರ್ಚ್ 29ರಿಂದ ಮೇ 15ರವರೆಗೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರಲಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಎಂ.ಕೂರ್ಮಾರಾವ್ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಏ.20ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, 21ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ, 24ರವರೆಗೆ ನಾಮಪತ್ರ ಹಿಂಪಡೆಯಲು ಅವಕಾಶ ಇದೆ. ಮೇ 10ರಂದು ಮತದಾನ ನಡೆಯಲಿದ್ದು, 13ರಂದು ಮತ ಎಣಿಕೆ ನಡೆಯಲಿದೆ ಎಂದು ಚುನಾವಣಾ ಪ್ರಕ್ರಿಯೆ ಕುರಿತು ಮಾಹಿತಿ ನೀಡಿದರು.
ಎಲ್ಲೆಲ್ಲಿ ನಾಮಪತ್ರ ಸಲ್ಲಿಕೆಗೆ ಅವಕಾಶ:
ಬೈಂದೂರು, ಉಡುಪಿ, ಕಾಪು, ಕಾರ್ಕಳ ತಾಲ್ಲೂಕು ಕಚೇರಿಗಳಲ್ಲಿ ಹಾಗೂ ಕುಂದಾಪುರ ಸಹಾಯಕ ಆಯುಕ್ತರ ಕಚೇರಿಯಲ್ಲಿ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಬಹುದು.
ಮತದಾರರ ವಿವರ:
ಉಡುಪಿ ಜಿಲ್ಲೆಯಲ್ಲಿ 4,96,863 ಪುರುಷರು, 5,32,795 ಮಹಿಳೆಯರು ಸೇರಿ 10,29,678 ಮತದಾರರು ಮತ ಚಲಾಯಿಸಲು ಅರ್ಹತೆ ಪಡೆದಿದ್ದು ಚುನಾವಣೆಯ ದಿನ ಎಪಿಕ್ ಕಾರ್ಡ್ ಅಥವಾ ಸರ್ಕಾರ ನಿಗದಿಪಡಿಸಿರುವ ಗುರುತಿನ ಚೀಟಿಗಳಲ್ಲಿ ಯಾವುದಾದರೂ ಒಂದನ್ನು ಅಧಿಕಾರಿಗಳಿಗೆ ತೋರಿಸಿ ಮತದಾನ ಮಾಡಬಹುದು.
ಜಿಲ್ಲೆಯಲ್ಲಿ 17,927 ಯುವ ಮತದಾರರು ಮೊದಲ ಬಾರಿಗೆ ಮತ ಚಲಾಯಿಸುವ ಹಕ್ಕು ಪಡೆದಿದ್ದಾರೆ, 11,751 ಪಿಡಬ್ಲ್ಯುಡಿ ಮತದಾರರು ಇದ್ದಾರೆ, 80 ವರ್ಷ ಮೇಲ್ಪಟ್ಟ 31,268 ಮತದಾರರು ಇದ್ದಾರೆ, 34,787 ಮಂದಿಗೆ ಪಿವಿಸಿ ಮತದಾರರ ಗುರುತಿನ ಚೀಟಿ ತಲುಪಿಸಲಾಗಿದೆ. ಜಿಲ್ಲೆಯಲ್ಲಿ ಮತದಾನ ಮಾಡಲು 1,111 ಮತಗಟ್ಟೆಗಳನ್ನು ತೆರೆಯಲಾಗುವುದು ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಸಭೆ, ಸಮಾರಂಭ, ಧಾರ್ಮಿಕ ಕಾರ್ಯಕ್ರಮಗಳು, ರಾಜಕೀಯ ಸಭೆ, ಪ್ರಚಾರಸಭೆ ನಡೆಸಲು ಸಾರ್ವಜನಿಕರು, ರಾಜಕೀಯ ಮುಖಂಡವರು ಚುನಾವಣಾಧಿಕಾರಿ ಬಳಿ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಪತ್ತೆಗೆ ಹಾಗೂ ಕ್ರಮ ಜರುಗಿಸಲು 15 ಮಂದಿ ವಿಡಿಯೋ ಸರ್ವೆಲೆನ್ಸ್ ತಂಡಗಳು, 45 ಫ್ಲೈಯಿಂಗ್ ಸ್ಕ್ವಾಡ್‌ಗಳು, 17 ಸ್ಟಾಟಿಕ್ ಸರ್ವೆಲೆನ್ಸ್ ತಂಡಗಳು, 92 ಸೆಕ್ಟರ್ ಅಧಿಕಾರಿಗಳ ತಂಡ, 3 ವಿಡಿಯೋ ವ್ಯೂವಿಂಗ್ ತಂಡ, 5 ಎಂಸಿಸಿ ನೋಡೆಲ್ ಅಧಿಕಾರಿಗಳ ತಂಡ, 5 ಖರ್ಚು ವೆಚ್ಚ ನಿಗಾ ತಂಡಗಳನ್ನು ರಚಿಸಲಾಗಿದೆ.
ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಚುನಾವಣೆಯ ಸಂಬಂಧ ದೂರುಗಳನ್ನು ಸ್ವೀಕರಿಸಲು ನೀತಿಸಂಹಿತೆ ಉಲ್ಲಂಘನೆಯಾಗಿದ್ದು ಕಂಡುಬಂದರೆ ಸಾರ್ವಜನಿಕರು ಲಿಖಿತ ಅಥವಾ 1950 ಟೋಲ್ ಪ್ರೀ ನಂಬರ್ ಅಥವಾ 0820-2574991 ಕರೆ ಮಾಡಿ ದೂರು ನೀಡಬಹುದು. ಸಹಾಯವಾಣಿ ಕೇಂದ್ರ 24 ಗಂಟೆ ಕಾರ್ಯ ನಿರ್ವಹಿಸಲಿದೆ. ಸಾರ್ವಜನಿಕರು ಚುನಾವಣೆಗೆ ಸಂಬಂಧಿಸಿದ ಅಗತ್ಯ ಮಾಹಿತಿಗಳನ್ನು ಇಲ್ಲಿ ಪಡೆಯಬಹುದು.
ನೀತಿ ಸಂಹಿತೆ ಉಲ್ಲಂಘನೆಯ ದೂರುಗಳನ್ನು ಚುನಾವಣಾ ಆಯೋಗದ ಸಿ ವಿಜಿಲ್ ಆ್ಯಪ್ ಮೂಲಕವೂ ಸಲ್ಲಿಸಬಹುದು. ಸಾರ್ವಜನಿಕರು ಪೋಟೋ ಹಾಗೂ ವಿಡಿಯೋಗಳನ್ನು ತೆಗೆದು ಆ್ಯಪ್‌ಗೆ ಅಪ್‌ಲೋಡ್ ಮಾಡಿ ದೂರು ದಾಖಲಿಸಬಹುದು ಎಂದರು.
ಮಾದರಿ ನೀತಿ ಸಂಹಿತೆ ಕುರಿತು ರಾಜಕೀಯ ಪಕ್ಷಗಳಿಗೆ ಮಾಹಿತಿ ನೀಡಲಾಗುವುದು, ರಾತ್ರಿ 10 ರಿಂದ ಬೆಳಿಗ್ಗೆ 6ರವರೆಗೆ ಧ್ವನಿವರ್ಧಕ ಬಳಸುವಂತಿಲ್ಲ. ಮದುವೆ, ನಾಮಕರಣ, ಮೆಹಂದಿ ಸೇರಿದಂತೆ ಖಾಸಗಿ ಸಮಾರಂಭಗಳಲ್ಲಿ ಹಾಗೂ ರಥೋತ್ಸವ, ನೇಮೋತ್ಸವ, ಯಕ್ಷಗಾನ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ರಾಜಕೀಯ ನಾಯಕರು ಮತಯಾಚನೆ ಮಾಡುವಂತಿಲ್ಲ ಎಂದು ಎಚ್ಚರಿಕೆ ನೀಡಿದರು.
ಅಕ್ರಮ ಹಣ, ಮದ್ಯ ಸಾಗಣೆ ತಡೆಗೆ ಜಿಲ್ಲೆಯಲ್ಲಿ 17 ಕಡೆಗಳಲ್ಲಿ ಚೆಕ್‌ಪೋಸ್ಟ್ ನಿರ್ಮಾಣ ಮಾಡಲಾಗಿದೆ. ಬೈಂದೂರು ತಾಲ್ಲೂಕಿನ ಶಿರೂರು, ಕೊಲ್ಲೂರು, ಹೊಸಂಗಡಿ, ಕುಂದಾಪುರ ತಾಲ್ಲೂಕಿನ ಹಾಲಾಡಿ, ಕಂಡ್ಲೂರು, ತೆಕ್ಕಟ್ಟೆ, ಉಡುಪಿ ತಾಲ್ಲೂಕಿನ ನೇಜಾರು, ಬಲೈಪಾದೆ, ಉದ್ಯಾವರ, ಅಲೆವೂರು, ಕಾಪು ತಾಲ್ಲೂಕಿನ ಕಟಪಾಡಿ, ಹೆಜಮಾಡಿ, ಮೂಡುಬೆಳ್ಳೆ, ಅಂಜಾರು, ಕಾರ್ಕಳ ತಾಲ್ಲೂಕಿನ ನಾಡ್ಪಾಲು, ಸೋಮೇಶ್ವರ, ಸಾಣೂರು, ಮುರತಂಗಡಿ, ಈದು, ಹೊಸ್ಮಾರು, ಬೆಳ್ಮಣ್ಣುವಿನಲ್ಲಿ ಚೆಕ್‌ಪೋಸ್ಟ್ ತೆರೆಯಲಾಗುತ್ತಿದೆ ಎಂದು ಎಸ್‌ಪಿ ಹಾಕೆ ಅಕ್ಷಯ್ ಮಚ್ಚಿಂದ್ರ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಇದುವರೆಗೂ 4 ಪ್ರಕರಣಗಳಲ್ಲಿ ದಾಖಲೆಗಳಿಲ್ಲದೆ ಹಣ ಸಾಗಾಟ ಮಾಡುತ್ತಿದ್ದ 42 ಲಕ್ಷ ವಶಪಡಿಸಿಕೊಳ್ಳಲಾಗಿದೆ. 5,500 ಲೀಟರ್ ಮದ್ಯ ಸಿಕ್ಕಿದೆ. ದಾಖಲೆ ಇಲ್ಲದ 10 ಲಕ್ಷಕ್ಕಿಂತ ಹೆಚ್ಚಿನ ಮೊತ್ತ ಸಿಕ್ಕರೆ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಲಾಗುವುದು. ನ್ಯಾಯಾಲಯಕ್ಕೆ ದಾಖಲೆಗಳನ್ನು ನೀಡಿ ಜಪ್ತಿ ಮಾಡಿಕೊಂಡ ಹಣವನ್ನು ಮರಳಿ ಪಡೆಯಬಹುದು ಎಂದು ಎಸ್‌ಪಿ ತಿಳಿಸಿದರು.
ಅರ್ಹ ಎಲ್ಲರೂ ಮತದಾನ ಮಾಡಬೇಕು, ಹೆಬ್ರಿ ತಾಲ್ಲೂಕಿನ ಮಡಾಮಕ್ಕಿ, ಕುಚ್ಚೂರು ಸೇರಿದಂತೆ ಜಿಲ್ಲೆಯ ಕೆಲವು ಕಡೆಗಳಲ್ಲಿ ಚುನಾವಣಾ ಬಹಿಷ್ಕಾರ ಮಾಡುವ ಮಾಹಿತಿ ಇದ್ದು ಗ್ರಾಮಸ್ಥರ ಮನವೊಲಿಸಿ ಮತದಾನ ಮಾಡಲು ಪ್ರೇರೇಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.
ಈ ಸಂದರ್ಭ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ ಇದ್ದರು.
ಚುನಾವಣಾಧಿಕಾರಿಗಳ ವಿವರ
ಬೈಂದೂರು–ಜಗದೀಶ್ ಗಂಗಣ್ಣನವರ್
ಕುಂದಾಪುರ–ಎಸ್.ಆರ್.ರಶ್ಮಿ
ಉಡುಪಿ–ಎಂ.ಸಿ.ಸೀತಾ
ಕಾಪು–ಪಿ.ಕೆ.ಬಿನೋಯಿ
ಕಾರ್ಕಳ–ಸಿ.ಮದನ್ ಮೋಹನ್
ಉಡುಪಿ ಜಿಲ್ಲೆಯ ಮತದಾರರ ವಿವರ
ಕ್ಷೇತ್ರ–ಪುರುಷರು–ಮಹಿಳೆಯರು–ಲಿಂಗತ್ವ ಅಲ್ಪಸಂಖ್ಯಾತರು–ಒಟ್ಟು
ಬೈಂದೂರು–1,13,758–1,18,962–3–2,32,723
ಕುಂದಾಪುರ–99,577–1,07,625–2–2,07,204
ಉಡುಪಿ–1,03,704–1,10,945–1–2,14,650
ಕಾಪು–89,444–97,233–1,86,681
ಕಾರ್ಕಳ–90,380–98,030–1,88,410
ಯುವ ಮತದಾರರ ವಿವರ
ಬೈಂದೂರು–3,677
ಕುಂದಾಪುರ–3,277
ಉಡುಪಿ–3,437
ಕಾಪು–3,560
ಕಾರ್ಕಳ–3,981
ಪಿಡಬ್ಲ್ಯುಡಿ ಮತದಾರರು
ಬೈಂದೂರು–3,009
ಕುಂದಾಪುರ–2,231
ಉಡುಪಿ–1,805
ಕಾಪು–2,250
ಕಾರ್ಕಳ–2,156
80 ವರ್ಷ ಮೇಲ್ಪಟ್ಟ ಮತದಾರರು
ಬೈಂದೂರು–5,865
ಕುಂದಾಪುರ–6,209
ಉಡುಪಿ–7,827
ಕಾಪು–5,778
ಕಾರ್ಕಳ–5,589
ಮತಗಟ್ಟೆಗಳ ವಿವರ
ಬೈಂದೂರು–246
ಕುಂದಾಪುರ–222
ಉಡುಪಿ–226
ಕಾಪು–208
ಕಾರ್ಕಳ–209
ಚುನಾವಣಾ ಕರ್ತವ್ಯ ಅಧಿಕಾರಿಗಳ ವಿವರ
ಉಡುಪಿ ಜಿಲ್ಲೆ ನೋಡೆಲ್ ಅಧಿಕಾರಿ–ಎಚ್.ಪ್ರಸನ್ನ, ಜಿ.ಪಂ ಸಿಇಒ
ಬೈಂದೂರು–ಭಾರತಿ, ಇಒ ಬೈಂದೂರು
ಕುಂದಾಪುರ–ಮಹೇಶ್ ಹೊಳ್ಳ, ಇಒ
ಉಡುಪಿ–ವಿಜಯಾ, ಇಒ
ಕಾಪು–ಎಚ್.ಡಿ.ನವೀನ್ ಕುಮಾರ್, ಇಒ
ಕಾರ್ಕಳ–ಎಂ.ಎನ್.ಗುರುದತ್, ಇಒ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.