ಗ್ರಾಮ ಪಂಚಾಯಿತಿ ಕ್ಷೇತ್ರಗಳಿಗೆ ಚುನಾವಣೆ: ಜ.2ರಂದು ಚುನಾವಣೆ: ಫಲಿತಾಂಶ 4ಕ್ಕೆ

7
ವೇಳಾಪಟ್ಟಿ ಪ್ರಕಟ

ಗ್ರಾಮ ಪಂಚಾಯಿತಿ ಕ್ಷೇತ್ರಗಳಿಗೆ ಚುನಾವಣೆ: ಜ.2ರಂದು ಚುನಾವಣೆ: ಫಲಿತಾಂಶ 4ಕ್ಕೆ

Published:
Updated:
Deccan Herald

ಉಡುಪಿ: ಜಿಲ್ಲೆಯಲ್ಲಿ ತೆರವುಗೊಂಡಿರುವ ಗ್ರಾಮ ಪಂಚಾಯತ್ ಸ್ಥಾನಗಳಿಗೆ ಚುನಾವಣೆ ನಡೆಸಲು ಚುನಾವಣಾ ಆಯೋಗವು ವೇಳಾಪಟ್ಟಿ ಪ್ರಕಟಿಸಿದೆ. ಅದರಂತೆ ಜ.2ರಂದು ಚುನಾವಣೆ ನಡೆಯಲಿದೆ. ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಡಿ.20 ಕೊನೆಯ ದಿನ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ ತಿಳಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.17ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದ್ದು, ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ ಚುನಾವಣಾಧಿಕಾರಿಗೆ ಸಲ್ಲಿಸಬಹುದು. 21ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂತೆಗೆಯಲು 24ರ ಕೊನೆಯ ದಿನ. ಜ.2ರಂದು ಬೆಳಿಗ್ಗೆ 7ರಿಂದ ಸಂಜೆ 5ವರೆಗೆ ಮತದಾನ ನಡೆಯಲಿದೆ. ಮತ ಎಣಿಕೆ 4ರಂದು ನಡೆಯಲಿದೆ ಎಂದು ಹೇಳಿದರು.

2019ರ ಜನವರಿ-ಫೆಬ್ರವರಿಯಲ್ಲಿ ಅವಧಿ ಮುಕ್ತಾಯವಾಗುವ ಬೈಂದೂರು ತಾಲ್ಲೂಕಿನ ಬೈಂದೂರು, ಯಡ್ತೆರೆ ಮತ್ತು ಕುಂದಾಪುರ ತಾಲ್ಲೂಕಿನ ಗಂಗೊಳ್ಳಿ ಗ್ರಾಮ ಪಂಚಾಯಿತಿಗಳಿಗೆ ಸಾರ್ವತ್ರಿಕ ಚುನಾವಣೆ ನಡೆಸಲಾಗುವುದು ಎಂದು ಎಡಿಸಿ ಹೇಳಿದರು.

ಉಳಿದಂತೆ ಆಕಸ್ಮಿಕವಾಗಿ ತೆರವುಗೊಂಡಿರುವ ಉಡುಪಿ ತಾಲ್ಲೂಕಿನ ಕಡೇಕಾರು, ಹಂದಾಡಿ, ಬಾರಕೂರು, ಯಡ್ತಾಡಿ, ಕಾರ್ಕಳ ತಾಲ್ಲೂಕಿನ ಬೈಲೂರು, ನಿಟ್ಟೆ, ಕುಂದಾಪುರ ತಾಲ್ಲೂಕಿನ ಉಳ್ಳೂರು ಮತ್ತು ಬೈಂದೂರು ತಾಲ್ಲೂಕಿನ ಕೆರ್ಗಾಲು ಗ್ರಾಮ ಪಂಚಾಯ್ತಿಗಳಿಗೆ ಉಪ ಚುನಾವಣೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಕುಂದಾಪುರ ತಾಲ್ಲೂಕಿನ ಗಂಗೊಳ್ಳಿ ಹಾಗೂ ಬೈಂದೂರು, ಯಡ್ತಾರೆ ಗ್ರಾಮ ಪಂಚಾಯಿತಿ ಕ್ಷೇತ್ರಗಳಿಗೆ ನಡೆಯುವ ಚುನಾವಣೆಯನ್ನು ಮತ ಪತ್ರಗಳ ಬದಲಿಗೆ ಮೊದಲ ಬಾರಿಗೆ ವಿದ್ಯುನ್ಮಾನ ಮತಯಂತ್ರದ ಮೂಲಕ ನಡೆಸಲು ಚುನಾವಣಾ ಆಯೋಗ ನಿರ್ಧರಿಸಿದೆ. ಈ ನಿಟ್ಟಿನಲ್ಲಿ 20 ಬ್ಯಾಲೆಟ್‌ ಯುನಿಟ್‌ ಹಾಗೂ 20 ಕಂಟ್ರೋಲ್‌ ಯುನಿಟ್‌ಗಳನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ತರಿಸಿಕೊಳ್ಳಲಾಗುವುದು. ಆಕಸ್ಮಿಕವಾಗಿ ತೆರವಾಗಿರುವ ಗ್ರಾಮ ಪಂಚಾಯಿತಿಗಳ ಸದಸ್ಯ ಸ್ಥಾನಗಳಿಗೆ ಚುನಾವಣೆಯನ್ನು ಮತಪತ್ರಗಳ ಮೂಲಕವೇ ನಡೆಸಲಾಗುತ್ತದೆ ಎಂದು ತಿಳಿಸಿದರು.

ವಿದ್ಯುನ್ಮಾನ ಮತಯಂತ್ರ ಬಳಸಿ ಚುನಾವಣೆ ನಡೆಸಲಾಗುತ್ತಿರುವುದರಿಂದ ಇ.ವಿ.ಎಂ ಬಳಕೆಯ ಕುರಿತು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮತದಾರರಿಗೆ ಮತದಾನ ಮಾಡುವ ಕುರಿತು ಪ್ರಾತ್ಯಕ್ಷಿಕೆ ನೀಡಲಾಗುವುದು. ಮತದಾನ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಗ್ರಾಮಪಂಚಾಯಿತಿ ಮಟ್ಟದಲ್ಲಿ ನಡೆಸಲಾಗುವುದು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಂದಾಯ ನಿರೀಕ್ಷಕರು, ಗ್ರಾಮಲೆಕ್ಕಿಗರ ಮೂಲಕ ಕಾರ್ಯಕ್ರಮ ಆಯೋಜಿಸಿಲಾಗುತ್ತದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !