ಸೇಂಟ್ ಮೇರಿಸ್ ದ್ವೀಪದಲ್ಲಿ ಸುರಕ್ಷತೆಗೆ ಒತ್ತು

ಉಡುಪಿ: ಮಲ್ಪೆಯ ಸೇಂಟ್ ಮೇರಿಸ್ ದ್ವೀಪದಲ್ಲಿ ಈಚೆಗೆ ಐವರು ಪ್ರವಾಸಿಗರು ಮೃತಪಟ್ಟ ಹಿನ್ನೆಲೆಯಲ್ಲಿ ದ್ವೀಪಕ್ಕೆ ಅಗತ್ಯ ಭದ್ರತೆ ಹಾಗೂ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ಸಂಬಂಧ ಶನಿವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಭೆ ನಡೆಯಿತು.
ಜಿಲ್ಲಾಧಿಕಾರಿ ಕೂರ್ಮಾರಾವ್ ಹಾಗೂ ಶಾಸಕ ಕೆ.ರಘುಪತಿ ಭಟ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸೇಂಟ್ ಮೇರಿಸ್ ದ್ವೀಪದಲ್ಲಿ ಪ್ರವಾಸಿಗರ ಸುರಕ್ಷತೆಗೆ ಗರಿಷ್ಠ ಕ್ರಮಗಳನ್ನು ತೆಗೆದುಕೊಳ್ಳಬೇಕು. ಮುಂದೆ ಅವಘಡಗಳು ಸಂಭವಿಸದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಟೂರಿಸ್ಟ್ ಬೋಟ್ ಮಾಲೀಕರಿಗೆ ಹಾಗೂ ಮಲ್ಪೆ ಬೀಚ್ ನಿರ್ವಾಹಕರಿಗೆ ಸಭೆಯಲ್ಲಿ ಸೂಚನೆ ನೀಡಲಾಯಿತು.
ದ್ವೀಪದಲ್ಲಿ ಪ್ರವಾಸಿಗರು ನೀರಿಗಿಳಿಯದಂತೆ ತಡೆ ಬೇಲಿ ನಿರ್ಮಾಣ ಮಾಡಬೇಕು, ಅಲ್ಲಲ್ಲಿ ಎಚ್ಚರಿಕೆಯ ಫಲಕಗಳನ್ನು ಹಾಕಬೇಕು. ಪ್ರವಾಸಿಗರು ನೀರಿಗಿಳಿದ ಸೆಲ್ಪಿ ತೆಗೆದುಕೊಳ್ಳುವ ಬದಲು ತೀರದಲ್ಲಿ ದ್ವೀಪದ ಸೌಂದರ್ಯ ಸೆರೆಯಾಗುವಂತೆ ಸೆಲ್ಫಿ ಪಾಯಿಂಟ್‌ಗಳನ್ನು ನಿರ್ಮಾಣ ಮಾಡಬೇಕು ಎಂದು ಸೂಚನೆ ನೀಡಲಾಯಿತು.
ದ್ವೀಪದಲ್ಲಿ ಪ್ರವಾಸಿಗರ ಸುರಕ್ಷತೆಗೆ ಹೆಚ್ಚುವರಿ ಭದ್ರತಾ ಸಿಬ್ಬಂದಿ ಹಾಗೂ ಟೂರಿಸ್ಟ್ ಗೈಡ್‌ಗಳನ್ನು ನಿಯೋಜಿಸಲು ನಿರ್ಧರಿಸಲಾಯಿತು.
ಹೆಚ್ಚುವರಿ ಜಿಲ್ಲಾಧಿಕಾರಿ ವೀಣಾ, ನಗರಸಭೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಯಶವಂತ್ ಪ್ರಭು ಹಾಗೂ ಪ್ರವಾಸಿ ಬೋಟ್ ಮಾಲೀಕರು, ಮಲ್ಪೆ ಬೀಚ್ ನಿರ್ವಾಹಕರು ಸಭೆಯಲ್ಲಿ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.