ಪರಿಸರ ಸ್ನೇಹಿ ಚುನಾವಣೆಗೆ ಮಾದರಿಯಾದ ಉಡುಪಿ ಜಿಲ್ಲಾಡಳಿತ

ಸೋಮವಾರ, ಏಪ್ರಿಲ್ 22, 2019
32 °C
ಮತಗಟ್ಟೆಗಳಲ್ಲಿ ಪ್ಲಾಸ್ಟಿಕ್‌ ಮುಕ್ತ ವ್ಯವಸ್ಥೆ: ಡಿಸಿ

ಪರಿಸರ ಸ್ನೇಹಿ ಚುನಾವಣೆಗೆ ಮಾದರಿಯಾದ ಉಡುಪಿ ಜಿಲ್ಲಾಡಳಿತ

Published:
Updated:
Prajavani

ಉಡುಪಿ: ಪರಿಸರ ಸ್ನೇಹಿ ಆಡಳಿತಕ್ಕೆ ಹಲವಾರು ಕ್ರಮಗಳನ್ನು ಕೈಗೊಂಡು ಯಶಸ್ಸಿಯಾಗಿದ್ದ ಉಡುಪಿ ಜಿಲ್ಲಾಡಳಿತ ಇದೀಗ ಲೋಕಸಭಾ ಚುನಾವಣೆಯನ್ನೂ ಪರಿಸರ ಸ್ನೇಹಿ ನೆಲೆಯಲ್ಲಿ ನಡೆಸುವ ಮೂಲಕ ಮತ್ತೊಂದು ಮೈಲಿಗಲ್ಲು ಸಾಧಿಸಿದೆ.

ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತರು ಲೋಕಸಭಾ ಚುನಾವಣೆ ದಿನಾಂಕ ಪ್ರಕಟಿಸುವ ಸಂದರ್ಭದಲ್ಲಿ ಪ್ರಸಕ್ತ ಲೋಕಸಭಾ ಚುನಾವಣೆಯನ್ನು ಪರಿಸರ ಸ್ನೇಹಿಯಾಗಿ ನಡೆಸಲು ಒತ್ತು ನೀಡಲಾಗುವುದು ಎಂದು ಪ್ರಕಟಿಸಿದ್ದರು. ಆದರೆ ಈ ನಿಟ್ಟಿನಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋದ ಉಡುಪಿ ಜಿಲ್ಲಾಡಳಿತವು ಚುನಾವಣೆ ಘೋಷಣೆಯ ಆರಂಭದಲ್ಲಿಯೇ ಎಲ್ಲಾ ರಾಜಕೀಯ ಪಕ್ಷ ಹಾಗೂ ಮುಖಂಡರ ಸಭೆ ನಡೆಸಿ ಪರಿಸರ ಸ್ನೇಹಿ ಚುನಾವಣೆ ನಡೆಸಲು ಸಹಕಾರ ಕೋರಿತ್ತು.

ಹಿಂದೆ ಚುನಾವಣೆ ಎಂದರೆ ರಸ್ತೆಯುದ್ದಕ್ಕೂ ಬ್ಯಾನರ್‌, ಬಂಟಿಂಗ್ಸ್‌, ಪಕ್ಷದ ಧ್ವಜಗಳು ರಾರಾಜಿಸುತ್ತಿದ್ದವು. ಸಾರ್ವಜನಿಕ ಸ್ಥಳಗಳ ಗೋಡೆಗಳಲ್ಲೂ ಚುನಾವಣೆಯ ಭರಾಟೆ ಎದ್ದು ಕಾಣುತ್ತಿದ್ದವು. ಇವುಗಳನ್ನು ನೋಡಿಯೇ ಸಾರ್ವಜನಿಕರು ಚುನಾವಣೆಯ ಬಗ್ಗೆ ವಿಶ್ಲೇಷಣೆ ಮಾಡುತ್ತಿದ್ದರು.

ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಚುನಾವಣೆ ಕುರಿತ ರಾಜಕೀಯ ಪಕ್ಷ, ಅಭ್ಯರ್ಥಿಗಳ ಬಗೆಗಿನ ಪ್ಲಾಸ್ಟಿಕ್‌ ಫ್ಲೆಕ್ಸ್‌, ಕಟೌಟ್‌, ಬಂಟಿಂಗ್ಸ್‌ ಬಹಳ ಅಪರೂಪವಾಗಿದೆ. ಅಭ್ಯರ್ಥಿಗಳ ಸಭೆ ನಡೆಯುವ ಸ್ಥಳಗಳ ಆವರಣದಲ್ಲಿ ಮಾತ್ರ ಬಟ್ಟೆಯಲ್ಲಿ ತಯಾರಿಸಿದ ಬ್ಯಾನರ್‌, ಧ್ವಜಗಳು ಕಾಣ ಸಿಗುತ್ತವೆ. ಸಾರ್ವಜನಿಕ ಸ್ಥಳಗಳಲ್ಲಿ ಅನುಮತಿ ಪಡೆದು ಬ್ಯಾನರ್‌, ಕಟೌಟ್, ಬಂಟಿಂಗ್ಸ್‌ ಹಾಕಲು ಅವಕಾಶ ಇದ್ದರೂ, ಯಾವುದೇ ಪಕ್ಷ ಅಥವಾ ಅಭ್ಯರ್ಥಿಗಳಿಂದ ಇವುಗಳಿಗೆ ಅನುಮತಿ ಕೋರಿ ಅರ್ಜಿಗಳು ಚುನಾವಣಾಧಿಕಾರಿಗಳ ಕಚೇರಿಗೆ ಇದುವರೆಗೂ ಬಾರದಿರುವುದು ಗಮನಾರ್ಹವಾಗಿದೆ.

ಪರಿಸರ ಸ್ನೇಹಿ ಚುನಾವಣೆ ಆಚರಣೆ ಮಾಡುವ ಉದ್ದೇಶದಿಂದ ಜಿಲ್ಲಾಡಳಿತ ಮತಗಟ್ಟೆ ಅಧಿಕಾರಿಗಳಿಗೆ ಕುಂದಾಪುರ, ಉಡುಪಿ, ಕಾಪು, ಕಾರ್ಕಳದಲ್ಲಿ ಆಯೋಜಿಸಿದ್ದ ತರಬೇತಿಯಲ್ಲೂ ಸಹ ಕಾಫಿ, ಟೀ ಕುಡಿಯಲು ಪೇಪರ್‌ ಲೋಟೆ, ಊಟಕ್ಕೆ ಅಡಿಕೆ ಹಾಳೆಯ ತಟ್ಟೆ ಮತ್ತು ಕುಡಿಯಲು ನೀರಿನ ಕ್ಯಾನ್‌ಗಳನ್ನು ಇಡುವ ಮೂಲಕ ಪ್ಲಾಸ್ಟಿಕ್‌ ಮುಕ್ತ ತರಬೇತಿ ಕೇಂದ್ರ ಆಯೋಜಿಸಲಾಗಿತ್ತು. ಮತದಾನ ದಿನದಂದು ಸಹ ಎಲ್ಲಾ ಮತಗಟ್ಟೆಗಳಲ್ಲಿ ಇದೇ ವ್ಯವಸ್ಥೆ ಮಾಡಲಾಗಿದೆ. ರಾಜಕೀಯ ಪಕ್ಷಗಳು ಸಹ ತಮ್ಮ ಸಭೆಗಳಲ್ಲಿ ನೀರಿನ ಕ್ಯಾನ್‌ಗಳನ್ನು ಬಳಸುತ್ತಿದ್ದು, ಆ ಮೂಲಕ ತ್ಯಾಜ್ಯ ವಸ್ತು ಉತ್ಪಾದನೆಯಾಗದಂತೆ ಸಹಕಾರ ನೀಡುತ್ತಿದ್ದಾರೆ.

ಮತಗಟ್ಟೆ: ಪ್ಲಾಸ್ಟಿಕ್‌ ವಸ್ತು ಬಳಕೆ ನಿಷೇಧ
ಜಿಲ್ಲೆಯಲ್ಲಿ ಏಪ್ರಿಲ್‌ 18 ಮತ್ತು 23ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಎಲ್ಲಾ ಮತಗಟ್ಟೆಗಳಲ್ಲೂ ಯಾವುದೇ ರೀತಿಯ ಪ್ಲಾಸ್ಟಿಕ್‌ ವಸ್ತುಗಳನ್ನು ಬಳಸದಂತೆ ಮುಂಜಾಗೃತೆ ವಹಿಸಲಾಗಿದೆ. ಮಸ್ಟರಿಂಗ್‌ ಕೇಂದ್ರದಲ್ಲಿ ಮತಗಟ್ಟೆಗಳಿಗೆ ವಿತರಿಸಲಾಗುವ ಎಲ್ಲಾ ರೀತಿಯ ಕಿಟ್‌ಗಳನ್ನು ಬಟ್ಟೆಯಲ್ಲಿ ತಯಾರಿಸಿದ ಬ್ಯಾಗ್‌ಗಳಲ್ಲಿಯೇ ವಿತರಿಸಲು ಸಿದ್ಧತೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದರು.

**

ಜಿಲ್ಲೆಯಲ್ಲಿ ಪ್ರಸಕ್ತ ಲೋಕಸಭಾ ಚುನಾವಣೆಯನ್ನು ಪರಿಸರ ಸ್ನೇಹಿಯಾಗಿ ನಡೆಸಲು ಎಲ್ಲಾ ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳು ಸಹಕಾರ ನೀಡಿರುವುದು ಶ್ಲಾಘನೀಯವಾಗಿದೆ.
-ಹೆಪ್ಸಿಬಾ ರಾಣಿ ಕೊರ್ಲಪಾಟಿ, ಜಿಲ್ಲಾ ಚುನಾವಣಾಧಿಕಾರಿ

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !