ಗುರುವಾರ , ಡಿಸೆಂಬರ್ 12, 2019
24 °C
ಯುವಕರಿಗೆ ಉದ್ಯಮ ಪ್ರಾರಂಭಿಸಲು ಅಗತ್ಯ ಮಾಹಿತಿ ನೀಡಲಾಗುವುದ: ಜಿಲ್ಲಾಧಿಕಾರಿ

ತಿಂಗಳೊಳಗೆ ಸ್ಟಾರ್ಟ್ ಅಪ್ ಕೇಂದ್ರ ಸ್ಥಾಪನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಉಡುಪಿ: ಹೊಸ ಉದ್ಯಮಗಳನ್ನು ಪ್ರಾರಂಭಿಸಲು ಅನುಕೂಲವಾಗುವಂತೆ ಸಂಪೂರ್ಣ ಮಾಹಿತಿ ಒದಗಿಸುವ ‘ಸ್ಮಾಟ್ ಅಪ್ ಕೇಂದ್ರವನ್ನು’ ತಿಂಗಳಲ್ಲಿ ಆರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದರು.

ಮಂಗಳವಾರ ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಸಭಾಂಗಣದಲ್ಲಿ ರಾಜ್ಯ ಹಣಕಾಸು ಸಂಸ್ಥೆ ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ಆಶ್ರಯದಲ್ಲಿ, ಕೈಗಾರಿಕಾ ಹಾಗೂ ಸೇವಾ ವಲಯಗಳ ಅಭಿವೃದ್ದಿಗೆ ರಾಜ್ಯ ಹಣಕಾಸು ಸಂಸ್ಥೆಯಿಂದ ದೊರೆಯುವ ಸಾಲಸೌಲಭ್ಯಗಳ ಕುರಿತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಪ್ರತಿಭಾವಂತ, ಉತ್ಸಾಹಿ, ಕೌಶಲ ಹೊಂದಿದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಉಪ್ಪು ನೀರನ್ನು ಸಿಹಿ ನೀರಾಗಿ ಪರಿವರ್ತಿಸುವ, ಕಸವನ್ನು ಸಂಪನ್ಮೂಲವಾಗಿ ಪರಿವರ್ತಿಸುವ ಹೀಗೆ, ಹಲವು ಅತ್ಯುತ್ತಮ ಚಿಂತನೆಯೊಂದಿಗೆ ಉದ್ಯಮ ಪ್ರಾರಂಭಿಸುವ ಆಸಕ್ತಿ ಹೊಂದಿದ್ದಾರೆ. ಆದರೆ, ಅವರಿಗೆಲ್ಲ ಸೂಕ್ತ ಮಾರ್ಗದರ್ಶನ ಹಾಗೂ ಮಾಹಿತಿ ಕೊರತೆ ಇದೆ ಎಂದು ಹೇಳಿದರು.

ಯುವಕರಿಗೆ ಉದ್ಯಮದ ಬಗ್ಗೆ ಸಂಪೂರ್ಣ ಮಾಹಿತಿ ಹಾಗೂ ನೆರವು ನೀಡಲು ಜಿಲ್ಲಾ ಕೈಗಾರಿಕಾ ಕೇಂದ್ರದಿಂದ ಮಣಿಪಾಲ ಕೈಗಾರಿಕಾ ಕೇಂದ್ರದಲ್ಲಿ ಸ್ಟಾರ್ಟ್ ಅಫ್ ಕೇಂದ್ರವನ್ನು ತೆರಯಲಾಗುವುದು. ಈ ಕೇಂದ್ರದಲ್ಲಿ ಹೊಸ ಉದ್ದಿಮೆ ಪ್ರಾರಂಭಿಸಲು ಅಗತ್ಯವಾದ ಮಾರ್ಗದರ್ಶನ ನೆರವು ಸೇರಿದಂತೆ ಇತರ ವಿಚಾರಗಳ ಕುರಿತು ಸಮಗ್ರ ಮಾಹಿತಿ ಒದಗಿಸಲಾಗುತ್ತದೆ. ಯುವ ಉದ್ದಿಮೆದಾರರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಉಡುಪಿಯಲ್ಲಿ ಉದ್ಯೋಗಾಧಾರಿತ ತರಬೇತಿ ನೀಡುವ ಸಂಸ್ಥೆಗಳಿದ್ದು, ಪಾರಂಪರಿಕ ತರಬೇತಿಯನ್ನು ಹೆಚ್ಚಿನವರು ಪಡೆಯುತ್ತಿದ್ದಾರೆ. ಪಾರಂಪರಿಕ ತರಬೇತಿಯಿಂದ ಈಗಾಗಲೇ ಸಾಕಷ್ಟು ಮಂದಿ ಉದ್ಯೋಗ ಮಾಡುತ್ತಿದ್ದಾರೆ. ಈ ಉದ್ದಿಮೆಗಳಲ್ಲಿ ಲಾಭದ ಪ್ರಮಾಣ ಕಡಿಮೆ ಇದೆ. ಯುವ ಜನತೆ ಹೊಸ ಯೋಜನೆಗಳೊಂದಿಗೆ ಹೊಸ ಉದ್ಯಮಗಳನ್ನು ಪ್ರಾರಂಭಿಸುವ ಕುರಿತು ತರಬೇತಿ ಪಡೆಯಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ರಮಾನಂದ ನಾಯಕ್‌, ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಶ್ರೀಕೃಷ್ಣ ರಾವ್ ಕೊಡಂಚ, ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷ ಐ.ಆರ್ ಫರ್ನಾಂಡಿಸ್ ಉಪಸ್ಥಿತರಿದ್ದರು.

ಕೆ.ಎಸ್.ಎಫ್.ಸಿ ಮೈಸೂರು ವೃತ್ತದ ಪ್ರಧಾನ ವ್ಯವಸ್ಥಾಪಕ ಬಿ.ಸಿ.ಶಿವಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಾಯಕ ಪ್ರಧಾನ ವ್ಯವಸ್ಥಾಪಕ ಬಿ.ಎಸ್. ಮೊಯಿದಿನ್ ಸ್ವಾಗತಿಸಿದರು. ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಾಯಕ ನಿರ್ದೇಶಕ ಸೀತಾರಾಮ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಪ್ರತಿಕ್ರಿಯಿಸಿ (+)