ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಟ್ರಾಂಗ್‌ ರೂಂನಲ್ಲಿ ಅಭ್ಯರ್ಥಿಗಳ ಭವಿಷ್ಯ ಭದ್ರ

ಬೈಂದೂರಿನಲ್ಲಿ ಪ್ರಮೋದ್ ಪ್ರಚಾರ, ಬೆಳಗಾವಿಯಲ್ಲಿ ಶೋಭಾ ಮತಯಾಚನೆ
Last Updated 19 ಏಪ್ರಿಲ್ 2019, 14:29 IST
ಅಕ್ಷರ ಗಾತ್ರ

ಉಡುಪಿ: ಉಡುಪಿ–ಚಿಕ್ಕಮಗಳೂರು ಲೋಕಸಬಾ ಕ್ಷೇತ್ರದ ಚುನಾವಣಾ ಕಾವು ತಣ್ಣಗಾಗಿದೆ. ಪ್ರಚಾರದ ಅಬ್ಬರ ಮುಗಿದಿದ್ದು, ಮುಖಂಡರು, ಕಾರ್ಯಕರ್ತರು ನಿರಾಳರಾಗಿದ್ದಾರೆ. ಮೇ 23ರ ಫಲಿತಾಂಶವನ್ನು ಎಲ್ಲರೂ ಎದುರು ನೋಡುತ್ತಿದ್ದಾರೆ.‌ ಇದರ ಮಧ್ಯೆಯೇ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಚುನಾವಣಾ ಕಾವು ಹೆಚ್ಚಾಗುತ್ತಿದೆ.

ಶಿವಮೊಗ್ಗ ಕ್ಷೇತ್ರಕ್ಕೆ ಒಳಪಡುವ ಉಡುಪಿ ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಪಕ್ಷಗಳು ಮತಬೇಟೆಗೆ ಇಳಿದಿದ್ದಾರೆ.ಕಾಂಗ್ರೆಸ್‌ ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಶುಕ್ರವಾರ ಬೈಂದೂರು ವಿಧಾನಸಭಾ ಕ್ಷೇತ್ರದ ಹಲವೆಡೆ ಪ್ರಚಾರ ನಡೆಸಿದರು. ಅಭ್ಯರ್ಥಿ ಮಧು ಬಂಗಾರಪ್ಪ ಪರ ಮತಯಾಚನೆ ಮಾಡಿದರು.

ಬಳಿಕ ದಾರಿ ಮಧ್ಯೆ ಕುಂದಾಪುರ ತಾಲ್ಲೂಕಿನ ಆನೆಗುಡ್ಡೆ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ನಂತರ ಮಹಿಷಾಸುರ ಮರ್ಧಿನಿ ದೇವಸ್ಥಾನಕ್ಕೆ ಭೇಟಿನೀಡಿ ಪ್ರಾರ್ಥನೆ ಸಲ್ಲಿಸಿದರು. ಅಲ್ಲಿನ ಕಾರ್ಯಕರ್ತರ ಜತೆ ಕೆಲಕಾಲ ಕಳೆದರು.

ಸಂಸದೆ ಶೋಭಾ ಕರಂದ್ಲಾಜೆ ಅವರು ಉತ್ತರ ಕರ್ನಾಟಕ ಪ್ರವಾಸದಲ್ಲಿದ್ದಾರೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ಶೋಭಾ ಪ್ರಚಾರ ನಡೆಸಿದರು.

ಸ್ಟ್ರಾಂಗ್ ರೂಂನಲ್ಲಿ ಅಭ್ಯರ್ಥಿಗಳ ಭವಿಷ್ಯ ಭದ್ರ:

ಶುಕ್ರವಾರ ಮತದಾನ ಅಂತ್ಯವಾದ ಕೂಡಲೇಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ 8 ವಿಧಾನಸಭಾ ಕ್ಷೇತ್ರಗಳ ಮತಯಂತ್ರಗಳನ್ನು ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ನಗರದ ಸೇಂಟ್‌ ಸಿಸಿಲಿಸ್ ಶಾಲೆಗೆ ತರಲಾಗಿದೆ. ಮತಯಂತ್ರಗಳನ್ನು ಸ್ಟ್ರಾಂಗ್ ರೂಂಗಳಲ್ಲಿ ಇಡಲಾಗಿದ್ದು, ಕಟ್ಟೆಚ್ಚರ ವಹಿಸಲಾಗಿದೆ.

ಮೇ 23ರಂದು ಮತಎಣಿಕೆ ನಡೆಯಲಿದ್ದು, ಅಲ್ಲಿಯವರೆಗೂ ಭದ್ರತಾ ಕೊಠಡಿಗಳಿಗೆ ಖಾಕಿ ಕಣ್ಗಾವಲು ಇರಲಿದೆ. ಕೇಂದ್ರ ಮೀಸಲು ಪಡೆಯ ಪೊಲೀಸರು ಶಸ್ತ್ರಸಜ್ಜಿತರಾಗಿ ಕಾವಲು ಕಾಯುತ್ತಿದ್ದಾರೆ. ಭದ್ರತೆಗೆ ಮಹಿಳಾ ಅಧಿಕಾರಿಗಳನ್ನೂ ನೇಮಿಸಿರುವುದು ವಿಶೇಷ.

ಸ್ಟ್ರಾಂಗ್ ರೂಂಗಳ ಆಸುಪಾಸು ಯಾರೂ ಸುಳಿಯುವಂತಿಲ್ಲ.ಇಡೀ ಶಾಲೆಯನ್ನು ಪೊಲೀಸರು ಸುತ್ತುವರಿದಿದ್ದಾರೆ. ವಿದ್ವಂಸಕ ಕೃತ್ಯಗಳ ನಿಗ್ರಹ ಪಡೆ, ಅಗ್ನಿಶಾಮಕ ದಳಗಳನ್ನು ಕೂಡ ಸ್ಥಳದಲ್ಲಿ ಸನ್ನದ್ಧವಾಗಿಡಲಾಗಿದೆ.ಶಾಲೆಗೆ 100ಕ್ಕೂ ಹೆಚ್ಚು ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಹಾಗೂ ಎಸ್‌ಪಿ ನಿಶಾ ಜೇಮ್ಸ್‌ಸ್ಟ್ರಾಂಗ್ ರೂಂಗಳ ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT