ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಳುಗಾರಿಕೆಗೆ ಆರಂಭವಾಗದಿದ್ದರೆ ಉಪವಾಸ: ಪೇಜಾವರ ಶ್ರೀ

ಪೇಜಾವರ ವಿಶ್ವೇಶತೀರ್ಥ ಶ್ರೀ ನಿರ್ಧಾರ
Last Updated 1 ನವೆಂಬರ್ 2018, 19:30 IST
ಅಕ್ಷರ ಗಾತ್ರ

ಉಡುಪಿ: ಪ್ರಕೃತಿಗೆ ಹಾನಿಯಾಗದಂತೆ ಜಿಲ್ಲೆಯಲ್ಲಿ ಮರಳು ತೆಗೆಯಲು ಅವಕಾಶ ನೀಡಬೇಕು. ಇಲ್ಲವಾದರೆ ನ.10ರಂದು ಉಪವಾಸ ಮಾಡುವುದಾಗಿ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳು ಎಚ್ಚರಿಕೆ ನೀಡಿದರು.

ಮರಳುಗಾರಿಕೆ ಆರಂಭಕ್ಕೆ ಒತ್ತಾಯಿಸಿ ಬಿಜೆಪಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಯುತ್ತಿರುವ ಧರಣಿ ಸ್ಥಳಕ್ಕೆ ಗುರುವಾರ ಭೇಟಿನೀಡಿದ ಶ್ರೀಗಳು ಧರಣಿನಿರತರನ್ನು ಉದ್ದೇಶಿಸಿ ಮಾತನಾಡಿದರು.‌

ಮರಳು ಸಿಗದ ಪರಿಣಾಮ ಉದ್ದಿಮೆಗಳಿಗೆ, ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗಿದೆ. ಅಭಿವೃದ್ಧಿ ಚಟುವಟಿಕೆಗಳು ಕುಂಠಿತಗೊಂಡಿವೆ. ಮರಳುಗಾರಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಿದರೆ ಪ್ರಾಕೃತಿಕ ಅಸಮತೋಲನ ಉಂಟಾಗಿ ಕೇರಳಕ್ಕೆ ಎದುರಾದ ಗಂಡಾಂತರ ಇಲ್ಲಿಗೂ ಬರಬಹುದು. ಅನಿರ್ಬಂಧಿತವಾಗಿ ಮರಳು ತೆಗೆದರೂ ಪರಿಸರ ನಾಶವಾಗುತ್ತದೆ. ಹಾಗಾಗಿ, ಎರಡೂ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಮರಳು ತೆಗೆಯಲು ಅನುಮತಿ ನೀಡಬೇಕು. ಇಲ್ಲವಾದರೆ, ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಪೇಜಾವರ ಶ್ರೀಗಳು ತಿಳಿಸಿದರು.

ರಾಜ್ಯ ಸರ್ಕಾರ ಕೂಡಲೇ ಪರಿಸರ ತಜ್ಞರ ಜತೆ ಚರ್ಚಿಸಿ, ಪ್ರಕೃತಿಗೆ ಹಾನಿಯಾಗದಂತೆ ಮರಳು ತೆಗೆಯುವ ಕೆಲಸವನ್ನು ಆರಂಭಿಸಬೇಕು. ಪರಿಶಿಷ್ಟ ಜಾತಿ ಸೇರಿದಂತೆ ಎಲ್ಲ ವರ್ಗದವರಿಗೂ ಪರವಾನಗಿ ಸಿಗಬೇಕು. ದೀಪಾವಳಿಯ ಹೊತ್ತಿಗೆ ಶುಭ ಸುದ್ದಿ ನೀಡಬೇಕು ಎಂದು ಶ್ರೀಗಳು ಒತ್ತಾಯಿಸಿದರು.

ಸ್ವಾಯತ್ತ ಸಂಸ್ಥೆಗಳಲ್ಲಿ ಕೇಂದ್ರದ ಹಸ್ತಕ್ಷೇಪ: ಶಿವಶಂಕರರೆಡ್ಡಿ ಟೀಕೆ

ಚಿಕ್ಕಬಳ್ಳಾಪುರ: ‘ಇತ್ತೀಚಿನ ವಿದ್ಯಮಾನಗಳನ್ನು ಗಮನಿಸಿದಾಗ ಸ್ವಾಯತ್ತ ಸಂಸ್ಥೆಗಳಲ್ಲಿ ಕೇಂದ್ರ ಸರ್ಕಾರದ ಹಸ್ತಕ್ಷೇಪ ಹೆಚ್ಚುತ್ತಿದೆ. ಸ್ವಾಯತ್ತ ಸಂಸ್ಥೆಗಳಲ್ಲಿ ಸರ್ಕಾರಗಳು ಅನಗತ್ಯ ಮಧ್ಯಪ್ರವೇಶಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸಡಿಲಗೊಳಿಸುತ್ತದೆ’ ಎಂದು ಕೃಷಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ಹೇಳಿದರು.

ನಗರದಲ್ಲಿ ಗುರುವಾರ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಸಂವಿಧಾನದ ಅಡಿ ಚುನಾವಣಾ ಆಯೋಗ, ಯೋಜನಾ ಆಯೋಗ, ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ), ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ವಿಶ್ವವಿದ್ಯಾಲಯ ಧನ ಸಹಾಯ ಆಯೋಗ (ಯುಜಿಸಿ) ಸೇರಿದಂತೆ ಅನೇಕ ಸ್ವಾಯತ್ತ ಸಂಸ್ಥೆಗಳನ್ನು ರಚಿಸಲಾಗಿದೆ. ಇವುಗಳಲ್ಲಿ ಸರ್ಕಾರd ಯಾವುದೇ ರೀತಿ ಹಸ್ತಕ್ಷೇಪ ಸಲ್ಲದು’ ಎಂದು ತಿಳಿಸಿದರು.

‘ಈ ಸಂಸ್ಥೆಗಳ ಸ್ವಾಯತ್ತತೆ ಕಾಪಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆಯಾದಾಗ ಪ್ರತಿಯೊಬ್ಬರೂ ರಕ್ಷಿಸುವ ಕೆಲಸ ಮಾಡಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT