ಪಡುಬಿದ್ರಿ: ಪಡುಬಿದ್ರಿ ಬ್ಲೂ ಫ್ಲ್ಯಾಗ್ ಬೀಚ್ ಸ್ವಚ್ಛತಾ ಕೆಲಸಗಾರರು ಮತ್ತು ಬೀಚ್ ಪ್ರಬಂಧಕರ ನಡುವೆ ನಡೆದಿರುವ ವಾಗ್ವಾದದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಂತರ ರಾಷ್ಟ್ರೀಯ ಮಾನ್ಯತೆ ಪಡೆದ ಬ್ಲೂಫ್ಲ್ಯಾಗ್ ಬೀಚ್‌ನಲ್ಲಿ ಪ್ರಬಂಧಕರು ಮತ್ತು ಸಿಬ್ಬಂದಿ ನಡುವೆ ವಾಗ್ವಾದ ನಡೆದಿದ್ದು, ಪ್ರಬಂಧಕರು ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿದ್ದಾರೆ ಎಂದು ಆರೋಪಿಸಿ ಕೆಲಸಗಾರರು ಕೆಲಸ ಸ್ಥಗಿತಗೊಳಿಸಿ ಹೊರಹೋಗಿರುವ ಘಟನೆ ನಡೆದಿದೆ.
ಪ್ರಬಂಧಕರನ್ನು ಕರ್ತವ್ಯದಿಂದ ವಜಾ ಮಾಡದೇ ಇದ್ದಲ್ಲಿ ಶುಕ್ರವಾರ ಧರಣಿ ನಡೆಸುವುದಾಗಿ ಸಿಬ್ಬಂದಿ ಎಚ್ಚರಿಕೆ ನೀಡಿದ್ದಾರೆ. ಆದರೆ, ಪ್ರವಾಸಿಗರಿಗೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳುವುದಾಗಿ ಸಿಬ್ಬಂದಿ ತಿಳಿಸಿದ್ದಾರೆ.
ಡಿಸಿ ಜತೆಗೆ ಚರ್ಚೆ: ಪಡುಬಿದ್ರಿ ಬ್ಲೂಫ್ಲ್ಯಾಗ್ ಬೀಚ್‌ನಲ್ಲಿ ಅಲ್ಲಿನ ಪ್ರಬಂಧಕರ ಮತ್ತು ಸ್ವಚ್ಛತಾ ಕೆಲಸಗಾರರ ಸಮಸ್ಯೆಯನ್ನು ಉಡುಪಿ ಜಿಲ್ಲಾಧಿಕಾರಿ ಅವರ ಜತೆಗೆ ಚರ್ಚಿಸಿ ಬಗೆಹರಿಸಿಕೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ (ಪ್ರಭಾರ) ಎಸಿಪಿ ಕ್ಲಿಫರ್ಡ್ ಲೋಬೊ ತಿಳಿಸಿದ್ದಾರೆ.
ಉಡುಪಿ ಜಿಲ್ಲಾಡಳಿತ ಹಾಗೂ ಉಡುಪಿ ಜಿಲ್ಲಾ ಪ್ರವಾಸೋದ್ಯಮ ಇಲಾಖೆಗೆ ಒಳಪಟ್ಟಿರುವ ಈ ಬೀಚ್‌ನ ನಿರ್ವಹಣೆಯು ಅಲ್ಲಿನ ಎಲ್ಲರ ಪರಿಶ್ರಮದಿಂದ ಉತ್ತಮ ರೀತಿಯಲ್ಲಿ ನಡೆಯುತ್ತಿದೆ. ಸಣ್ಣಪುಟ್ಟ ವಿವಾದಗಳು ಇದ್ದರೂ ಜಿಲ್ಲಾಧಿಕಾರಿ ಅವರ ಆದೇಶವನ್ನು ಪಡೆದು ತೀರ್ಮಾನಿಸುವುದಾಗಿ ಲೋಬೊ ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.