‘ಶಿರೂರು ಶ್ರೀ ಸಾವು: ಎಫ್‌ಐಆರ್ ದಾಖಲಿಸಿ’

7
ಸಾವಿನ ಅಂತಿಮ ವರದಿ ಶೀಘ್ರ ಬರಲಿ: ವಕೀಲ ರವಿಕಿರಣ್ ಮುರ್ಡೇಶ್ವರ್‌ ಒತ್ತಾಯ

‘ಶಿರೂರು ಶ್ರೀ ಸಾವು: ಎಫ್‌ಐಆರ್ ದಾಖಲಿಸಿ’

Published:
Updated:
Deccan Herald

ಉಡುಪಿ: ಶಿರೂರು ಲಕ್ಷ್ಮೀವರ ತೀರ್ಥರ ದುರ್ಮರಣದ ಸಂಬಂಧ ಇದುವರೆಗೂ ಎಫ್‌ಐಆರ್ ದಾಖಲಾಗದಿರುವುದು ದುಃಖದ ಸಂಗತಿ. ಪ್ರಕರಣದ ಬಗ್ಗೆ ನ್ಯಾಯಾಲಯಕ್ಕೆ ಮಾಹಿತಿ ಇರದಿದ್ದರೆ ನ್ಯಾಯ ಕೇಳುವುದಾದರೂ ಎಲ್ಲಿ ಎಂದು ವಕೀಲ ರವಿಕಿರಣ್‌ ಮುರ್ಡೇಶ್ವರ್ ಪ್ರಶ್ನಿಸಿದರು.

ಶಿರೂರು ಶ್ರೀಗಳ ಅಭಿಮಾನಿಗಳ ಸಮಿತಿ ಶನಿವಾರ ಮಥುರಾ ಹೋಟೆಲ್‌ ಸಂಭಾಗಣದಲ್ಲಿ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ‘ಸ್ವಾಮೀಜಿ ಅವರ ಸಾವಿನಲ್ಲಿ ಸಂದೇಹಗಳಿವೆ, ಸಂಶಯಗಳಿವೆ ಎಂಬ ದೂರು ದಾಖಲಾಗಬೇಕು. ಆಗಮಾತ್ರ ಪ್ರಕರಣದ ದಿಕ್ಕು ಬದಲಾಗಲಿದೆ’ ಎಂದರು.

‘ಶಿರೂರು ಶ್ರೀಗಳ ಶರೀರದಲ್ಲಿ ವಿಷಕಾರಿ ಅಂಶಗಳಿವೆ ಎಂದು ಕೆಎಂಸಿ ವೈದ್ಯಕೀಯ ಅಧೀಕ್ಷಕರೇ ಅನುಮಾನ ವ್ಯಕ್ತಪಡಿಸಿದ್ದಾರೆ. ಸ್ವಾಮೀಜಿ ಸಾವಿಗೂ ಮುನ್ನ ಅವರ ಸುತ್ತಲೂ ವಿವಾದಗಳು ಸುತ್ತಿಕೊಂಡಿದ್ದವು. ಹೀಗಿರುವಾಗ ಶ್ರೀಗಳ ಸಾವು ಜನಸಾಮಾನ್ಯರಲ್ಲಿ ಸಂದೇಹಗಳನ್ನು ಹುಟ್ಟುಹಾಕುವುದಿಲ್ಲವೇ’ ಎಂದು ರವಿಕಿರಣ್ ಮುರ್ಡೇಶ್ವರ್ ಪ್ರಶ್ನಿಸಿದರು.

‘ಮರಣೋತ್ತರ ಪರೀಕ್ಷೆಯಲ್ಲಿ ಮೃತ ವ್ಯಕ್ತಿಗೆ ಕಾಯಿಲೆಗಳು ಇವೆಯಾ ಎಂಬುದು ಮಾತ್ರ ತಿಳಿಯುತ್ತದೆ. ಎಫ್‌ಎಸ್‌ಎಲ್‌ ವರದಿ ಶೀಘ್ರ ಬರಬೇಕು. ವರದಿ ವಿಳಂಬವಾದರೆ, ವಿಷ ಕೂಡ ತನ್ನ ವಿಷತ್ವವನ್ನು ಕಳೆದುಕೊಳ್ಳುವ ಸಾಧ್ಯತೆಗಳಿರುತ್ತದೆ’ ಎಂದು ಅನುಮಾನ ವ್ಯಕ್ತಪಡಿಸಿದರು.

ಇಡೀ ದೇಶವೇ ಶಿರೂರು ಶ್ರೀಗಳ ಸಾವಿಗೆ ಕಾರಣ ತಿಳಿಯಲು ತುದಿಗಾಲಲ್ಲಿ ನಿಂತಿದೆ. ಇಂತಹ ಸಂದರ್ಭದಲ್ಲಿ ಅಂತಿಮ ವರದಿ ನೀಡಲು ವಿಳಂಬ ಮಾಡುವುದು ಸರಿಯಲ್ಲ. ಕೊಲೆ ಶಂಕೆಯಿದ್ದ ಸಾಮಾನ್ಯ ವ್ಯಕ್ತಿಯ ಪ್ರಕರಣದಲ್ಲಿ ಇಷ್ಟುಹೊತ್ತಿಗೆ ವರದಿ ಬಂದಿರುತ್ತಿತ್ತು. ಪ್ರಕರಣದ ತನಿಖೆ ತಡವಾದರೆ ಸತ್ಯ ಕೈಗೆಟುಕುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

‘ಶ್ರೀಗಳದ್ದು ಅನುಮಾನಾಸ್ಪದ ಸಾವು ಎಂದಷ್ಟೇ ಸದ್ಯ ಯುಡಿಆರ್ ದಾಖಲಾಗಿದೆ. ಒಂದುವೇಳೆ ಎಫ್‌ಎಸ್‌ಎಲ್‌ ವರದಿಯಲ್ಲಿ ಅನಾರೋಗ್ಯದಿಂದಲೇ ಶ್ರೀಗಳು ಮೃತಪಟ್ಟಿದ್ದಾರೆ ಎಂಬ ಅಂಶವಿದ್ದರೆ, ದೂರು ಅಂತ್ಯವಾಗುತ್ತದೆ. ಈಗಲೇ ಎಫ್‌ಐಆರ್ ದಾಖಲಿಸಿದರೆ, ಪ್ರಕರಣ ನ್ಯಾಯಾಲಯದ ವ್ಯಾಪ್ತಿಗೆ ಬರುತ್ತದೆ. ಕಾನೂನು ಪ್ರಕ್ರಿಯೆ ಸಕ್ರಿಯವಾಗಿರುತ್ತದೆ. ಈ ಬಗ್ಗೆ ಸಮಿತಿ ಗಮನ ಹರಿಸಿದರೆ ಶ್ರೀಗಳಿಗೆ ನಿಜವಾದ ಶ್ರದ್ಧಾಂಜಲಿ ಸಲ್ಲಿಸಿದಂತಾಗುತ್ತದೆ’ ಎಂದು ಮುರ್ಡೇಶ್ವರ್ ಸಲಹೆ ನೀಡಿದರು.

‘ಪ್ರರಣದಲ್ಲಿ ನ್ಯಾಯ ಸಿಗಬೇಕು ಎಂಬುದಷ್ಟೆ ನಮ್ಮ ಕಾಳಜಿ. ಸ್ವಾಮೀಜಿಯ ಮರಣ ಅಂಗಾಂಗ ವೈಫಲ್ಯದಿಂದಲೇ ಆಗಿದೆ ಎಂದು ಅಂತಿಮ ವರದಿಯಲ್ಲಿ ಬಂದರೂ ವಿರೋಧವಿಲ್ಲ. ಆದರೆ, ಅಪರಾಧ ನಡೆದಿದೆ ಎಂದಾದರೆ ಅದರ ಹಿಂದಿರುವ ಸತ್ಯ ಬಹಿರಂಗವಾಗಬೇಕು’ ಎಂದು ಅವರು ಅಭಿಪ್ರಾಯಪಟ್ಟರು.

ಕೇಮಾರು ಮಠದ ಈಶ ವಿಠಲದಾಸ ಸ್ವಾಮೀಜಿ ಮಾತನಾಡಿ, ‘ಮಠಗಳಲ್ಲಿ ಬಾಲಸನ್ಯಾಸ ಪದ್ಧತಿ ನಿಷೇಧವಾಗಬೇಕು. ಬಾಲಕಾರ್ಮಿಕ ಪದ್ಧತಿಯಂತೆ ಬಾಲಸನ್ಯಾಸ ಪದ್ಧತಿಯನ್ನೂ ಅಪರಾಧ ಎಂದು ಪರಿಗಣಿಸಬೇಕು. ಮಠದಲ್ಲಿ ಬಾಲಸನ್ಯಾಸಿಗಳನ್ನು ನೇಮಿಸಿದರೆ ಕಾನೂನು ಹೋರಾಟ ನಡೆಸುವುದಾಗಿ’ ಎಚ್ಚರಿಕೆ ನೀಡಿದರು.

ಶಿರೂರು ಶ್ರೀಗಳ ಆರಾಧನೆ ಈಗಾಗಲೇ ವಿಳಂಬವಾಗಿದೆ. ಮಠದಲ್ಲಿಯೇ ಆರಾಧನೆ ಮಾಡಬೇಕು ಎಂಬ ನಿಯಮವಿಲ್ಲ. ಗಯಾ, ಕಾಶಿ, ಗೋಕರ್ಣದಲ್ಲೂ ಮಾಡಬಹುದು. ಆರಾಧನೆ ಮಂದೂಡುವ ನೆಪದಲ್ಲಿ ಸ್ವಾಮೀಜಿಗೆ ಅಪಮಾನ ಮಾಡಲಾಗುತ್ತಿದೆ. ಇದು ಖಂಡನೀಯ ಎಂದರು.

ಶ್ರೀಗಳ ಪೂರ್ವಾಶ್ರಯದ ಸಹೋದರ ವಾದಿರಾಜ ಆಚಾರ್ಯ ಮಾತನಾಡಿ, ‘ಶಿರೂರು ಮಠವು ಕೃಷ್ಣಮಠಕ್ಕೆ ನೀಡಿದ ಕೊಡುಗೆ ದೊಡ್ಡದು. ಪೂರ್ಣಪ್ರಜ್ಞ ಶಾಲೆಗೆ ನಾಲ್ಕು ಎಕರೆ ಜಾಗ, ಪರ್ಕಳ ಶಾಲೆ ನಿರ್ಮಾಣಕ್ಕೆ ಜಮೀನು, 2 ರಥಗಳ ಕೊಡುಗೆ, ಚಂದ್ರಮೌಳೀಶ್ವರನ ಎದುರಿನ ಇರುವ ಗೋಪುರ ನಿರ್ಮಾಣವೂ ಶಿರೂರು ಮಠದ ಕೊಡುಗೆ ಎಂದರು.‌

ಸ್ವಾಮೀಜಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮೌನ ಮೆರವಣಿಗೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಉದ್ಯಮಿ ಮನೋಹರ ಶೆಟ್ರು, ಸಮಿತಿ ಅಧ್ಯಕ್ಷ ರಾಧಾಕೃಷ್ಣ ಶೆಟ್ಟಿ, ಜಯರಾಮ ಅಂಬೆಕಲ್ಲು ಸೇರಿದಂತೆ ಹಲವರು ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !