ಶನಿವಾರ, ಏಪ್ರಿಲ್ 17, 2021
30 °C
ಟಿಬಿ ಫೋರಂ ಸಮಿತಿ ಸಭೆ

ಕ್ಷಯರೋಗಿಗಳನ್ನು ಪತ್ತೆಹಚ್ಚಿ ಚಿಕಿತ್ಸೆ ನೀಡಿ: ಜಿಲ್ಲಾಧಿಕಾರಿ ಜಿ. ಜಗದೀಶ್ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಕ್ಷಯರೋಗ ನಿಯಂತ್ರಣಕ್ಕೆ ಸರ್ಕಾರದ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು, ಕ್ಷಯ ರೋಗಿಗಳ ಸಂಖ್ಯೆಯನ್ನು ತಗ್ಗಿಸಬೇಕು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಟಿಬಿ ಫೋರಂ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯಲ್ಲಿ 2016ರಿಂದ 2020ರವರೆಗಿನ ಕ್ಷಯ ರೋಗಿಗಳ ಸಂಖ್ಯೆ ಪ್ರತಿ ವರ್ಷ ಹೆಚ್ಚುತ್ತಿರುವುದು ಕಂಡುಬರುತ್ತಿದೆ. ಕ್ಷಯ ನಿಯಂತ್ರಣಕ್ಕೆ ಹೆಚ್ಚು ಪರೀಕ್ಷೆ ಅಗತ್ಯವಿದ್ದು, ರೋಗಿಗಳನ್ನು ಗುರುತಿಸಿ ರೋಗ ಹರಡದಂತೆ ಮುಂಜಾಗೃತಾ ಕ್ರಮ ಕೈಗೊಳ್ಳಬೇಕು. ಕ್ಷಯರೋಗದ ತಿಳಿವಳಿಕೆ ಕೊರತೆಯಿಂದ ಬಹಳಷ್ಟು ಜನ ನಿರ್ಲಕ್ಷ್ಯ ತೋರುತ್ತಿದ್ದಾರೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆದರೆ ಕ್ಷಯದಿಂದ ಮುಕ್ತಿ ಹೊಂದಬಹುದು ಎಂದರು.

ಎರಡು ವಾರಕ್ಕಿಂತಲೂ ಹೆಚ್ಚು ಸಮಯ ಕೆಮ್ಮು, ರಾತ್ರಿ ಜ್ವರ, ತೂಕ ಇಳಿಕೆ, ಹಸಿವಾಗದಿರುವುದು ಕ್ಷಯರೋಗದ ಲಕ್ಷಣಗಳಾಗಿದ್ದು ಕಂಡುಬಂದರೆ, ತಕ್ಷಣ ಪರೀಕ್ಷೆಗೆ ಒಳಗಾಗಬೇಕು. ಕ್ಷಯರೋಗಕ್ಕೆ ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಹಾಗೂ ಆರೋಗ್ಯ ಕೇಂದ್ರಗಳಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತದೆ. ಖಾಸಗಿ ಆಸ್ಪತ್ರೆ ವೈದ್ಯರು ಕ್ಷಯ ಲಕ್ಷಣಗಳು ಕಂಡುಬಂದರೆ ತಕ್ಷಣ ಕ್ಷಯರೋಗ ಪರೀಕ್ಷೆ ಮಾಡಿಸಬೇಕು. ಕ್ಷಯ ಕೇಂದ್ರಗಳಿಗೆ ಮಾಹಿತಿ ನೀಡಬೇಕು. ತಪ್ಪಿದ್ದಲ್ಲಿ ವೈದ್ಯಕೀಯ ನಿರ್ಲಕ್ಷ್ಯ ಕಾಯ್ದೆ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದರು.

ಕ್ಷಯರೋಗಕ್ಕೆ ತುತ್ತಾದವರಿಗೆ ವಾರದಲ್ಲಿ ಮುರು ದಿನ ಮೇಲ್ವಿಚಾರಕರು ಔಷಧಿ ನೀಡಬೇಕು. ಆರು ತಿಂಗಳವರೆಗೆ ನಿರಂತರ ಮಾತ್ರೆ ತೆಗೆದುಕೊಂಡಲ್ಲಿ ರೋಗದಿಂದ ಗುಣಮುಖರಾಗಲು ಸಾಧ್ಯ. ರೋಗಿಗೆ ಚಿಕಿತ್ಸೆ ಆರಂಭಿಸಿದ 2-3 ದಿನಗಳಲ್ಲಿ ಕಾಯಿಲೆ ಹರಡುವಿಕೆ ನಿಲ್ಲುತ್ತದೆ ಎಂದರು.

ಜಿಲ್ಲೆಯಲ್ಲಿ 2019ರಲ್ಲಿ 1910 ಟಿಬಿ ಪ್ರಕರಣಗಳು ಕಂಡುಬಂದಿದ್ದು, ಶೇ 83ರಷ್ಟು ಜನರಿಗೆ ರೋಗ ನಿವಾರಣೆಯಾದರೆ 122 ಜನ ಮರಣ ಹೊಂದಿದ್ದಾರೆ. 2020ರಲ್ಲಿ ಕೋವಿಡ್ ಹರಡುವಿಕೆಯಿಂದ ತಪ್ಪಿಸಲು ಜನರು ಅಂತರ ಕಾಪಾಡುವುದು ಸೇರಿದಂತೆ ಮುಖಗವಸು ಬಳಸಿದ್ದರಿಂದ ಪ್ರಕರಣಗಳು ಕಡಿಮೆಯಾಗಿವೆ. ಪ್ರಸ್ತುತ ಸಾಲಿನಲ್ಲಿ 1,020 ಪ್ರಕರಣಗಳಿದ್ದು ಶೇ84 ರೋಗಿಗಳು ಗುಣರಾಗಿದ್ದು, 79 ಮಂದಿ ಸಾವನ್ನಪ್ಪಿದ್ದಾರೆ. ಮರಣ ಶೇಕಡಾವಾರು ಪ್ರಮಾಣ 7.2 ರಷ್ಟಿದ್ದು, ಪ್ರಮಾಣವನ್ನು ಶೇ 6ಕ್ಕಿಂತ ಕಡಿಮೆಯಾಗುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್, ಸದಸ್ಯೆ ಗೀತಾಂಜಲಿ ಸುವರ್ಣ, ಡಿಎಚ್‌ಒ ಡಾ.ಸುಧೀರ್ ಚಂದ್ರ ಸೂಡ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಚಿದಾನಂದ ಸಂಜು, ಡಾ.ಎಂ.ಜಿ.ರಾಮ, ಪತ್ರಕರ್ತ ಸುಜಿ ಕುರಿಯ ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.