ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದ್ರಾಳಿ ಕಟ್ಟಡ ಬೆಂಕಿ ದುರಂತ: ₹ 8 ಕೋಟಿ ನಷ್ಟ

ಸುಟ್ಟು ಕರಕಲಾದ ಮಳಿಗೆಯಲ್ಲಿದ್ದ ವಸ್ತುಗಳು: ಪ್ರಾಣಹಾನಿ ಸಂಭವಿಸಿಲ್ಲ
Last Updated 24 ಜೂನ್ 2019, 15:39 IST
ಅಕ್ಷರ ಗಾತ್ರ

ಉಡುಪಿ: ಇಂದ್ರಾಳಿಯಲ್ಲಿರುವ ಬಹುಮಹಡಿ ಕಟ್ಟಡದಲ್ಲಿ ಭಾನುವಾರ ರಾತ್ರಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಅಂದಾಜು ₹ 8 ಕೋಟಿ ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ.

ಮೊದಲ ಹಾಗೂ ಎರಡನೇ ಮಹಡಿಯಲ್ಲಿದ್ದ ಬೈಕ್‌ ಶೋರೂಂಗೆ ಹೆಚ್ಚಿನ ಹಾನಿಯಾಗಿದ್ದು, ₹ 7 ಕೋಟಿಯಷ್ಟು ನಷ್ಟ ಸಂಭವಿಸಿದೆ ಎನ್ನಲಾಗಿದೆ. ಶೋರಂನಲ್ಲಿ ನಿಲ್ಲಿಸಲಾಗಿದ್ದ ಹಲವು ಬೈಕ್‌ಗಳು ಸುಟ್ಟುಹೋಗಿವೆ. ಟೈರ್‌ಗಳು ಭಸ್ಮವಾಗಿವೆ.

ಕೆಳ ಮಹಡಿಯಲ್ಲಿದ್ದ ಬಟ್ಟೆ ಅಂಗಡಿಗೆ ಭಾಗಶಃ ಹಾನಿಯಾಗಿದ್ದು, ₹ 7 ಲಕ್ಷದಷ್ಟು ನಷ್ಟವಾಗಿದೆ. ಜಿಮ್‌ ಕೂಡ ಸುಟ್ಟಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಪರಿಕರಗಳು ಹಾಳಾಗಿವೆ. ಇದೇ ಮಹಡಿಯಲ್ಲಿದ್ದ ಕಚೇರಿಯೊಂದು ಸಂಪೂರ್ಣ ಸುಟ್ಟುಹೋಗಿದ್ದು, ₹ 69 ಲಕ್ಷದಷ್ಟು ಹಾನಿಯಾಗಿದೆ.

ಶಾರ್ಟ್‌ ಸರ್ಕೀಟ್‌ ಕಾರಣ:ಪ್ರಾಥಮಿಕ ಹಂತದ ತನಿಖೆಯಲ್ಲಿ ಬೆಂಕಿ ಅವಘಡಕ್ಕೆ ಶಾರ್ಟ್‌ ಸರ್ಕೀಟ್‌ ಕಾರಣ ಎಂಬ ನಿರ್ಧಾರಕ್ಕೆ ಬರಲಾಗಿದೆ. ಬಹುಮಹಡಿ ಕಟ್ಟಡದ ವಿದ್ಯುತ್ ಬೋರ್ಡ್‌ನಲ್ಲಿ ಕಾಣಿಸಿಕೊಂಡು ಬೆಂಕಿಯ ಕಿಡಿ, ಇಡೀ ಕಟ್ಟಡವನ್ನು ವ್ಯಾಪಿಸಿದೆ ಎನ್ನಲಾಗಿದೆ.

ತಪ್ಪಿದ ದೊಡ್ಡ ಅನಾಹುತ:ಅಗ್ನಿಗಾಹುತಿಯಾದ ಕಟ್ಟಡದ ಪಕ್ಕದಲ್ಲೇ ಪೆಟ್ರೋಲ್ ಬಂಕ್ ಇದೆ. ಬೆಂಕಿಯ ಕೆನ್ನಾಲಗೆ ಪೆಟ್ರೋಲ್ ಬಂಕ್‌ಗೆ ವ್ಯಾಪಿಸಿದ್ದರೆ ದೊಡ್ಡ ಅನಾಹುತವೇ ಸಂಭವಿಸುತ್ತಿತ್ತು. ಅದೃಷ್ಟವಶಾತ್, ಬೆಂಕಿ ಕಾಣಿಸಿಕೊಂಡ ತಕ್ಷಣ ಅಗ್ನಿಶಾಮ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ಹರಡದಂತೆ ಎಚ್ಚರವಹಿಸಿದರು.

ಮಧ್ಯರಾತ್ರಿವರೆಗೂ ಆರದ ಬೆಂಕಿ:ಕಟ್ಟದ ಎರಡು ಮಳಿಗೆಗೆ ವ್ಯಾಪಿಸಿದ್ದ ಬೆಂಕಿಯನ್ನು ಸುಲಭವಾಗಿ ಆರಿಸಲು ಸಾಧ್ಯವಾಗಲಿಲ್ಲ. ಎಷ್ಟೇ ನೀರು ಸಿಂಪಡಿಸಿದರೂ ಆಗಾಗ ಬೆಂಕಿಯ ಜ್ವಾಲೆ ಕಾಣಿಸಿಕೊಳ್ಳುತ್ತಲೇ ಇತ್ತು. ಪರಿಣಾಮ ಇಡೀ ಕಟ್ಟಡ ಬೆಂಕಿಗೆ ಆಹುತಿಯಾಗುವ ಅಪಾಯವಿತ್ತು. ಅಷ್ಟರೊಳಗೆ ನಿರಂತರವಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ನೀರನ್ನು ಸಿಂಪರಿಸಿ ಬೆಂಕಿಯನ್ನು ನಂದಿಸಿದರು.

ದಟ್ಟವಾದ ಹೊಗೆ:ಕಟ್ಟಡದ ಹೊರಭಾಗಕ್ಕೆ ಅಳವಡಿಸಲಾಗಿದ್ದ ಪೈಬರ್ ವಸ್ತುಗಳು, ಬೈಕ್ ಶೋರಂನ ಟೈರ್‌ ಹಾಗೂ ಕಟ್ಟಡದ ಮುಂಭಾಗ ಹಾಕಿದ್ದ ಬೋರ್ಡ್‌ಗಳು ಹೊತ್ತಿ ಉರಿದ ಪರಿಣಾಮ ಆಕಾಶದೆತ್ತರಕ್ಕೆ ದಟ್ಟವಾದ ಕರಿ ಮೋಡ ಆವರಿಸಿತ್ತು. ಕುಂಜಿಬೆಟ್ಟುವಿನವರೆಗೂ ಹೊಗೆಯ ವಾಸನೆ ಮೂಗಿಗೆ ಬಡಿಯುತ್ತಿತ್ತು.

ಯುವಕರ ನೆರವು:ಬೆಂಕಿ ತಹಬದಿಗೆ ಬರುತ್ತಿದ್ದಂತೆ ಸ್ಥಳೀಯ ಯುವಕರು ಅಂಗಡಿ ಮಾಲೀಕರ ನೆರವಿಗೆ ನಿಂತರು. ಬಟ್ಟೆ ಅಂಗಡಿಗೆ ನುಗ್ಗಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಬಟ್ಟೆ ಹಾಗೂ ಇತರ ಎಲೆಕ್ಟ್ರಾನಿಕ್‌ ವಸ್ತುಗಳನ್ನು ಹೊರಗೆ ತಂದರು.

ವಿದ್ಯುತ್ ಕಡಿತ:ಅವಘಡ ಸಂಭವಿಸುತ್ತಿದ್ದಂತೆ ಮುಂಜಾಗ್ರತಾ ಕ್ರಮವಾಗಿ ವಿದ್ಯುತ್ ಕಡಿತ ಮಾಡಲಾಗಿತ್ತು. ಪರಿಣಾಮ ಪರಿಹಾರ ಕಾರ್ಯಾಚರಣೆಗೆ ಅಡ್ಡಿಯಾಗಿತ್ತು. ಈ ಸಂದರ್ಭಸ್ಥಳೀಯರು ಟಾರ್ಚ್‌ಗಳನ್ನು ಕೊಟ್ಟು ನೆರವಿಗೆ ಕೈಜೋಡಿಸಿದರು. ಮಧ್ಯರಾತ್ರಿವರೆಗೂ ಕಾರ್ಯಾಚರಣೆ ನಡೆಯಿತು.

ಬಹುಮಹಡಿ ಕಟ್ಟದಲ್ಲಿಜೈದೇವ್ ಮೋಟಾರ್ಸ್, ಆ್ಯಮ್‌ ಕೇರ್ ಡೆಂಟಲ್ ಕ್ಲಿನಿಕ್‌, ಅಡಿಕ್ಷನ್ ಮಳಿಗೆ, ವಿನ್ಯಾಸ್ ಅಕಾಡೆಮಿ, ಜಿಮ್ ಹಾಗೂ ಡೆಂಟಲ್ ಕ್ಲಿನಿಕ್‌ ಸೇರಿದಂತೆ ಹಲವು ಮಳಿಗೆಗಳು ಇದ್ದವು. ಹಿಂಭಾಗದಲ್ಲಿ ವಸತಿ ಅಪಾರ್ಟ್‌ಮೆಂಟ್‌ ಕೂಡ ಇತ್ತು. ಅವಘಡ ಸಂಭವಿಸುತ್ತಿದ್ದಂತೆ ಅಪಾರ್ಟ್‌ಮೆಂಟ್‌ನಲ್ಲಿದ್ದವರನ್ನು ಕೆಳಗಿಳಿಸಲಾಯಿತು.

ಸೋಮವಾರ ಬೆಳಿಗ್ಗೆ ಶಾಸಕ ರಘುಪತಿ ಭಟ್‌ ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಅವಘಡ ಸಂಬಂಧ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT