ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚಾಯಿತಿ ಸಮರ: ಉಡುಪಿಯಲ್ಲಿ ಕೋವಿಡ್ ಭೀತಿ ಬಿಟ್ಟು ಮತ ಹಾಕಿದ ಮತದಾರ

ಮೊದಲ ಹಂತದ ಚುನಾವಣೆ ಮುಕ್ತಾಯ; ಮತಪೆಟ್ಟಿಗೆ ಸೇರಿದ 1,343 ಅಭರ್ಥಿಗಳ ಭವಿಷ್ಯ
Last Updated 22 ಡಿಸೆಂಬರ್ 2020, 14:22 IST
ಅಕ್ಷರ ಗಾತ್ರ

ಉಡುಪಿ: ಜಿಲ್ಲೆಯ ಉಡುಪಿ, ಹೆಬ್ರಿ, ಕಾಪು ಹಾಗೂ ಬೈಂದೂರು ತಾಲ್ಲೂಕಿನ 66 ಗ್ರಾಮ ಪಂಚಾಯಿತಿಗಳಿಗೆ ಮಂಗಳವಾರ ಮೊದಲ ಹಂತದ ಚುನಾವಣೆ ನಡೆಯಿತು. ಕೋವಿಡ್‌–19 ಆತಂಕದ ನಡುವೆಯೂ ಮತದಾರರು ನಿರ್ಭೀತಿಯಿಂದ ಹಕ್ಕು ಚಲಾಯಿಸಿದರು. ಬೆಳಿಗ್ಗೆ 7ಕ್ಕೆ ಮತಗಟ್ಟೆ ತೆರೆಯುತ್ತಿದ್ದಂತೆ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡುವ ಮೂಲಕ ಪ್ರಜಾತಂತ್ರದ ಹಬ್ಬದಲ್ಲಿ ಭಾಗವಹಿಸಿದರು. ‘ಪ್ರಜಾವಾಣಿ’ಯ ಮತಗಟ್ಟೆ ಪ್ರವಾಸದ ಸಂದರ್ಭ ಕಂಡುಬಂದ ಮಾಹಿತಿ ವಿವರ ಇಲ್ಲಿದೆ.

ಕೋವಿಡ್‌–19 ಹಿನ್ನೆಲೆಯಲ್ಲಿ ಸುರಕ್ಷತಾ ಕ್ರಮಗಳಿಗೆ ಒತ್ತು ನೀಡಲಾಗಿತ್ತು. ಮಾಸ್ಕ್‌ ಧರಿಸಿ ಬಂದವರಿಗೆ ಮಾತ್ರ ಮತಗಟ್ಟೆ ಪ್ರವೇಶಕ್ಕೆ ಅನುಮತಿ ನೀಡಲಾಯಿತು. ಮತದಾನಕ್ಕೂ ಮುನ್ನ ಸ್ಯಾನಿಟೈಸರ್ ಹಾಕಿ, ದೇಹದ ಉಷ್ಣತೆ ತಪಾಸಣೆ ನಡೆಸಿ ಮತದಾನ ಮಾಡಲು ಬಿಡಲಾಯಿತು. ಜತೆಗೆ, ಸರದಿಯಲ್ಲಿ ನಿಂತವರಿಗೆ ಅಂತರ ಕಾಯ್ದುಕೊಳ್ಳುವಂತೆ ಸಿಬ್ಬಂದಿ ಸೂಚಿಸುತ್ತಿದ್ದ ದೃಶ್ಯ ಕಂಡುಬಂತು.

ಬೆಳಿಗ್ಗೆ 9.30ಕ್ಕೆ ಉಡುಪಿ ತಾಲ್ಲೂಕಿನ ಆತ್ರಾಡಿ ಗ್ರಾಮ ಪಂಚಾಯಿತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಗೆ ಭೇಟಿ ನೀಡಿದಾಗ ಮತದಾರರ ಉತ್ಸಾಹ ಎದ್ದು ಕಾಣುತ್ತಿತ್ತು. ಮೊದಲ ಸಲ ಪಂಚಾಯಿತಿ ಚುನಾವಣೆಗೆ ಮತಹಾಕಿದ ಯುವತಿಯರು ಸಂಭ್ರಮಿಸಿದರು.

ಹಿರಿಯಡ್ಕದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಬೊಮ್ಮರಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮತದಾನ ನಡೆಯಿತು. ಜಿಲ್ಲಾಧಿಕಾರಿ ಜಿ.ಜಗದೀಶ್‌ ಹಾಗೂ ಎಸ್‌ಪಿ ವಿಷ್ಣುವರ್ಧನ್‌ ಮತಗಟ್ಟೆಗೆ ಭೇಟಿನೀಡಿ ಪರಿಶೀಲನೆ ನಡೆಸಿದರು. ಮತ ಚಲಾವಣೆಗೆ ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿತ್ತು. ಹಿರಿಯರು ಕಿರಿಯರ ನೆರವಿನೊಂದಿಗೆ ಮತ ಚಲಾಯಿಸಿದ ದೃಶ್ಯ ಕಂಡುಬಂತು.

ಪೆರ್ಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚುನಾವಣೆ ಪಾಡಿಗಾರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ನಡೆಯಲು ಅಶಕ್ತರಾದ ವೃದ್ಧರು ಹಾಗೂ ಅಂಗವಿಕಲರಿಗೆ ವೀಲ್‌ಚೇರ್ ವ್ಯವಸ್ಥೆ ಮಾಡಲಾಗಿತ್ತು. ಬಿಸಿಲು ನೆತ್ತಿಗೇರುತ್ತಿದ್ದಂತೆ ಮತದಾನದ ಪ್ರಮಾಣವೂ ಹೆಚ್ಚಾಗುತ್ತಾ ಹೋಯಿತು.

ಹೆಬ್ರಿ ತಾಲ್ಲೂಕಿನ ನಾಡ್ಪಾಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮತದಾನ ಸೋಮೇಶ್ವರ ಪೇಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ನಕ್ಸಲ್‌ ಬಾಧಿತ ಸೂಕ್ಷ್ಮ ಮತಗಟ್ಟೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಶಸ್ತ್ರಸಜ್ಜಿತ ಪೊಲೀಸರನ್ನು ನಿಯೋಜಿಸಲಾಗಿತ್ತು. ಹೆಸರಿಗಷ್ಟೆ ಸೂಕ್ಷ್ಮ ಮತಗಟ್ಟೆಯಾಗಿದ್ದು, ಮತದಾರರು ನಿರ್ಭೀತಿಯಿಂದ ಮತ ಚಲಾಯಿಸಿದರು.

ಸಮೀಪದ ಕಾಸಿನಮಕ್ಕಿ ಗ್ರಾಮ ಪಂಚಾಯಿತಿಯ ಚುನಾವಣೆ ಕಾಸಿನಮಕ್ಕಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಸೂಕ್ಷ್ಮಮತಗಟ್ಟೆಯಾಗಿದ್ದರಿಂದ ಬಿಗಿ ಭದ್ರತೆ ಒದಗಿಸಲಾಗಿತ್ತು. ಮತಗಟ್ಟೆಗೆ ಬರುವವರ ಚಿತ್ರೀಕರಣದ ವ್ಯವಸ್ಥೆ ಮಾಡಲಾಗಿತ್ತು. ಜಿಲ್ಲಾ ಚುನಾವಣಾ ವೀಕ್ಷಕರಾದ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ದಿನೇಶ್ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸಿದರು.

ಬೈಂದೂರು ತಾಲ್ಲೂಕಿನ ಯಳಜಿತ್ ಪಂಚಾಯಿತಿಯ ಮತದಾನ ಯಳಜಿತ್ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಹಾಗೂ ಜಡ್ಕಲ್‌ ಗ್ರಾಮ ಪಂಚಾಯಿತಿ ಚುನಾವಣೆ ಜಡ್ಕಲ್‌ ಗ್ರಾಮದ ಶಾಲೆಯಲ್ಲಿ ನಡೆಯಿತು. ಸಾರ್ವಜನಿಕರು ಉತ್ಸಾಹದಿಂದ ಮತದಾನ ಮಾಡುತ್ತಿದ್ದ ದೃಶ್ಯ ಕಂಡುಬಂತು. ಯಳಜಿತ್‌ನಲ್ಲಿ ಒಂದೇ ಕುಟುಂಬ ಸದಸ್ಯರ ಹೆಸರು ಬೇರೆ ಬೇರೆ ಮತಗಟ್ಟೆಯಲ್ಲಿರುವುದಕ್ಕೆ ಆಕ್ಷೇಪ ವ್ಯಕ್ತವಾಯಿತು. ಒಂದೇ ಕುಟುಂಬ ಸದಸ್ಯರ ಹೆಸರು ಬೇರೆ ಬೇರೆ ಬೂತ್‌ಗಳಿಗೆ ಹಾಕಲಾಗಿದೆ. ಅಧಿಕಾರಿಗಳ ತಪ್ಪಿನಿಂದಾಗಿ ಕೆಲವರು ಮತದಾನ ಮಾಡದೆ ಮನೆಗೆ ಹಿಂದಿರುಗಿದರು ಎಂದು ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದರು.

ಬಳಿಕ ಬ್ರಹ್ಮಾವರ ತಾಲ್ಲೂಕಿನ ಉಪ್ಪೂರು ಪಂಚಾಯಿತಿ ಚುನಾವಣೆ ಅಲ್ಲಿನ ಸರ್ಕಾರಿ ಶಾಲೆಯಲ್ಲಿ ನಡೆಯಿತು. ಸಂಜೆ 4ರ ಹೊತ್ತಿಗೆ ಉಪ್ಪೂರಿನ ಒಂದು ಬೂತ್‌ನಲ್ಲಿ 666 ಮತಗಳ ಪೈಕಿ 497 ಮತ ಚಲಾವಣೆಯಾಗಿತ್ತು. ಮತ್ತೊಂದು ಬೂತ್‌ನಲ್ಲಿ 684 ಮತಗಳ ಪೈಕಿ 550 ಮತಗಳು ಚಲಾಯಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT