ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ | 15 ದಿನಗಳೊಳಗೆ ಸೀಮೆಎಣ್ಣೆ ಹಂಚಿಕೆ ಮಾಡದಿದ್ದರೆ ಹೋರಾಟ ಎಂದ ಮೀನುಗಾರರು

Last Updated 4 ಡಿಸೆಂಬರ್ 2022, 4:50 IST
ಅಕ್ಷರ ಗಾತ್ರ

ಉಡುಪಿ: ಕರಾವಳಿಯ ಎಲ್ಲ ನಾಡದೋಣಿ ಮೀನುಗಾರರಿಗೆ 15 ದಿನಗಳೊಳಗೆ ಸೀಮೆಎಣ್ಣೆ ಬಿಡುಗಡೆ ಮಾಡದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ರಾಜ್ಯ ನಾಡದೋಣಿ ಮೀನುಗಾರರ ಒಕ್ಕೂಟದ ಅಧ್ಯಕ್ಷ ಆನಂದ ಖಾರ್ವಿ ಎಚ್ಚರಿಕೆ ನೀಡಿದರು.

ಶನಿವಾರ ಜಿಲ್ಲಾಧಿಕಾರಿ ಕಚೇರಿ ಎದುರು ಬೈಂದೂರು, ಕುಂದಾಪುರ ತಾಲ್ಲೂಕು ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಒಕ್ಕೂಟದ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನ.2ರಂದು ಕೇಂದ್ರ ಸರ್ಕಾರ ಕರಾವಳಿಯ ನಾಡದೋಣಿ ಮೀನುಗಾರರಿಗೆ ಸೀಮೆಎಣ್ಣೆ ಬಿಡುಗಡೆ ಮಾಡಿದ್ದು ಇದುವರೆಗೂ ಸಮರ್ಪಕವಾಗಿ ವಿತರಣೆ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರದಿಂದ ಸಬ್ಸಿಡಿ ಸೀಮೆಎಣ್ಣೆ ಬಿಡುಗಡೆಯಾಗದಿದ್ದರೆ ರಾಜ್ಯ ಸರ್ಕಾರವೇ ಕೈಗಾರಿಕೆಗಳ ಬಳಕೆಗೆ ಇರುವ ಸೀಮೆಎಣ್ಣೆ ಖರೀದಿಸಿ ವಿತರಿಸಬೇಕು. ಸಾಂಪ್ರದಾಯಿಕ ದೋಣಿಗಳಿಗೆ ಮೋಟಾರ್ ಅಳವಡಿಕೆಗೆ ಇರುವ ಸಹಾಯಧನವನ್ನು ನಿಲ್ಲಿಸಲಾಗಿದ್ದು, ಕೂಡಲೇ ಬಾಕಿ ಫಲಾನುಭವಿಗಳಿಗೆ ಸಹಾಯಧನ ಬಿಡುಗಡೆ ಮಾಡಬೇಕು.

ಪ್ರಾಕೃತಿಕ ವಿಕೋಪದಿಂದ ಹಾಳಾಗಿರುವ ನಾಡದೋಣಿಗಳಿಗೆ ಗರಿಷ್ಠ ಪರಿಹಾರ ವಿತರಿಸಬೇಕು. ಬಜೆಟ್‌ನಲ್ಲಿ ನಾಡದೋಣಿ ಮೀನುಗಾರರಿಗೆ ಸೌಲಭ್ಯ ಕಲ್ಪಿಸಲು 500 ಕೋಟಿ ಅನುದಾನ ಮೀಸಲಿಡಬೇಕು ಎಂದು ಒತ್ತಾಯಿಸಿದರು.

ಮಾಜಿ ಶಾಸಕ ಗೋಪಾಲ್ ಪೂಜಾರಿ ಮಾತನಾಡಿ, ಸಮಯಕ್ಕೆ ಸರಿಯಾಗಿ ಸೀಮೆಎಣ್ಣೆ ಬಿಡುಗಡೆಯಾಗದ ಪರಿಣಾಮ ನಾಡದೋಣಿ ಮೀನುಗಾರಿಕೆಗೆ ಅಡ್ಡಿಯಾಗಿದೆ. ಸಮರ್ಪಕವಾಗಿ ಸೀಮೆಎಣ್ಣೆ ಬಿಡುಗಡೆ ಮಾಡದಿದ್ದರೆ ತೀವ್ರ ಹೋರಾಟ ಅನಿವಾರ್ಯ ಎಂದರು.

ಕರ್ನಾಟಕ ಕರಾವಳಿ ಮೀನುಗಾರರ ಕ್ರಿಯಾಸಮಿತಿ ಅಧ್ಯಕ್ಷ ಜಯ ಸಿ.ಕೋಟ್ಯಾನ್ ಮಾತನಾಡಿ ಮೀನುಗಾರರ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನೆಗೂ ಮುನ್ನ ಮೀನುಗಾರರ ಜಾಥಾ ನಡೆಯಿತು. ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್‌.ವೀಣಾ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಮಾಜಿ ಸಚಿವ ವಿನಯ ಕುಮಾರ ಸೊರಕೆ, ಮೀನುಗಾರ ಮುಖಂಡರಾದ ಗೋಪಾಲ್‌, ರಾಮಚಂದ್ರ ಖಾರ್ವಿ, ರಮೇಶ್ ಕಾಂಚನ್‌ ಮದನ್ ಕುಮಾರ್, ಪುರಂದರ್ ಕೋಟ್ಯಾನ್, ಮಹಮ್ಮದ್ ಅಜೀಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT