ಮೀನುಗಾರರಲ್ಲಿ ಜೀವ ಭಯ: ಕಡಲಿಗಿಳಿಯದ ಬೋಟ್‌ಗಳು

7
ಮಲ್ಪೆ ಬಂದರಿನಲ್ಲಿ ಕೋಟ್ಯಂತರ ರೂಪಾಯಿ ಆರ್ಥಿಕ ವಹಿವಾಟು ಸ್ಥಬ್ಧ

ಮೀನುಗಾರರಲ್ಲಿ ಜೀವ ಭಯ: ಕಡಲಿಗಿಳಿಯದ ಬೋಟ್‌ಗಳು

Published:
Updated:
Prajavani

ಉಡುಪಿ: ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಬೋಟ್‌ ನಾಪತ್ತೆಯಾಗಿ 18 ದಿನಗಳು ಕಳೆದರೂ ಪತ್ತೆಯಾಗಿಲ್ಲ. ಪರಿಣಾಮ ಸಮುದ್ರಕ್ಕಿಳಿಯಲು ಮೀನುಗಾರರು ಹೆದರುತ್ತಿದ್ದಾರೆ. ಬಂದರಿನಲ್ಲಿ ನೂರಾರು ಬೋಟ್‌ಗಳು ಲಂಗರು ಹಾಕಿಕೊಂಡಿದ್ದು, ಎಲ್ಲೆಡೆ ನೀರವ ಮೌನ ಆವರಿಸಿದೆ.

ಮಲ್ಪೆ ರಾಜ್ಯದ ಪ್ರಮುಖ ಮೀನುಗಾರಿಕಾ ಬಂದರು. ಇಲ್ಲಿ 2,100 ಬೋಟ್‌ಗಳು ಮೀನುಗಾರಿಕೆಯಲ್ಲಿ ತೊಡಗಿಕೊಂಡಿವೆ. ಈ ಪೈಕಿ ಆಳ ಸಮುದ್ರದಲ್ಲಿ ಮೀನುಗಾರಿಕೆ ಮಾಡುವ ದೊಡ್ಡ ಬೋಟ್‌ಗಳ ಸಂಖ್ಯೆಯೇ ಸಾವಿರಕ್ಕೂ ಹೆಚ್ಚಾಗಿವೆ. ಉಳಿದಂತೆ ಪರ್ಸಿನ್‌ ಹಾಗೂ ಡಿಸಿ ಬೋಟ್‌ಗಳಲ್ಲಿ ಮೀನು ಹಿಡಿಯಲಾಗುತ್ತದೆ. ಪ್ರತಿದಿನ ಕೋಟ್ಯಂತರ ರೂಪಾಯಿ ವಹಿವಾಟು ನಡೆಯುತ್ತದೆ.

ಬೋಟ್‌ ನಾಪತ್ತೆ ಹಿನ್ನೆಲೆಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯುತ್ತಿಲ್ಲ. 1,500ಕ್ಕೂ ಹೆಚ್ಚು ಬೋಟ್‌ಗಳು ಬಂದರಿನಲ್ಲಿ ಲಂಗರು ಹಾಕಿಕೊಂಡಿವೆ. ಚಿಕ್ಕ ಬೋಟ್‌ಗಳಷ್ಟೇ ಕಡಲಿಗಿಳಿದಿವೆ.‌ ಬೋಟ್‌ ಪತ್ತೆಯಾಗದಿದ್ದರೆ ಕೆಲವೇ ದಿನಗಳಲ್ಲಿ ಮೀನುಗಾರಿಕೆ ಸಂಪೂರ್ಣ ನಿಂತುಹೋಗಲಿದೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಮಲ್ಪೆ ಮೀನುಗಾರಿಕಾ ಸಂಘದ ಅಧ್ಯಕ್ಷ ಸತೀಶ್ ಕುಂದರ್.

ಸಮುದ್ರಕ್ಕೆ ಇಳಿದರೆ ಎಲ್ಲಿ ಬೋಟ್‌ ನಾಪತ್ತೆಯಾಗುವುದೊ ಎಂಬ ಭಯ ಮೀನುಗಾರರನ್ನು ಕಾಡುತ್ತಿದೆ. ಹಾಗಾಗಿ, ಮೀನುಗಾರಿಕೆ ಮಾಡಲು ಹೆಚ್ಚಿನವರು ಧೈರ್ಯ ತೋರುತ್ತಿಲ್ಲ. ಆರ್ಥಿಕ ವಹಿವಾಟು ಸ್ಥಬ್ಧವಾಗಿದೆ ಎನ್ನುತ್ತಾರೆ ಅವರು. 

ಬೋಟ್‌ ನಾಪತ್ತೆಯಾದ ಬಳಿಕ ಕಾರ್ಮಿಕರ ಅಭಾವ ಎದುರಾಗಿದೆ. ಬದುಕಿದ್ದರೆ ಬೇರೆ ವೃತ್ತಿ ಮಾಡಬಹುದು. ಜೀವಕ್ಕೆ ಕುತ್ತು ತರುವಂತಹ ಕೆಲಸ ಮಾಡುವುದಿಲ್ಲ ಎಂದು ಕಾರ್ಮಿಕರು ಭಯ ವ್ಯಕ್ತಪಡಿಸುತ್ತಿದ್ದಾರೆ ಎಂದು ಕುಂದರ್ ಪರಿಸ್ಥಿತಿಯನ್ನು ವಿವರಿಸಿದರು.

ಸರ್ಕಾರ ಮೀನುಗಾರರನ್ನು ಮಲತಾಯಿ ಮಕ್ಕಳಂತೆ ನೋಡುತ್ತಿದೆ. ಬೆಲೆ ಕುಸಿದಾಗ, ಅತಿವೃಷ್ಟಿ, ಅನಾವೃಷ್ಟಿ ಸಂಭವಿಸಿದಾಗ ರೈತರ ನೆರವಿಗೆ ಧಾವಿಸುವ ಸರ್ಕಾರ, ಮೀನುಗಾರರು ನಾಪತ್ತೆಯಾಗಿ 18 ದಿನ ಕಳೆದರೂ ತಲೆ ಕೆಡಿಸಿಕೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜೀವ ಪಣಕ್ಕಿಟ್ಟು, ಕುಟುಂಬ ವರ್ಗದವರನ್ನೆಲ್ಲ ಬಿಟ್ಟು ಮೀನುಗಾರರು ಸಮುದ್ರಕ್ಕಿಳಿಯುತ್ತಾರೆ. ಅವರ ಜೀವಗಳಿಗೆ ಬೆಲೆ ಇಲ್ಲವೇ? ಕಾಣೆಯಾದ ಮೀನುಗಾರರನ್ನು ಪತ್ತೆ ಮಾಡುವಷ್ಟು ತಂತ್ರಜ್ಞಾನ ಸರ್ಕಾರದ ಬಳಿ ಇಲ್ಲವೇ ಎಂದು ಪ್ರಶ್ನಿಸುತ್ತಾರೆ ಅವರು.

ನಾಪತ್ತೆಯಾದ ಮೀನುಗಾರರ ಕುಟುಂಬಗಳಲ್ಲಿ ಆತಂಕ ಮಡುಗಟ್ಟಿದೆ. ಪ್ರತಿದಿನ ಸಂಘದ ಕಚೇರಿಗೆ ಬಂದು ಕುಟುಂಬದ ಸದಸ್ಯರ ಬಗ್ಗೆ ವಿಚಾರಿಸುತ್ತಾರೆ. ಅವರಿಗೆ ಸಾಂತ್ವನ ಹೇಳುವ ಧೈರ್ಯವೂ ಬರುತ್ತಿಲ್ಲ. ಹೇಗಾದರೂ ಮಾಡಿ ನಾಪತ್ತೆಯಾಗಿರುವ ಮೀನುಗಾರರನ್ನು ಪತ್ತೆ ಮಾಡಿಕೊಡಬೇಕು. ಇಲ್ಲವಾದರೆ ಡಿ.6ರಂದು ಹೆದ್ದಾರಿ ತಡೆದು ಪ್ರತಿಭಟಿಸುತ್ತೇವೆ. ಬಗ್ಗದಿದ್ದರೆ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಕುಂದರ್ ಎಚ್ಚರಿಸಿದರು.

 ‘ಬೋಟ್‌ ಅಪಹರಣ ಶಂಕೆ’
ಬೋಟ್‌ ಅವಘಡಕ್ಕೆ ತುತ್ತಾಗಿದ್ದರೆ ಅವಶೇಷಗಳು ನೀರಿನಲ್ಲಿ ತೇಲಬೇಕಿತ್ತು. ತೈಲ ಸೋರಿಕೆಯಾಗಿ ಪತ್ತೆಯಾಗಬೇಕಿತ್ತು. ಆದರೆ, ಅಂತಹ ಕುರುಹುಗಳು ಕಂಡುಬಂದಿಲ್ಲ. ಕಡಲ್ಗಳ್ಳರು ಅಥವಾ ಮೀನುಗಾರರು ದ್ವೇಷದಿಂದ ಬೋಟ್ ಅಪಹರಿಸಿರಬಹುದು. ಕೇಂದ್ರ ಸರ್ಕಾರ ಎಲ್ಲ ದಿಕ್ಕಿನಿಂದಲೂ ತನಿಖೆ ನಡೆಸಿ ಮೀನುಗಾರರ ಪತ್ತೆ ಮಾಡಬೇಕು ಎಂದು ಮುಖಂಡರು ಒತ್ತಾಯಿಸಿದ್ದಾರೆ.

‘ತೀವ್ರ ಶೋಧ’
ಡಿ.12ರಂದು 7 ಮೀನುಗಾರರನ್ನು ಹೊತ್ತ ‘ಸುವರ್ಣ ತ್ರಿಭುಜ’ ಹೆಸರಿನ ಬೋಟ್‌ ಆಳಸಮುದ್ರ ಮೀನುಗಾರಿಕೆಗೆ ತೆರಳಿತ್ತು. ಡಿ.15ರ ಮಧ್ಯರಾತ್ರಿಯವರೆಗೂ ಸಂಪರ್ಕದಲ್ಲಿದ್ದ ಬೋಟ್‌ ಇದ್ದಕ್ಕಿದ್ದಂತೆ ನಾಪತ್ತೆಯಾಗಿತ್ತು. ಗುಂಪು ಮೀನುಗಾರಿಕೆಗೆ ತೆರಳಿದ್ದ ಇತರ ಬೋಟ್‌ಗಳು ನಾಪತ್ತೆಯಾದ ಬೋಟ್‌ ಹುಡುಕಲು ಪ್ರಯತ್ನ ನಡೆಸಿದ್ದರೂ ಪ್ರಯೋಜನವಾಗಿರಲಿಲ್ಲ. ಬಳಿಕ ಮಲ್ಪೆ ಪೊಲೀಸ್‌ ಠಾಣೆಗೆ ದೂರು ನೀಡಲಾಗಿತ್ತು. ಕರಾವಳಿ ಕಾವಲು ಪಡೆ, ಪೊಲೀಸರು ತೀವ್ರ ಹುಡುಕಾಟ ನಡೆಸಿದರೂ ಪ್ರಯೋಜನವಾಗಿರಲಿಲ್ಲ. ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿಯಿಂದ ದಾಮೋದರ, ಲಕ್ಷ್ಮಣ, ಸತೀಶ, ರವಿ, ಹರೀಶ, ರಮೇಶ, ಜೋಗಯ್ಯ ಮೀನುಗಾರಿಕೆಗೆ ಸಮುದ್ರಕ್ಕೆ ತೆರಳಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !