ಮೀನುಗಾರರ ಪತ್ತೆಗೆ ಕೇಂದ್ರ ಗೃಹ ಸಚಿವರಿಗೆ ಮನವಿ

7
ರಾಜನಾಥ್‌ ಸಿಂಗ್ ಅವರಿಗೆ ಮನವಿ ಸಲ್ಲಿಸಿದ ಬಿಜೆಪಿ ನಿಯೋಗ

ಮೀನುಗಾರರ ಪತ್ತೆಗೆ ಕೇಂದ್ರ ಗೃಹ ಸಚಿವರಿಗೆ ಮನವಿ

Published:
Updated:
Prajavani

ಉಡುಪಿ: ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಸುವರ್ಣ ತ್ರಿಭುಜ ಎಂಬ ಬೋಟ್‌ ಡಿ.15ರಂದು ನಾಪತ್ತೆಯಾಗಿದ್ದು, ಇದುವರೆಗೂ ಪತ್ತೆಯಾಗಿಲ್ಲ. ತಕ್ಷಣ ಮೀನುಗಾರರ ರಕ್ಷಣೆಗೆ ಕೇಂದ್ರ ಸರ್ಕಾರ ನೆರವು ನೀಡಬೇಕು ಎಂದು ಒತ್ತಾಯಿಸಿ ಕೇಂದ್ರ ಸಚಿವ ಸದಾನಂದ ಗೌಡ ನೇತೃತ್ವದಲ್ಲಿ ಬಿಜೆಪಿ ನಾಯಕರು, ಮೀನುಗಾರ ಮುಖಂಡರು ಗುರುವಾರ ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಅವರಿಗೆ ಮನವಿ ಸಲ್ಲಿಸಿದರು.

ಬೋಟ್‌ ನಾಪತ್ತೆಯಿಂದಾಗಿ ಕರಾವಳಿ ಭಾಗದ ಮೀನುಗಾರರು ಆತಂಕದಲ್ಲಿದ್ದಾರೆ. ನಾಪತ್ತೆಯಾದ ಮೀನುಗಾರರ ಕುಟುಂಬದಲ್ಲಿ ದುಃಖ ಮಡುಗಟ್ಟಿದೆ. ಕೂಡಲೇ ಬೋಟ್ ಪತ್ತೆಗೆ ಕ್ರಮತೆಗೆದುಕೊಳ್ಳುವಂತೆ ಮನವಿ ಮಾಡಿದರು.

ಮನವಿಗೆ ಸ್ಪಂದಿಸಿದ ಸಚಿವರು ಬೋಟ್‌ ಪತ್ತೆಗೆ ತಕ್ಷಣ ಕ್ರಮ ತೆಗೆದುಕೊಳ್ಳುವಂತೆ ರಕ್ಷಣಾ ಕಾರ್ಯದರ್ಶಿಗೆ ಸೂಚನೆ ನೀಡಿದರು ಎಂದು ಬಿಜೆಪಿ ಮುಖಂಡರು ತಿಳಿಸಿದ್ದಾರೆ.

ನಿಯೋಗದಲ್ಲಿ ಸಂಸದ ನಳಿನ್ ಕುಮಾರ್ ಕಟೀಲು, ಶಾಸಕರಾದ ರಘುಪತಿ ಭಟ್‌, ಲಾಲಾಜಿ ಮೆಂಡನ್‌, ದಕ್ಷಿಣಕನ್ನಡ ಮೊಗವೀರ ಮಹಾಜನಸಂಘದ ಅಧ್ಯಕ್ಷ ಜಯ ಸಿ.ಕೋಟ್ಯಾನ್‌, ಯುವ ಸಂಘಟನೆ ಅಧ್ಯಕ್ಷ ವಿನಯ್ ಕರ್ಕೇರ, ರಾಜ್ಯ ಗಂಗಾಮನ ನೌಕರರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಶಿವಲಿಂಗಪ್ಪ, ರಾಘವೇಂದ್ರ ಹಾಗೂ ಮೊಗವೀರ ಸಮಾಜದ ಮುಖಂಡರು ಇದ್ದರು.

ಮತ್ತೊಂದೆಡೆ ಬುಧವಾರ ಸಂಸದೆ ಶೋಭಾ ಕರಂದ್ಲಾಜೆ ಕೂಡ ಗೃಹ ಸಚಿವ ರಾಜನಾತ್ ಸಿಂಗ್ ಅವರನ್ನ ಭೇಟಿ ಮಾಡಿ ಮೀನುಗಾರರ ಪತ್ತೆಗೆ ಮನವಿ ಸಲ್ಲಿಸಿದರು.

ಬೋಟ್‌ ಅನ್ನು ಕಡಲ್ಗಳ್ಳರು ಅಥವಾ ಭಯೋತ್ಪಾದಕರು ಅಪಹರಿಸಿರುವ ಸಾಧ್ಯತೆಗಳಿವೆ. ಮೀನುಗಾರರ ಕುಟುಂಬ ದಿಕ್ಕು ತೋಚದಂತಾಗಿದೆ. ಕರಾವಳಿಯಲ್ಲಿ ಮೀನುಗಾರಿಕೆ ಬಹುತೇಕ ಸ್ಥಗಿತಗೊಂಡಿದೆ. ನಾಪತ್ತೆಯಾದವರ ಪತ್ತೆ ಚುರುಕಾಗಿ ನಡೆಯುತ್ತಿಲ್ಲ ಎಂಬ ಅಸಮಾಧಾನ ವ್ಯಕ್ತವಾಗಿದೆ ಎಂದು ಪರಿಸ್ಥಿತಿಯನ್ನು ವಿವರಿಸಿದರು.

ಮನವಿಗೆ ಪ್ರತಿಕ್ರಿಯಿಸಿದ ಸಚವಿರು ಬೋಟ್‌ ಪತ್ತೆ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಪತ್ತೆಗೆ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !