ಮೀನುಗಾರರ ನಾಪತ್ತೆ: ರಾಜ್ಯ ಸರ್ಕಾರ ನಿರ್ಲಕ್ಷ್ಯ

7
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಆರೋಪ

ಮೀನುಗಾರರ ನಾಪತ್ತೆ: ರಾಜ್ಯ ಸರ್ಕಾರ ನಿರ್ಲಕ್ಷ್ಯ

Published:
Updated:
Prajavani

ಉಡುಪಿ: ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ್ದ ಬೋಟ್‌ ನಾಪತ್ತೆಯಾಗಿ 20 ದಿನ ಕಳೆದರೂ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಮೀನುಗಾರಿಕೆ ಸಚಿವವರಿಂದ ಇದುವರೆಗೂ ಸ್ಪಂದನೆ ಸಿಕ್ಕಿಲ್ಲ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಅಸಮಾಧಾನ ವ್ಯಕ್ತಪಡಿಸಿದರು.

ಶುಕ್ರವಾರ ಪಕ್ಷದ ಕಚೇರಿಯಲ್ಲಿ ಮಾತನಾಡಿದ ಅವರು, ಈಚೆಗೆ ಬಿಜೆಪಿ ಶಾಸಕರು ಹಾಗೂ ಸಂಸದರು ಕೇಂದ್ರ ಸಚಿವರನ್ನು ಭೇಟಿಮಾಡಿ ಮೀನುಗಾರರ ಪತ್ತೆ ಮಾಡುವಂತೆ ಒತ್ತಡ ಹಾಕಿದ್ದರು. ಅದರ ಫಲವಾಗಿ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ನೌಕಾಪಡೆ ಅಧಿಕಾರಿಗಳಿಗೆ ಪತ್ತೆ ಕಾರ್ಯಕ್ಕೆ ಸೂಚನೆ ನೀಡಿದ್ದಾರೆ. ಆದರೆ, ರಾಜ್ಯ ಸರ್ಕಾರ ಈ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಿದೆ ಎಂದರು.

ಜ.6ರಂದು ಮೀನುಗಾರರು ನಡೆಸಲು ಉದ್ದೇಶಿಸಿರುವ ಹೆದ್ದಾರಿ ತಡೆ ಹೋರಾಟಕ್ಕೆ ಬಿಜೆಪಿ ಸಂಪೂರ್ಣ ಬೆಂಬಲ ನೀಡಲಿದ ಎಂದು ಮಟ್ಟಾರು ತಿಳಿಸಿದರು.‌

ಸ್ಥಳೀಯಾಡಳಿತ ಚುನಾವಣೆ ನಡೆದು 4 ತಿಂಗಳುಗಳು ಕಳೆದಿವೆ. ಇನ್ನು ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ನಡೆದಿಲ್ಲ. ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ. ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ. ಈ ಕುರಿತು ಜಿಲ್ಲಾಧಿಕಾರಿ ಜತೆ ಮಾತುಕತೆ ನಡೆಸಲಾಗಿದೆ. ಸರ್ಕಾರ ತಕ್ಷಣವೇ ಚುನಾಯಿತ ಪ್ರತಿನಿಧಿಗಳಿಗೆ ಸ್ಥಳೀಯ ಸಂಸ್ಥೆಗಳ ಆಡಳಿತ ನೀಡಬೇಕು ಎಂದು ಒತ್ತಾಯಿಸಿದರು.

ಮುಂದಿನ ಲೋಕಸಭಾ ಚುನಾವಣೆಗೆ ಬೂತ್ ಮಟ್ಟದಲ್ಲಿ ಸಶಕ್ತಿಕರಣ, ಶಕ್ತಿ ಹಾಗೂ ಮಹಾಶಕ್ತಿ ಕೇಂದ್ರವನ್ನು ಬಲಪಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸಂಚಾಲನ ಸಮಿತಿ ರಚಿಸುವ ಮೂಲಕ ಚುನಾವಣೆಗೆ ಕಾರ್ಯಪ್ರವೃತ್ತರಾಗುತ್ತಿದ್ದೇವೆ ಎಂದು ಮಟ್ಟಾರು ಹೇಳಿದರು.

ಬೈಂದೂರು, ಗಂಗೊಳ್ಳಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಜಯಗಳಿಸಿದ್ದಾರೆ ಎಂದು ತಿಳಿಸಿದರು.

ಬಿಜೆಪಿ ಮುಖಂಡರಾದ ಯಶ್‍ಪಾಲ್ ಸುವರ್ಣ, ಕುತ್ಯಾರ್ ನವೀನ್ ಶೆಟ್ಟಿ, ಶ್ರೀಶ ನಾಯಕ್, ಪ್ರವೀಣ್ ಕಪ್ಪೆಟ್ಟು ಉಪಸ್ಥಿತರಿದ್ದರು.

ರೈತರ ಸಾಲಮನ್ನಾ ಮಾಡಲು ಜಿಲ್ಲೆಯ 2,800 ರೈತರನ್ನು ಗುರುತಿಸಲಾಗಿದೆ. ಆದರೆ, ಅವರಿಗೆ ಈವರೆಗೂ ಋಣಮುಕ್ತ ಪ್ರಮಾಣಪತ್ರ ನೀಡಿಲ್ಲ. ಸರ್ಕಾರ ಕೂಡಲೇ ಜಿಲ್ಲೆಯ ರೈತರ ಸಾಲ ಮನ್ನಾ ಮಾಡಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ತಿಳಿಸಿದರು .

ತೈಲಬೆಲೆ ಇಳಿಕೆಯಿಂದ ಜನಸಾಮಾನ್ಯರಿಗೆ ಕಡಿಮೆ ದರದಲ್ಲಿ ಪೆಟ್ರೋಲ್, ಡಿಸೇಲ್, ಗ್ಯಾಸ್ ದೊರೆಯುತ್ತಿದೆ. ಇನ್ನಷ್ಟು ತೈಲ ಬೆಲೆ ಇಳಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !