ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: ಮೀನುಗಾರರ ಕಲ್ಯಾಣ ಮಂಡಳಿ ರಚಿಸಿ

ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ, ಸರ್ಕಾರಕ್ಕೆ ಮನವಿ
Last Updated 1 ಅಕ್ಟೋಬರ್ 2020, 16:34 IST
ಅಕ್ಷರ ಗಾತ್ರ

ಉಡುಪಿ: ಕೈಗಾರಿಕೆಗಳಲ್ಲಿ, ಅಸಂಘಟಿತ ವಲಯಗಳಲ್ಲಿ ದುಡಿಯುತ್ತಿರುವ ಕಾರ್ಮಿಕರಿಗೆ ಸಿಗುವ ಎಲ್ಲ ಸೌಲಭ್ಯಗಳು ಮೀನುಗಾರರಿಗೂ ಸಿಗಬೇಕು. ಮೀನುಗಾರರ ಅಭ್ಯುದಯಕ್ಕೆ ಕಲ್ಯಾಣ ಮಂಡಳಿ ರಚನೆ ಮಾಡಬೇಕು ಎಂದು ಎಂದು ಒತ್ತಾಯಿಸಿ ಜಿಲ್ಲಾ ಮೀನುಗಾರರ ಮತ್ತು ಮೀನು ಕಾರ್ಮಿಕರ ಸಂಘದಿಂದ ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಮೀನುಗಾರರಿಗೆ ಸಾಮಾಜಿಕ ಭದ್ರತೆ ಒದಗಿಸಲು ಕಲ್ಯಾಣ ಮಂಡಳಿ ರಚಿಸಿ, ಅನುದಾನ ನೀಡಬೇಕು. 60 ವರ್ಷ ದಾಟಿದ ಮೀನುಗಾರರಿಗೆ ಪಿಂಚಣಿ ಕೊಡಬೇಕು. ಕೇರಳ ಮಾದರಿಯಲ್ಲಿ ರಾಜ್ಯದ ಮೀನುಗಾರರಿಗೂ ಸವಲತ್ತುಗಳನ್ನು ಒದಗಿಸಬೇಕು ಎಂದು ಕಾರ್ಮಿಕಮುಖಂಡ ಕೆ.ಶಂಕರ್ ಸರ್ಕಾರವನ್ನು ಒತ್ತಾಯಿಸಿದರು.

ಮಳೆಗಾಲದಲ್ಲಿ ಕಡಲ್ಕೊರೆತ ಉಂಟಾಗಿ ಸಮುದ್ರ ತೀರದಲ್ಲಿ ವಾಸಮಾಡುವ ಮೀನುಗಾರರ ಹಾಗೂ ಕಾರ್ಮಿಕರ ಮನೆಗಳಿಗೆ ಹಾನಿಯಾಗುತ್ತಿವೆ. ಈ ಸಮಸ್ಯೆ ನಿವಾರಣೆಗೆ ಸಮುದ್ರದ ಅಂಚಿನಲ್ಲಿ ತಡೆಗೋಡೆಗಳನ್ನು ನಿರ್ಮಿಸಬೇಕು. ಸಮುದ್ರಕ್ಕೆ ಸುರಿಯುವ ಬದಲು ಕಡಲ್ಕೊರೆತ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕು ಎಂದ ಶಂಕರ್ ಒತ್ತಾಯಿಸಿದರು.

ಗಂಗೊಳ್ಳಿಯ ಕೋಡಿ ಬಂದರಿನಲ್ಲಿ ದಂಡೆಯನ್ನು ವಿಸ್ತರಿಸಬೇಕು, ಬಂದರಲ್ಲಿ ಹೂಳೆತ್ತಿ ಬೋಟ್‌ ನಿಲುಗಡೆಗೆ ಸಮರ್ಪಕ ವ್ಯವಸ್ಥೆ ಮಾಡಬೇಕು. ಬಡ ಮೀನುಗಾರರಿಗೆ ನಿವೇಶನ, ವಸತಿ ಹಂಚಿಕೆ ಮಾಡಬೇಕು. ಸಮುದ್ರ ತೀರದಲ್ಲಿ ಈಗಾಗಲೇ ಮನೆ ಕಟ್ಟಿಕೊಂಡಿರುವವರಿಗೆ ಹಕ್ಕುಪತ್ರ ನೀಡಬೇಕು ಎಂದು ಆಗ್ರಹಿಸಿದರು.

ಮಳೆಗಾಲದಲ್ಲಿ ಉಚಿತ ಪಡಿತರ, ಮೀನುಗಾರರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಹೆಣ್ಣುಮಕ್ಕಳ ಮದುವೆಗೆ ಧನ ಸಹಾಯ, ಅಪಘಾತದಲ್ಲಿ ಮರಣ ಹೊಂದಿದರೆ ₹ 10 ಲಕ್ಷ ಪರಿಹಾರ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜಿಲ್ಲಾಧಿಕಾರಿಯ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭ ಮುಖಂಡರಾದ ಮಹಾಬಲ ಹೋಡೆಯರ ಹೋಬಳಿ, ಕವಿರಾಜ್, ಎಸ್.ಕಾಂಚನ್, ಜ್ಯೋತಿ ಮೊಗವೀರ, ಗಣೇಶ ಮೊಗವೀರ, ಉದಯ ಗಾಣಿಗ ಮೋಗೆರ, ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಕಾರ್ಯದರ್ಶಿ ಸುರೇಶ್ ಕಲ್ಲಾಗಾರ, ಮುಖಂಡರಾದ ವೆಂಕಟೇಶ್ ಕೋಣಿ, ಗಣೇಶ ತೋಂಡೆಮಕ್ಕಿ, ಉಮೇಶ್, ರಾಮ ಕಾರ್ಕಡ, ನಳಿನಿ, ಸುಂದರಿ, ಜಗನ್ನಾಥ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT