ಹೆಬ್ರಿ: ಮಳೆಯೂ ಬಂತೂ ಮೀನೂ ತಂತು!

ಹೆಬ್ರಿ: ಕರಾವಳಿ ಭಾಗದಲ್ಲಿ ಮಳೆಗಾಲ ಅರಂಭಗೊಂಡು ಮುಂಗಾರು ಮಳೆ ಸುರಿಯುತ್ತಿದ್ದಂತೆ ಉಬರ್ ಮೀನುಗಳನ್ನು ಹಿಡಿಯುವುದೇ ಒಂದು ಸಂಭ್ರಮ. ಹಿರಿಯರು, ಯುವಕರ ಸೇರಿ ಎಲ್ಲರೂ ಮೀನು ಹಿಡಿಯಲು ಗದ್ದೆ, ತೋಡುಗಳಲ್ಲಿ ಮುಗಿ ಬೀಳುತ್ತಾರೆ.
ಮುಂಗಾರು ಜೋರಾಗಿದ್ದು ಕೃಷಿ ಚಟುವಟಿಕೆಗಳು ಶುರುವಾದ ಬೆನ್ನಲ್ಲೇ ಹಳ್ಳಿಯ ಹಳ್ಳ, ತೋಡು, ಸಣ್ಣ ನದಿಗಳಲ್ಲಿ ರಾಶಿ ಮೀನುಗಳು ಕಾಣ ಸಿಗುತ್ತಿವೆ. ಮಳೆಗಾಲದಲ್ಲಿ ಉಬರ್ ಮೀನು ವಿಶೇಷ. ಉಬರ್ ಮೀನಿನ ರುಚಿಯನ್ನು ಸವಿಯಲು ಮತ್ಸ್ಯ ಪ್ರಿಯರು ಕಾಯುತ್ತಿರುತ್ತಾರೆ, ಜೊತೆಗೆ ಆರೋಗ್ಯಕ್ಕೂ ಇದು ಉತ್ತಮ ಎನ್ನುವುದು ವಾಡಿಕೆ .
ಗದ್ದೆ ಸಹಿತ ಹಲವಡೆ ನೀರಿನಲ್ಲಿ ಮೇಲ್ಮುಖವಾಗಿ ಬರುವ ಮೀನುಗಳನ್ನು ಕೈ ಮೂಲಕ, ಬಲೆ ಹಾಕಿ, ಉದ್ದನೆಯ ಕತ್ತಿಯಲ್ಲಿ ಕಡಿಯುವ ಮೂಲಕ ಹಿಡಿಯುತ್ತಾರೆ. ಎತ್ತರದಿಂದ ಬೀಳುವ ನೀರಿಗೆ ಬಟ್ಟೆ ಅಥವಾ ಬಲೆ ಅಡ್ಡ ಇಟ್ಟು ಮೀನು ಹಿಡಿಯುತ್ತಾರೆ.
‘ಕಳೆದ ವರ್ಷ ಮೇ ಅಂತ್ಯಕ್ಕೆ ಮೀನು ಕಾಣಿಸಿತ್ತು. ಈ ವರ್ಷ ಸ್ವಲ್ಪ ತಡವಾಗಿದೆ. ಏಪ್ರಿಲ್ ಕೊನೆಯ ವಾರದಲ್ಲಿ ಭಾರಿ ಮಳೆಯಾದ್ದರಿಂದ ಈ ಸಲ ಉಬರ್ ಮೀನು ಹಿಡಿಯುವ ಸಂಭ್ರಮ ಹೆಚ್ಚಾಗಿ ಕಾಣ ಸಿಗಲಿಲ್ಲ’ ಎನ್ನುತ್ತಾರೆ ಮುನಿಯಾಲಿನ ಶಂಕರ ನಾಯ್ಕ್.
ಹಗಲು-ರಾತ್ರಿಯೆನ್ನದೆ ಮಹಿಳೆಯರು, ಪುರುಷರು, ಮಕ್ಕಳು ಮತ್ತು ಹಿರಿಯರೆಲ್ಲಾ ಸೇರಿ ಮೀನು ಹಿಡಿದು ಸಂಭ್ರಮಿಸುತ್ತಿದ್ದಾರೆ. ಮೀನು ತಿನ್ನದವರು ಖುಷಿಯಾಗಿ ಮೀನು ಹಿಡಿಯುವುದು ವಿಶೇಷ. ಊರಲ್ಲಿ ಎಲ್ಲರೂ ಒಟ್ಟಾಗಿ ಮೀನು ಹಿಡಿದು ಮೀನಿನ ಸಾರು ಮಾಡಿ ಸಾಮೂಹಿಕ ಭೋಜನವನ್ನೂ ಮಾಡುತ್ತಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.