ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿವಿನ ನೋವಿಗೆ ಮಿಡಿಯುತ್ತಿರುವ ಹೃದಯಗಳು

ಬಡವರಿಗೆ ಊಟ ಹಾಕುತ್ತಿರುವ ಹಲವು ಸಂಘ ಸಂಸ್ಥೆಗಳು
Last Updated 28 ಮಾರ್ಚ್ 2020, 16:27 IST
ಅಕ್ಷರ ಗಾತ್ರ

ಉಡುಪಿ: ಕೊರೊನಾ ಸಂಕಷ್ಟಕ್ಕೆ ಸಿಲುಕಿ ಬೀದಿಗೆ ಬಿದ್ದಿರುವ ನಿರ್ಗತಿಕರು, ಬಡವರು ಹಾಗೂ ಕೂಲಿ ಕಾರ್ಮಿಕರ ನೆರವಿಗೆ ಹಲವು ಸಂಘ ಸಂಸ್ಥೆಗಳು ಮುಂದೆ ಬಂದಿವೆ. ಪ್ರತಿದಿನ ಉಪಾಹಾರ, ಊಟ ಹಾಗೂ ದಿನಸಿ ಸಾಮಾಗ್ರಿಗಳ ಕಿಟ್‌ಗಳನ್ನು ವಿತರಿಸುತ್ತಿದ್ದು, ಹಸಿವು ತಣಿಸುವ ಕೆಲಸ ಮಾಡುತ್ತಿವೆ.

ಸಾರ್ವಜನಿಕ ಗಣೇಶೋತ್ಸವ ಸಮಿತಿ, ಆಶ್ರಯ ಚಾರಿಟೆಬಲ್‌ ಟ್ರಸ್ಟ್‌ ಮಣಿಪಾಲ ಹಾಗೂ ಉಡುಪಿ ನಗರದಲ್ಲಿ ಪ್ರತಿನಿತ್ಯ ಆಹಾರ ಪೊಟ್ಟಣ ಹಾಗೂ ಕುಡಿಯುವ ನೀರಿನ ಬಾಟೆಲ್‌ಗಳನ್ನು ವಿತರಿಸುವ ಕಾರ್ಯ ಮಾಡುತ್ತಿದೆ. ಈ ಕೆಲಸಕ್ಕೆ ಶಾಸಕ ರಘುಪತಿ ಭಟ್‌ ಕೂಡ ಕೈಜೋಡಿಸಿದ್ದಾರೆ.

ಕೃಷ್ಣಮಠದ ಆಸುಪಾಸು, ಕೆಎಸ್‌ಆರ್‌ಟಿಸಿ, ಖಾಸಗಿ ಬಸ್‌ ನಿಲ್ದಾಣ, ಬೀಡಿನಗುಡ್ಡೆ, ಅಜ್ಜರಕಾಡು ಉದ್ಯಾನ ಸೇರಿದಂತೆ ಹಲವೆಡೆ ಆಹಾರ ವಿತರಣೆ ನಡೆಯುತ್ತಿದೆ. ಸಮಿತಿಯ ಸದಸ್ಯರು ಸಾಮಾಜಿಕ ಅಂತರ ಕಾಯ್ದುಕೊಂಡು ಆಹಾರ ಹಂಚಿಕೆ ಮಾಡುತ್ತಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.

ಅಂಬಲಪಾಡಿ ದೇವಸ್ಥಾನದಲ್ಲಿ ಶನಿವಾರ 500 ಕುಟುಂಬಗಳಿಗೆ ಸಾಲುವಷ್ಟು ದಿನಸಿ ಸಾಮಾನುಗಳ ಕಿಟ್‌ಗಳನ್ನು ಸಿದ್ಧಪಡಿಸಿ, ಬೀಡಿನಗುಡ್ಡೆ ಪರಿಸರದ 400 ಕೂಲಿ ಕಾರ್ಮಿಕ ಕುಟುಂಬಗಳಿಗೆ ವಿತರಿಸಲಾಯಿತು. ಉಡುಪಿಯಲ್ಲಿ ಉದ್ಯಮಿ ಸುಭಾಶ್‌ ಎಂಬುವರು ಹಲವು ಬಡ ಕುಟುಂಬಗಳಿಗೆ ವಾರಕ್ಕಾಗುವಷ್ಟು ದಿನಸಿಯನ್ನು ತಲುಪಿಸುವ ಕೆಲಸ ಮಾಡುತ್ತಿದ್ದಾರೆ.

ಹೆಲ್ಪಿಂಗ್ ಹ್ಯಾಂಡ್‌ ಸಂಸ್ಥೆಯಿಂದಲೂ 250 ಮಂದಿಗೆ ಊಟ ವಿತರಿಸಲಾಯಿತು. ಜತೆಗೆ, ಮಾಸ್ಕ್ ಧರಿಸುವಂತೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸಲಹೆ ನೀಡಲಾಯಿತು. ಕೃಷ್ಣಮಠದಲ್ಲಿ ಪ್ರತಿದಿನ ಆರೋಗ್ಯ ಇಲಾಖೆ ಸಿಬ್ಬಂದಿಗೆ ಊಟದ ವ್ಯವಸ್ಥೆ ಮಾಡಲಾಗಿದೆ.

ಉದ್ಯಾವ ಗುಡ್ಡೆಯಂಗಡಿ ಫ್ರೆಂಡ್ಸ್‌ ನೇತೃತ್ವದಲ್ಲಿ 25 ಬಡವರಿಗೆ ಊಟದ ವ್ಯವಸ್ಥೆ ಮಾಡಲಾಯಿತು.ಜಿಲ್ಲಾ ಪಂಚಾಯಿತಿ ಸದಸ್ಯೆ ಗೀತಾಂಜಲಿ ಸುವರ್ಣ, ಗ್ರಾಮ ಪಂಚಾಯಿತಿ ಸದಸ್ಯ ದಿವಾಕರ ಬೊಳ್ಜೆ ಅಗತ್ಯವಿದ್ದವರಿಗೆ ಆಹಾರ ಹಾಗೂ ಔಷಧಗಳನ್ನು ಪೂರೈಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT