ಭಾನುವಾರ, ಮೇ 16, 2021
25 °C
ರಾಜ್ಯದಲ್ಲಿ ಅರಣ್ಯ ವಿಸ್ತರಣೆ: ಉಡುಪಿಗೆ ದ್ವಿತೀಯ ಸ್ಥಾನ: ಡಿಎಫ್‌ಒ ಕಮಲಾ

‘ಗಿಡ ನೆಟ್ಟರೆ ಸಾಲದು; ಪೋಷಣೆಯೂ ಮುಖ್ಯ’

ಬಾಲಚಂದ್ರ ಎಚ್‌. Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಕರ್ನಾಟಕದ ಹಸಿರು ಆವರಣ ಗಣನೀಯವಾಗಿ ವಿಸ್ತರಿಸಿದ್ದು, ರಾಜ್ಯದಲ್ಲಿ ಉಡುಪಿ ಜಿಲ್ಲೆ 2ನೇ ಸ್ಥಾನ ಪಡೆದಿದೆ ಎಂದು 2019ರ ಅರಣ್ಯ ಸ್ಥಿತಿಗತಿ ವರದಿ ಹೇಳಿದೆ. ಅರಣ್ಯ ಸಂರಕ್ಷಣೆಗೆ ತೆಗೆದುಕೊಂಡ ಕಟ್ಟುನಿಟ್ಟಿನ ಕ್ರಮಗಳು ಹಾಗೂ ಗಿಡಗಳನ್ನು ನೆಟ್ಟು ಕಾಳಜಿ ಮಾಡುತ್ತಿರುವುದು ಅರಣ್ಯ ವಿಸ್ತರಣೆಗೆ ಕಾರಣ ಎನ್ನುತ್ತಾರೆ ಕುಂದಾಪುರ ವಿಭಾಗದ ಉಪ ಸಂರಕ್ಷಣಾಧಿಕಾರಿ ಕಮಲಾ.

ರಾಜ್ಯ ಸರ್ಕಾರದ ‘ಹಸಿರು ಕರ್ನಾಟಕ, ವನ ಮಹೋತ್ಸವ, ಮಗುವಿಗೊಂದು ಮರ; ಶಾಲೆಗೊಂದು ವನ, ಶ್ರೀಚಂದನವನ, ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಗಳು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿವೆ. ಯೋಜನೆಗಳ ಒಟ್ಟಾರೆ ಫಲಿತಾಂಶ ಅರಣ್ಯ ವಿಸ್ತರಣೆ ಎಂಬುದು ಅವರ ಅಭಿಪ್ರಾಯ.

ರಸ್ತೆ ನಿರ್ಮಾಣ ಹಾಗೂ ಅಭಿವೃದ್ಧಿ ಕಾಮಗಾರಿಗೆ ಮರ ಕಡಿಯಲು ಅನುಮತಿ ನೀಡಬೇಕಾದರೆ (ಅಕೇಶಿಯಾ, ಮ್ಯಾಂಜಿಯಮ್‌ ಮರಗಳಿಗೆ ವಿನಾಯಿತಿ) ಕಠಿಣ ನಿಯಮಗಳಿದ್ದು, ಚಾಚೂತಪ್ಪದೆ ಪಾಲಿಸಲಾಗುತ್ತಿದೆ. ಒಂದು ಮರಕ್ಕೆ 10 ಗಿಡಗಳ ನೆಟ್ಟರಷ್ಟೆ ಅನುಮತಿ ಕೊಡಲಾಗುತ್ತಿದೆ. ಜತೆಗೆ, ಖಾಸಗಿ ಜಾಗದಲ್ಲಿ ಅಪಾಯಕಾರಿ ಮರಗಳಿರದ ಹೊರತು ತೆರವಿಗೆ ಅವಕಾಶ ನೀಡಲಾಗುತ್ತಿಲ್ಲ.

ಸರ್ಕಾರದ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ ರೈತರಿಗೆ ಹಲಸು, ಹೆಬ್ಬಲಸು, ಸಾಗುವಾನಿ, ಮಹಾಗನಿ ಗಿಡಗಳನ್ನು ವಿತರಿಸಲಾಗುತ್ತಿದ್ದು ಅರಣ್ಯ ಕ್ಷೇತ್ರ ವಿಸ್ತರಣೆಗೆ ಸಹಕಾರಿಯಾಗಿದೆ. ಗಾತ್ರಕ್ಕೆ ಅನುಗುಣವಾಗಿ ₹ 1 ರಿಂದ ₹ 3 ದರವಿದ್ದು, ಪೋಷಣೆಗೆ ಪ್ರತಿ ಗಿಡಕ್ಕೆ ಮೊದಲ ಹಾಗೂ ಎರಡನೇ ವರ್ಷ ₹ 30, ಮೂರನೇ ವರ್ಷ ₹ 40 ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಇದರಿಂದ ರೈತರು ಕಾಳಜಿಯಿಂದ ಗಿಡಗಳನ್ನು ಬೆಳೆಸುತ್ತಿದ್ದಾರೆ ಎಂದು ಕಮಲಾ ಮಾಹಿತಿ ನೀಡಿದರು.

ರಸ್ತೆ ಬದಿ, ಶಾಲೆಗಳ ಆವರಣ, ಖಾಸಗಿ ಜಾಗಳಲ್ಲೂ ಗಿಡಗಳನ್ನು ನೆಟ್ಟು ಪೋಷಿಸಲು ಪ್ರೋತ್ಸಾಹಿಸಲಾಗುತ್ತಿದೆ. ಸಣ್ಣ ಸಸಿಗಳ ವಿತರಣೆ ಬದಲು, 5 ರಿಂದ 6 ಅಡಿ ಎತ್ತರದ ಗಿಡ ನೀಡಲಾಗುತ್ತಿದ್ದು, ಬದುಕುಳಿಯುವ ಪ್ರಮಾಣ ಹೆಚ್ಚಾಗಿದೆ.

ಜಿಲ್ಲೆಯ 8 ವಲಯಗಳಲ್ಲಿ ತಲಾ ಒಂದೊಂದು ನರ್ಸರಿಗಳಿದ್ದು, ಹಣ್ಣಿನ ತಳಿಗಳು, ಸ್ಥಳೀಯ ಪ್ರಬೇಧಗಳು ಹಾಗೂ ರೈತರಿಗೆ ಲಾಭ ಲಾಭ ತಂದುಕೊಡುವ ಸಸಿಗಳನ್ನು ಯತೇಚ್ಛವಾಗಿ ಬೆಳೆಸಲಾಗುತ್ತಿದೆ. ರೆಸಾರ್ಟ್‌ ನಿರ್ಮಾಣ ಹಾಗೂ ಖಾಸಗಿ ಉದ್ದೇಶಗಳಿಗೆ ಅರಣ್ಯ ಭೂಮಿ ಒತ್ತುವರಿಗೆ ಬ್ರೇಕ್‌ ಹಾಕಲಾಗಿದೆ. ಇದರ ಪರಿಣಾಮವಾಗಿ ಅರಣ್ಯ ವಿಸ್ತರಣೆಯಾಗಿದೆ ಎಂದು ಡಿಎಫ್‌ಒ ಕಮಲಾ ಮಾಹಿತಿ ನೀಡಿದರು.

***

ಕುಂದಾಪುರ ವಲಯ ಮೀಸಲು ಅರಣ್ಯ–35,985 (ಹೆಕ್ಟೇರ್‌ಗಳಲ್ಲಿ)

ಉಡುಪಿ ಜಿಲ್ಲೆಯ ಮೀಸಲು ಅರಣ್ಯ–30,933

2019–20ರಲ್ಲಿ ನೆಟ್ಟ ಗಿಡಗಳು: 9.92 ಲಕ್ಷ ಗಿಡಗಳು

ಬ್ಲಾಕ್‌ ಪ್ಲಾಂಟೇಷನ್‌–1,095, ರಸ್ತೆ ಬದಿ ಪ್ಲಾಂಟೇಷನ್‌– 41.73 ಕಿ.ಮೀ

2019–20ರಲ್ಲಿ ಆರ್‌ಎಸ್‌ಪಿಡಿ, ಕೆಎಪಿಐ ಯೋಜನೆ ಅಡಿ– 1.96 ಲಕ್ಷ ಗಿಡ ವಿತರಣೆ

ಮಗುವಿಗೊಂದು ಮರ, ಶಾಲೆಗೊಂದು ವನ ಯೋಜನೆ–5,600

ಶ್ರೀಚಂದನವನ ಯೋಜನೆ–3,500

ಹಸಿರು ಕರ್ನಾಟಕ–71,500

2020ಕ್ಕೆ ಗಿಡ ನೆಡುವ ಗುರಿ– 1604 ಹೆಕ್ಟೇರ್‌‌

2020ರ ಸಾಲಿಗೆ ಬೆಳೆಸಿರುವ ಗಿಡಗಳು–11.87 ಲಕ್ಷ

ಆರ್‌ಎಸ್‌ಪಿಡಿ, ಕೆಎಪಿಐ ಯೋಜನೆ ಅಡಿ ಗುರಿ–2.41 ಲಕ್ಷ

ಎಂಎಂಎಸ್‌ವಿ, ಎಸ್‌ಸಿವಿ, ಹಸಿರು ಕರ್ನಾಟಕ ಗುರಿ–84,300

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು