ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರಂತರ ಮಳೆ: ಉಡುಪಿಯಲ್ಲಿ 186 ಹೆಕ್ಟೇರ್‌ ಭತ್ತದ ಕೃಷಿ ಅಪೋಶನ

ಮರು ನಾಟಿಯ ಸಂದಿಗ್ಧ ಸ್ಥಿತಿಯಲ್ಲಿ ಭತ್ತ ಬೆಳೆಗಾರರು
Last Updated 16 ಜುಲೈ 2022, 19:30 IST
ಅಕ್ಷರ ಗಾತ್ರ

ಉಡುಪಿ: ಜಿಲ್ಲೆಯಾದ್ಯಂತ ಎಡೆಬಿಡದೆ ಸುರಿಯುತ್ತಿರುವ ಭಾರಿ ಮಳೆಗೆ ಅಪಾರ ಪ್ರಮಾಣದ ಭತ್ತದ ಕೃಷಿಗೆ ಹಾನಿಯಾಗಿದೆ. ನದಿ ಪಾತ್ರದಲ್ಲಿರುವ ಗದ್ದೆಗಳು ಮುಳುಗಡೆಯಾಗಿದ್ದು, ಈಚೆಗಷ್ಟೆ ನಾಟಿ ಮಾಡಿದ ನೇಜಿ ಕೊಳೆಯುತ್ತಿದೆ.

ಕೃಷಿ ಇಲಾಖೆಯ ಮಾಹಿತಿಯ ಪ್ರಕಾರ ಜುಲೈ 16ರವರೆಗೆ ಜಿಲ್ಲೆಯಲ್ಲಿ 186.32 ಹೆಕ್ಟೇರ್ ಭತ್ತದ ಕೃಷಿ ಸಂಪೂರ್ಣವಾಗಿ ನಾಶವಾಗಿದೆ. ಕುಂದಾಪುರದಲ್ಲಿ ಅತಿ ಹೆಚ್ಚು 72.07 ಹೆಕ್ಟೇರ್ ಹಾನಿಯಾಗಿದ್ದರೆ, ಕಾರ್ಕಳದಲ್ಲಿ 58.11, ಬೈಂದೂರಿನಲ್ಲಿ 10, ಬ್ರಹ್ಮಾವರದಲ್ಲಿ 21.22, ಕಾಪುವಿನಲ್ಲಿ 5.99 ಹಾಗೂ ಹೆಬ್ರಿಯಲ್ಲಿ 18.93 ಹೆಕ್ಟೇರ್‌ ಭತ್ತದ ಕೃಷಿಗೆ ಹಾನಿಯಾಗಿದೆ.

ಈ ಅಂಕಿ ಅಂಶಗಳು ಕೃಷಿ ಇಲಾಖೆಗೆ ಪ್ರಾಥಮಿಕವಾಗಿ ಲಭ್ಯವಾಗಿರುವ ಮಾಹಿತಿ ಮಾತ್ರ. ಹಾನಿ ಸಮೀಕ್ಷೆ ಪೂರ್ಣಗೊಳ್ಳದ ಕಾರಣ ಹಾನಿಯ ಪ್ರಮಾಣ ಮತ್ತಷ್ಟು ಹೆಚ್ಚಾಗಲಿದೆ ಎನ್ನುತ್ತಾರೆ ಅಧಿಕಾರಿಗಳು.

ಜಿಲ್ಲೆಯಲ್ಲಿ 38,000 ಹೆಕ್ಟೇರ್ ಭತ್ತದ ಬಿತ್ತನೆ ಗುರಿಗೆ ಪ್ರತಿಯಾಗಿ 20,000 ಹೆಕ್ಟೇರ್‌ನಷ್ಟು ನಾಟಿ ಮುಗಿದಿದೆ. ಎಡೆಬಿಡದೆ ಸುರಿಯುತ್ತಿರುವ ಭಾರಿ ಮಳೆ ನಾಟಿ ಕಾರ್ಯಕ್ಕೆ ಹಿನ್ನಡೆ ಉಂಟು ಮಾಡಿದ್ದು, ನಾಟಿಗೆ ಸಿದ್ಧಪಡಿಸಿಟ್ಟುಕೊಂಡಿದ್ದ ನೇಜಿಯೂ ಹಾಳಾಗುತ್ತಿದೆ.

ಮತ್ತೊಂದೆಡೆ, ಬೆಳೆ ಕಳೆದುಕೊಂಡಿರುವ ರೈತರು ಮರು ನಾಟಿ ಮಾಡಬೇಕೇ, ಬೇಡವೇ ಎಂಬ ಗೊಂದಲಕ್ಕೆ ಸಿಲುಕಿದ್ದಾರೆ. ಮಳೆಗಾಲದ ಆರಂಭದಲ್ಲೇ ಬೆಳೆ ನಾಶವಾಗಿರುವುದರಿಂದ ಮರು ನಾಟಿ ಮಾಡಿದ ಬಳಿಕ ಮತ್ತೆ ಬಿರುಸು ಮಳೆ ಸುರಿದು ಬೆಳೆ ಹಾನಿಯಾದರೆ ಗತಿ ಏನು ಎಂಬ ಭೀತಿಯಲ್ಲಿದ್ದಾರೆ ರೈತರು. ಇತ್ತ ಅರ್ಧಂಬರ್ಧ ಬೆಳೆ ಕಳೆದುಕೊಂಡ ರೈತರಿಗೆ ಮರು ನಾಟಿ ಮಾಡಲು ನೇಜಿಯ ಕೊರತೆ ಎದುರಾಗಿದೆ.

ಎಂಒ 4 ತಳಿ ಸದ್ಯ ಸೂಕ್ತವಲ್ಲ:

ಜಿಲ್ಲೆಯಲ್ಲಿ ಶೇ 90ಕ್ಕಿಂತ ಹೆಚ್ಚಿನ ರೈತರು ಎಂಒ 4 ತಳಿಯ ಭತ್ತ ಬೆಳೆಯುತ್ತಾರೆ. ಸದ್ಯ ಬೆಳೆ ಹಾನಿಯಾಗಿರುವ ಬಹುತೇಕ ಕೃಷಿ ಭೂಮಿಯಲ್ಲೂ ಎಂಒ 4 ತಳಿಯನ್ನೇ ಬೆಳೆಯಲಾಗಿತ್ತು. ಈಗ ಎಂಒ 4 ಮರು ಬಿತ್ತನೆ ಮಾಡಲು ಸೂಕ್ತ ಕಾಲವಲ್ಲ ಎಂಬುದು ತಜ್ಞರ ಅಭಿಪ್ರಾಯ.

ಈಗ ಎಂ.ಒ 4 ಬಿತ್ತನೆ ಬೀಜವನ್ನು ನೇಜಿ ಸಿದ್ದಪಡಿಸಲು ಹಾಕಿದರೆ 20 ರಿಂದ 25 ದಿನಗಳು ಕಳೆದು ನಾಟಿ ಮಾಡಬೇಕು. ಭತ್ತ ಕಟಾವಿಗೆ ಬರಲು 135 ದಿನಗಳು ಬೇಕು. ಭತ್ತದ ತೆನೆಯು ಹಾಲುಕಟ್ಟುವ ಹೊತ್ತಿಗೆ ಮಳೆಗಾಲ ಮುಗಿಯುತ್ತಾ ಬರುವುದರಿಂದ ಮಳೆ ಕೊರತೆ ಎದುರಾಗಬಹುದು.

ತೆನೆಗಟ್ಟುವ ಸಮಯದಲ್ಲಿ ಮಳೆ ಬೀಳದಿದ್ದರೆ ಇಳುವರಿ ಕಡಿಮೆಯಾಗಿ ರೈತರು ನಷ್ಟ ಅನುಭವಿಸಬೇಕಾಗುತ್ತದೆ. ಜತೆಗೆ ಕಟಾವು ಹಂಗಾಮು ಕೂಡ ಮುಗಿಯುತ್ತಾ ಬರುವುದರಿಂದ ಮಾರುಕಟ್ಟೆಯಲ್ಲಿ ಭತ್ತದ ದರ ಕುಸಿತವಾದರೆ ಆರ್ಥಿಕ ನಷ್ಟ ಅನುಭವಿಸಬೇಕಾಗಬಹುದು ಎನ್ನುತ್ತಾರೆ ತಜ್ಞರು.

ಕರಾವಳಿಯಲ್ಲಿ ಭತ್ತದ ಕೃಷಿ ಸಂಪೂರ್ಣ ಮಳೆಯಾಶ್ರಿತವಾಗಿರುವುದರಿಂದ ಈಗ ಮರು ನಾಟಿ ಮಾಡದಿದ್ದರೆ ಮುಂದಿನ ವರ್ಷದವರೆಗೂ ರೈತರು ಗದ್ದೆಯನ್ನು ಹಡಿಲು ಬಿಡಬೇಕಾಗುತ್ತದೆ. ಇದರಿಂದ ರೈತರ ಮೇಲೆ ಆರ್ಥಿಕ ಹೊರೆ ಬೀಳಿದ್ದು, ಒಟ್ಟಾರೆ ಸಂದಿಗ್ಧ ಸ್ಥಿತಿಗೆ ಸಿಲುಕಿದ್ದಾರೆ.

ನೆರವಿಗೆ ಕೃಷಿ ಇಲಾಖೆ:

ಬೆಳೆ ಕಳೆದುಕೊಂಡಿರುವ ರೈತರು ಆತಂಕಪಡುವ ಅಗತ್ಯವಿಲ್ಲ. ಕೃಷಿ ಇಲಾಖೆಯಿಂದ ಬಿತ್ತನೆ ಬೀಜ ಪಡೆಯದ ರೈತರು ಅಗತ್ಯ ದಾಖಲೆಗಳನ್ನು ಸಲ್ಲಿಸಿ ಮರು ನಾಟಿಗೆ ಬಿತ್ತನೆ ಬೀಜ ಪಡೆಯಬಹುದು. ಸದ್ಯ ಕೃಷಿ ಇಲಾಖೆಯಲ್ಲಿ 80 ಕ್ವಿಂಟಲ್ ಬಿತ್ತನೆ ಬೀಜ ದಾಸ್ತಾನು ಇದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆಂಪೇಗೌಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT