ಕ್ವಿಂಟಲ್ ಭತ್ತಕ್ಕೆ ₹ 2,500 ಬೆಂಬಲ ಬೆಲೆ ಘೋಷಿಸಿ: ರೈತ ಮುಖಂಡರ ಎಚ್ಚರಿಕೆ

ಉಡುಪಿ: ನ.5ರೊಳಗೆ ಸರ್ಕಾರ ಕ್ವಿಂಟಲ್ ಭತ್ತಕ್ಕೆ ಕನಿಷ್ಠ ₹ 2,500 ಬೆಂಬಲ ಬೆಲೆ ಘೋಷಿಸದಿದ್ದರೆ ಜಿಲ್ಲೆಯ ಸಮಸ್ತ ರೈತ ಒಕ್ಕೂಟಗಳು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಹಾಗೂ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ರೈತ ಮುಖಂಡರಾದ ಜಯರಾಮ ಶೆಟ್ಟಿ ಎಚ್ಚರಿಕೆ ನೀಡಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಬೆಂಬಲ ಬೆಲೆ ಘೋಷಿಸದಿದ್ದರೆ ರೈತ ದಿನಾಚಣೆ ಆಚರಿಸುವುದಿಲ್ಲ. ಶಾಂತವಾಗಿ ನಡೆಯುತ್ತಿರುವ ರೈತರ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳಲಿದೆ ಎಂದು ತಿಳಿಸಿದರು.
1 ಎಕರೆ ಭತ್ತದ ಕೃಷಿಗೆ ₹ 30,000 ಖರ್ಚು ತಗಲುತ್ತಿದ್ದು, ಸದ್ಯ ಮಾರುಕಟ್ಟೆಯಲ್ಲಿರುವ ದರದಿಂದ ರೈತರಿಗೆ ಭಾರಿ ನಷ್ಟವಾಗಲಿದೆ. ಮಾರುಕಟ್ಟೆಯಲ್ಲಿ ಎಲ್ಲ ಉತ್ಪನ್ನಗಳಿಗೂ ಎಂಆರ್‌ಪಿ ಇದ್ದರೂ ರೈತ ಬೆಳೆದ ಉತ್ಪನ್ನಗಳಿಗೆ ಮಾತ್ರ ದಲ್ಲಾಳಿಗಳು ದರ ನಿಗದಿ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕರಾವಳಿಯಲ್ಲಿ ಭತ್ತದ ಕೃಷಿ ಸವಾಲಾದರೂ ಭೂಮಿ ಹಡಿಲು ಬಿಡಬಾರದು ಎಂಬ ಉದ್ದೇಶದಿಂದ, ಕಷ್ಟ, ನಷ್ಟವಾದರೂ ರೈತರು ಭತ್ತದ ಕೃಷಿ ಮಾಡುತ್ತಿದ್ದಾರೆ. ಆದರೆ, ಸರ್ಕಾರದಿಂದ ಯಾವುದೇ ಪ್ರೋತ್ಸಾಹ ಸಿಗುತ್ತಿಲ್ಲ. ಸರ್ಕಾರದ ನಿರ್ಲಕ್ಷ್ಯ ಇದೇರೀತಿ ಮುಂದುವರಿದರೆ ರೈತರು ಕೃಷಿಯಿಂದ ವಿಮುಖರಾಗಬೇಕಾಗುತ್ತದೆ. ಯುವ ಪೀಳಿಗೆಯೂ ಕೃಷಿಗೆ ಬೆನ್ನು ಮಾಡಲಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ರೈತ ಮುಖಂಡ ಕೆ.ಶಿವಮೂರ್ತಿ ಮಾತನಾಡಿ, 15 ದಿನಗಳಿಂದ ಭತ್ತಕ್ಕೆ ಬೆಂಬಲ ಬೆಲೆ ಘೋಷಿಸುವಂತೆ ಜಿಲ್ಲಾಡಳಿತವನ್ನು ಒತ್ತಾಯ ಮಾಡುತ್ತಿದ್ದರೂ ಸ್ಪಂದನ ಸಿಕ್ಕಿಲ್ಲ. ರೈತರು ಬೆಳೆದ ಭತ್ತವನ್ನು ಮಾರಾಟ ಮಾಡಲು ಗಿರಣಿ ಮಾಲೀಕರ ಮುಂದೆ ಅಂಗಲಾಚುವ ದಯನೀಯ ಸ್ಥಿತಿ ನಿರ್ಮಾಣವಾಗಿದೆ ಎಂದರು.
ಕ್ವಿಂಟಲ್ ಭತ್ತಕ್ಕೆ ₹ 1,940 ಬೆಂಬಲ ಬೆಲೆ ಇದ್ದರೂ ಮಿಲ್ ಮಾಲೀಕರು ₹ 1,600 ಖರೀದಿ ಮಾಡುತ್ತಿದ್ದಾರೆ. ಭತ್ತದಲ್ಲಿ ತೇವಾಂಶವಿದೆ ಎಂದು ಕ್ವಿಂಟಲ್‌ಗೆ 5 ಕೆ.ಜಿ ಕಡಿತಗೊಳಿಸಲಾಗುತ್ತಿದೆ. ಇದರಿಂದ ಭತ್ತ ಬೆಳೆಗಾರರು ಭಾರಿ ನಷ್ಟ ಅನುಭವಿಸುವಂತಾಗಿದೆ ಎಂದು ಅಳಲು ತೋಡಿಕೊಂಡರು.
ರೈತ ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿ ಸಾಧ್ಯವಿಲ್ಲ ಎಂದಾದರೆ, ಹಡಿಲು ಭೂಮಿ ಕೃಷಿಗೆ ಸರ್ಕಾರ ಬೆಂಬಲ ನೀಡುವ ಅಗತ್ಯವೇನಿದೆ. ನಷ್ಟ ಅನುಭವಿಸಿ ರೈತರು ಭತ್ತ ಬೆಳೆಯಬೇಕೆ ಎಂದು ಖಾರವಾಗಿ ಪ್ರಶ್ನೆ ಮಾಡಿದರು.
ರೈತ ಮುಖಂಡ ಉಮಾನಾಥ್ ಹೆಗಡೆ ಮಾತನಾಡಿ, ಅಬಕಾರಿ ಇಲಾಖೆಗೆ ಜಿಲ್ಲಾ ಅಧಿಕಾರಿ ಇದ್ದಾರೆ. ಆದರೆ, ಕೃಷಿ ಇಲಾಖೆಗೆ ದಿಕ್ಕು ದಿಸೆ ಇಲ್ಲದಂತಾಗಿದೆ. ಜಿಲ್ಲಾ ಮಟ್ಟದ ಅಧಿಕಾರಿಗಳು ರೈತರ ಸಮಸ್ಯೆಗೆ ಸ್ಪಂದಿಸಲು ಅಸಹಾಯಕರಾಗಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ವಸಂತ್ ಗಿಳಿಯಾರ್, ಕೆ. ಭೋಜ ಪೂಜಾರಿ, ವಿಕಾಸ್ ಹೆಗಡೆ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.