ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೇದಿನ ಕೋಡಿ ಬಿದ್ದಿವೆ ನಾಲ್ಕು ಕೆರೆ

ಹುಣಸೂರು ತಾಲ್ಲೂಕಿನ ಹನಗೋಡು ಹೋಬಳಿಯಲ್ಲಿ ಭಾನುವಾರ ಸುರಿದ ಭಾರಿ ಮಳೆ
Last Updated 4 ಜೂನ್ 2018, 8:58 IST
ಅಕ್ಷರ ಗಾತ್ರ

ಹುಣಸೂರು: ತಾಲ್ಲೂಕಿನ ಹನಗೋಡು ಭಾಗದಲ್ಲಿ ಭಾರಿ ಮಳೆಯಾಗಿ ಒಂದೇ ದಿನ ನಾಲ್ಕು ಕೆರೆಗಳು ಭರ್ತಿಯಾಗಿ ಕೋಡಿ ಬಿದ್ದಿವೆ. 

ಹೋಬಳಿಯ ಭರತವಾಡಿ, ದೊಡ್ಡ ಹೆಜ್ಜೂರು, ದಾಸನಪುರ, ಕಿರಂಗೂರು, ಹಿಂಡಗೂಡ್ಲು, ಭಾಗದಲ್ಲಿ ಭಾನುವಾರ ಮಧ್ಯಾಹ್ನ 3.30ಕ್ಕೆ ಆರಂಭವಾದ ಮಳೆ 2 ಗಂಟೆಗೂ ಹೆಚ್ಚುಕಾಲ ಧಾರಾಕಾರವಾಗಿ ಸುರಿಯಿತು. ಗರಿಕೆಕಟ್ಟೆ, ದೊಡ್ಡಹೆಜ್ಜೂರು ಕೆರೆ, ದಾಸನಪುರ ಹೊಸಕೆರೆಗಳಿಗೆ ನೀರು ಹರಿದು, ಭರ್ತಿಯಾಗಿ ಕೋಡಿ ಬಿದ್ದಿವೆ.

ನಾಲ್ಕು ವರ್ಷದಿಂದ ಈಚೆಗೆ ಇಷ್ಟು ಜೋರಾಗಿ ಮಳೆ ಸುರಿದಿದ್ದನ್ನು ಕಂಡಿರಲಿಲ್ಲ. ಹಲವು ವರ್ಷಗಳಿಂದ ಬರ ಎದುರಿಸುತ್ತಿದ್ದ ನಮಗೆ ಈ ಸಾಲಿನಲ್ಲಿ ಭಾರಿ ಮಳೆಯಿಂದ ಸಂತಸ ತಂದಿದೆ. ಗ್ರಾಮದ ಕೆರೆ ತುಂಬಿ ಹಲವು ವರ್ಷಗಳೇ ಕಳೆದಿತ್ತು. ಈಗ ಕೆರೆ ಭರ್ತಿಯಾಗಿ ಕೋಡಿ ಬಿದ್ದಿದ್ದು ಜನ ಮತ್ತು ಜಾನುವಾರುಗಳಿಗೆ ಈ ಸಾಲಿನಲ್ಲಿ ಮೇವಿನ ಕೊರತೆ ನೀಗಿದೆ ಎಂದು ದಾಸನಪುರ ಗ್ರಾಮದ ರೈತ ಮಹದೇವೇಗೌಡ ತಿಳಿಸಿದ್ದಾರೆ.

ಹೋಬಳಿಯ ಕೆರೆಗಳು ಕೋಡಿ ಬಿದ್ದದ್ದರಿಂದ ತಗ್ಗು ಪ್ರದೇಶದಲ್ಲಿನ ಹೊಲಗಳಲ್ಲಿ ಬೇಸಾಯ ಮಾಡಿದ್ದ ಬಾಳೆ, ಹಸಿ ಮೆಣಸಿನಕಾಯಿ, ಟೊಮೆಟೊ ಸಸಿಗಳು ನೀರಿನಲ್ಲಿ ಮುಳುಗಿವೆ. ಶುಂಠಿ, ಮುಸುಕಿನಜೋಳ ಮತ್ತು ತಂಬಾಕು ಕೊಚ್ಚಿ ಹೋಗಿವೆ.

ಮಳೆಯಲ್ಲೇ ದೇವರ ದರ್ಶನ

ನಂಜನಗೂಡು: ನಗರದಲ್ಲಿ ಭಾನುವಾರ ಮಧ್ಯಾಹ್ನ ಬಿರುಗಾಳಿ ಸಹಿತ ಧಾರಾಕಾರ ಮಳೆ ಸುರಿಯಿತು. ನಗರದ ಶ್ರೀಕಂಠೇಶ್ವರಸ್ವಾಮಿ ದೇವಾಲಯಕ್ಕೆ ಬಂದಿದ್ದ ಯಾತ್ರಿಕರು ಮಳೆಯಲ್ಲೇ ಸರದಿಯಲ್ಲಿ ನಿಂತು ದೇವರ ದರ್ಶನ ಪಡೆದರು.

ನಗರದ ರಾಷ್ಟ್ರಪತಿ ರಸ್ತೆ, ರಥಬೀದಿಯಲ್ಲಿ ಕಾಮಗಾರಿಗಾಗಿ ರಸ್ತೆಯನ್ನು ಅಗೆದಿರುವುದರಿಂದ ಅಲ್ಲಲ್ಲಿ ನೀರು ನಿಂತಿದ್ದ ಪರಿಣಾಮ ವಾಹನ ಸವಾರರು, ಪಾದಚಾರಿಗಳು ಪರದಾಡಿದರು. ನಗರದ ಮಹಾತ್ಮ ಗಾಂಧಿ ರಸ್ತೆಯಲ್ಲಿರುವ ರೈಲ್ವೆ ಮೇಲ್ಸೇತುವೆಯ ಕೆಳಗೆ ನೀರು ತುಂಬಿಕೊಂಡು ವಾಹನ ಸಾವಾರರಿಗೆ ಅಡ್ಡಿಯುಂಟಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT