ಪ್ರಯಾಣಿಕರಿಗೆ ಹೈಟೆಕ್‌ ಫ್ರೆಶ್‌ಅಪ್‌ ಕೊಠಡಿ

7
ಉಡುಪಿ ಕೊಂಕಣ ರೈಲು ನಿಲ್ದಾಣದಲ್ಲಿ ಸ್ಥಾಪನೆ: ರಾಜ್ಯದಲ್ಲೇ ಪ್ರಥಮ

ಪ್ರಯಾಣಿಕರಿಗೆ ಹೈಟೆಕ್‌ ಫ್ರೆಶ್‌ಅಪ್‌ ಕೊಠಡಿ

Published:
Updated:
Prajavani

ಉಡುಪಿ: ಪ್ರಯಾಣಿಕರು ತಡರಾತ್ರಿ ರೈಲು ನಿಲ್ದಾಣದಿಂದ ಮನೆಗೆ ಹೋಗಲು ಸಾಧ್ಯವಾಗದಿದ್ದರೆ ಚಿಂತಿಸಬೇಕಿಲ್ಲ. ರೈಲು ಬರುವುದು ತಡವಾದರೆ ತಾಸುಗಟ್ಟಲೆ ಫ್ಲಾಟ್‌ಫಾರಂನಲ್ಲಿ ಕಾಯಬೇಕಿಲ್ಲ. ನಿರ್ಧಿಷ್ಟ ಹಣ ಪಾವತಿಸಿ ಇಂದ್ರಾಳಿಯ ರೈಲು ನಿಲ್ದಾಣದಲ್ಲಿರುವ ಅತ್ಯಾಧುನಿಕ ‘ಫ್ರೆಶ್‌ ಅಪ್‌’ ಕೊಠಡಿಗಳಲ್ಲಿ ವಿಶ್ರಾಂತಿ ಪಡೆಯಬಹುದು.

ಐಆರ್‌ಸಿಟಿಸಿ ಕೊಂಕಣ ರೈಲ್ವೆ ಹಾಗೂ ಫ್ರೆಶ್‌ಮೈಂಡ್ಸ್‌ ಸರ್ವೀಸ್‌ ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆಯ ಸಹಯೋಗದಲ್ಲಿ ರಾಜ್ಯದಲ್ಲೇ ಪ್ರಥಮ ‘ಫ್ರೆಶ್‌ಅಪ್‌’ ಕೊಠಡಿಗಳನ್ನು ನಗರದ ಕೊಂಕಣ ರೈಲ್ವೆ ನಿಲ್ದಾಣದಲ್ಲಿ ನಿರ್ಮಿಸಲಾಗಿದೆ. ಕೊಂಕಣ ರೈಲ್ವೆ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರು ಇದರ ಪ್ರಯೋಜನ ಪಡೆಯಬಹುದು.

ಈ ಸೌಲಭ್ಯ ಪಡೆಯಲು ಪ್ರಯಾಣಿಕರು www.freshup.space ವೆಬ್‌ಸೈಟ್‌ನಲ್ಲಿ ಮುಂಚಿತವಾಗಿ ಕೊಠಡಿ ಗಳನ್ನು ಕಾಯ್ದಿರಿಸಬೇಕು. ಅಥವಾ ನಿಲ್ದಾಣಕ್ಕೆ ಬಂದಿಳಿದ ಮೇಲೆಯೂ ರೈಲ್ವೆ ಟಿಕೆಟ್‌ ತೋರಿಸಿ ನೇರವಾಗಿ ಬುಕ್‌ ಮಾಡಬಹುದು.

ಇಲ್ಲಿ ವಿಶ್ರಾಂತಿ ಪಡೆಯಲು 3 ಕೊಠಡಿಗಳ ವ್ಯವಸ್ಥೆ ಇದೆ. ಸಂಪೂರ್ಣ ಹವಾನಿಯಂತ್ರಿತ ಕೋಣೆ, ಕಾಟ್‌, ಬೆಡ್‌ಶೀಟ್‌, ತಲೆದಿಂಬು, ಲಗೇಜ್‌ ಇಡಲು ಪ್ರತ್ಯೇಕ ಸ್ಥಳ, ಶೌಚಾಲಯ ವ್ಯವಸ್ಥೆ ಇದೆ. 24 ತಾಸು ಬಿಸಿನೀರು ಬರುತ್ತದೆ. ಜತೆಗೆ ಇಂಟರ್‌ನೆಟ್‌, ಲಗೇಜ್‌ ಡ್ರಾಪ್‌ ಸೌಕರ್ಯಗಳಿವೆ. ಪ್ರಯಾಣಿಕರು ಎಷ್ಟು ತಾಸು ಕೊಠಡಿ ಬಳಸುತ್ತಾರೊ ಅಷ್ಟಕ್ಕೆ ಮಾತ್ರ ಹಣ ಪಾವತಿಸಿದರಾಯಿತು ಎನ್ನುತ್ತಾರೆ ಕೊಂಕಣ ರೈಲ್ವೆ ಮಂಗಳೂರು ವಿಭಾಗದ ಸಾರ್ವಜನಿಕ ಸಂಪರ್ಕ ವ್ಯವಸ್ಥಾಪಕರಾದ ಕೆ.ಸುಧಾ ಕೃಷ್ಣಮೂರ್ತಿ.

ಚೇಯ್ಸ್‌ ಲಾಂಜ್‌ ಹಾಗೂ 2 ಡಬಲ್ ರೂಂ ಸೌಲಭ್ಯಗಳಿದ್ದು, ಪ್ರಯಾಣಿಕರು ಅನುಕೂಲಕ್ಕೆ ತಕ್ಕಂತೆ ಬುಕ್‌ ಮಾಡಿಕೊಳ್ಳಬಹುದು. ಚೈಸ್ ಲಾಂಜ್‌ನಲ್ಲಿ ನಾಲ್ಕು ಬೆಡ್‌ಗಳಿದ್ದು, ಸಹ ಪ್ರಯಾಣಿಕರಿಂದ ಕಿರಿಕಿರಿಯಾಗದಂತೆ ಪ್ರತಿಯೊಂದು ಕಾಟ್‌ಗೂ ಕರ್ಟನ್‌ ಹಾಕಲಾಗಿದೆ. ಜತೆಗೆ ಸೊಳ್ಳೆಪರದೆ ಕೂಡ ಇದೆ. ಎರಡು ಪ್ರತ್ಯೇಕ ಕೊಠಡಿಗಳಿದ್ದು, ಒಂದೊಂದು ರೂಂನಲ್ಲಿ ಎರಡೆರಡು ಬೆಡ್‌ಗಳನ್ನು ಹಾಕಲಾಗಿದೆ. ಕುಟುಂಬ ಸಮೇತ ಬರುವವರಿಗೆ ಇದು ಹೆಚ್ಚು ಅನುಕೂಲ ಎನ್ನುತ್ತಾರೆ ಸುಧಾ ಕೃಷ್ಣಮೂರ್ತಿ.

ರೈಲು ತಡವಾಗಿ ನಿಲ್ದಾಣಕ್ಕೆ ಬಂದಾಗ ಪ್ರಯಾಣಿಕರು ಚಳಿ, ಮಳೆ, ಬಿಸಿಲಿನಲ್ಲಿ ಪ್ಲಾಟ್‌ಫಾರಂನಲ್ಲಿ ಕಾಯುವ ಬದಲು, ಫ್ರೆಶ್‌ಅಪ್‌ ರೂಂನಲ್ಲಿ ವಿಶ್ರಾಂತಿ ಪಡೆಯಬಹುದು. ಒಂದೆರಡು ಗಂಟೆ ಮಲಗಬಹುದು. ಅನಾರೋಗ್ಯ ಪೀಡಿತರಿಗೆ, ಹಿರಿಯ ನಾಗಕರಿಗೆ ಈ ಸೌಲಭ್ಯ ಅನುಕೂಲವಾಗಲಿದೆ.

ತಡರಾತ್ರಿ ನಿಲ್ದಾಣದಲ್ಲಿ ಇಳಿದು ದೂರದ ಊರುಗಳಿಗೆ ಹೋಗಲು ಸಾರಿಗೆ ವ್ಯವಸ್ಥೆ ಇಲ್ಲವಾದರೆ, ಇಲ್ಲಿಯೇ ಮಲಗಿ ಬೆಳಿಗ್ಗೆ ಹೊರಡಬಹುದು. ರೈಲ್ವೆಯನ್ನು ಮತ್ತಷ್ಟು ಪ್ರಯಾಣಿಕ ಸ್ನೇಹಿಯಾಗಿಸಲು ಇಲಾಖೆ ವಿನೂತನ ಯೋಜನೆ ಜಾರಿಗೆ ತಂದಿದೆ ಎನ್ನುತ್ತಾರೆ ಅವರು.

ಪ್ರಸ್ತುತ ಹೈದರಾಬಾದ್‌ನ ಕಾಚಿಗುಡ ರೈಲು ನಿಲ್ದಾಣ, ಗಚ್ಚಿಬೌಲಿ, ತಿರುಪತಿ, ತಿರುವಣ್ಣಾಮಲೈ ಹಾಗೂ ಗುರುವಾಯೂರಿನಲ್ಲಿ ಮಾತ್ರ ಫ್ರೆಶ್‌ಅಪ್‌ ಕೊಠಡಿಗಳ ಸೌಲಭ್ಯವಿದೆ. ಗಂಟೆಗೆ ₹ 149ರಿಂದ ದರಗಳು ಪ್ರಾರಂಭವಾಗುತ್ತವೆ ಎಂದು ಮಾಹಿತಿ ನೀಡಿದರು.

‘ಉದ್ಘಾಟನೆ’
ಇಂದ್ರಾಳಿ ಕೊಂಕಣ ರೈಲು ನಿಲ್ದಾಣದಲ್ಲಿ ಫ್ರೆಶ್ ಅಪ್ ಕೊಠಡಿ ಶುಕ್ರವಾರ ಕೊಂಕಣ ರೈಲ್ವೆ ಕಾರವಾರ ಪ್ರಾದೇಶಿಕ ಪ್ರಬಂಧಕ ಮೊಹಮ್ಮದ್ ಅಸೀಮ್ ಸುಲೈಮಾನ್ ಉದ್ಘಾಟಿಸಿದರು. ಐ.ಆರ್.ಸಿ.ಟಿ.ಸಿ. ಮುಂಬೈನ ಹೆಚ್ಚುವರಿ ಮಹಾ ಪ್ರಬಂಧಕ ರಾಜೇಶ್ ರಾಣ, ಮಂಗಳೂರು ಪ್ರಾದೇಶಿಕ ಟ್ರಾಫಿಕ್ ಪ್ರಬಂಧಕ ಎಸ್.ವಿನಯ ಕುಮಾರ್, ಫ್ರೆಶ್ ಅಪ್ ಸಂಸ್ಥೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನಿಲ್ ರೆಡ್ಡಿ, ಮಾನವ ಸಂಪನ್ಮೂಲ ಅಧಿಕಾರಿ ಬಿಂದು ರಮಾವತ್, ಸಂದೇಶ್ ರೆಡ್ಡಿ, ಐಆರ್‌ಸಿಟಿಸಿ ಮುಂಬೈನ ಹಿರಿಯ ಮೇಲ್ವಿಚಾರಕ ಕುನಾಲ್‌ ವಾಕ್ಡೆ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !