ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಜಾಗೃತಿ ಕುಲುಮೆ ಸದಾ ಉರಿಯುತ್ತಿರಲಿ

ಅಂಬೇಡ್ಕರ್ ಯುವಜನೋತ್ಸವದಲ್ಲಿ ಚಿಂತಕ ದಿನೇಶ್ ಅಮಿನ್‌ ಮಟ್ಟು ಸಲಹೆ
Last Updated 23 ಡಿಸೆಂಬರ್ 2018, 15:47 IST
ಅಕ್ಷರ ಗಾತ್ರ

ಉಡುಪಿ: ಸಮಾಜದಲ್ಲಿ ಸಾಮಾಜಿಕ ಬದಲಾವಣೆಯಾಗಬೇಕಾದರೆ ಜನಜಾಗೃತಿ ಎಂಬ ಕುಲುಮೆ ಸದಾ ಉರಿಯುತ್ತಿರಬೇಕು. ಅದರೊಳಗಿನ ಬೆಂಕಿಯನ್ನು ಆರಲು ಬಿಡಬಾರದು ಎಂದು ಚಿಂತಕ ದಿನೇಶ್ ಅಮಿನ್‌ ಮಟ್ಟು ಹೇಳಿದರು.

ಅಂಬೇಡ್ಕರ್ ಯುವಸೇನೆಯ ವತಿಯಿಂದ ಭಾನುವಾರ ಬನ್ನಂಜೆ ನಾರಾಯಣಗುರು ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಅಂಬೇಡ್ಕರ್ ಯುವಜನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.‌

ಬಾಬಾ ಸಾಹೇಬ್‌ ಅಂಬೇಡ್ಕರ್ ಅವರ ಕೊನೆಯುಸಿರಿರುವವರೆಗೂ ಅವರ ಎದೆಯೊಳಗೆ ಬೆಂಕಿ ಉರಿಯುತ್ತಲೇ ಇತ್ತು. ಹಾಗಾಗಿಯೇ, ಎಲ್ಲರಿಗೂ ದಾರಿ ತೋರುವ ನೇತಾರನಾಗಿ, ದಲಿತ ಸೂರ್ಯನಾಗಿ ಬೆಳೆದರು ಎಂದು ಸ್ಮರಿಸಿದರು.

ಅಂಬೇಡ್ಕರ್ ನಮಗೆಲ್ಲ ಪ್ರಜಾಪ್ರಭುತ್ವ ಎಂಬ ಅಸ್ತ್ರ ನೀಡಿದ್ದಾರೆ. ದಲಿತರನ್ನು ನಾಯಿಗಳೆಂದು ಕರೆದ, ಸಂವಿಧಾನವನ್ನು ಬದಲಿಸಲು ಹೊರಟ, ಮೀಸಲಾತಿ ನಿಲ್ಲಿಸುತ್ತೇವೆ ಎಂದ, ಮನುವಾದಿ ಸಂವಿಧಾನ ಬೇಕು ಎಂದವರ ವಿರುದ್ಧ ಅದನ್ನು ಬಳಸಬೇಕಿದೆ ಎಂದರು.

ದೇಶದ ಕಟ್ಟಕಡೆಯ ವ್ಯಕ್ತಿಗೂ ಪ್ರಭುತ್ವವನ್ನು ಬದಲಿಸುವ ಶಕ್ತಿಯನ್ನು ಅಂಬೇಡ್ಕರ್ ಸಂವಿಧಾನದ ಮೂಲಕ ಕೊಟ್ಟಿದ್ದಾರೆ. ಅದನ್ನು ಚುನಾವಣೆಯಲ್ಲಿ ಸೂಕ್ತವಾಗಿ ಬಳಸಬೇಕು ಎಂದು ಅಮಿನ್‌ ಮಟ್ಟು ಕಿವಿಮಾತು ಹೇಳಿದರು.

ಈಚೆಗೆ ಕೆಲವರು ದೆಹಲಿಯಲ್ಲಿ ಸಂವಿಧಾನವನ್ನು ಸುಟ್ಟರು. ಅಂಬೇಡ್ಕರ್ ಕೂಡ 1955ರಲ್ಲಿ ಸಂವಿಧಾನ ಸುಡುವುದಾಗಿ ಲೋಕಸಭೆಯಲ್ಲಿ ಹೇಳಿದ್ದರು. ‘ಪ್ರಜಾಪ್ರಭುತ್ವ ಎಂಬ ಸೌಧ ಕಟ್ಟಿದ್ದು ದೇವರು ನೆಲೆಸಲಿ ಎಂದು. ಆದರೆ, ಅದರೊಳಗೆ ದೆವ್ಚಗಳು ಸೇರಿಕೊಂಡಿರುವುದರಿಂದ ಸಂವಿಧಾನವನ್ನು ಸುಡುವುದಾಗಿ’ ಅವರು ನೋವು, ನಿರಾಶೆ ಹತಾಶೆಗಳಿಂದ ಹೇಳಿದ್ದರು. ಈಗ ಸಂವಿಧಾನ ಸುಡಲು ಹೊರಟಿರುವುದು ಮೀಸಲಾತಿ ಹಾಗೂ ದಲಿತ ವಿರೋಧಿಗಳು ಎಂದು ವಾಗ್ದಾಳಿ ನಡೆಸಿದರು.

ಅಂಬೇಡ್ಕರ್ ಹಿಂದೂ ಧರ್ಮದ ವಿರೋಧಿ ಎಂಬ ಆರೋಪಗಳಿವೆ. ಹಿಂದೂ ಧರ್ಮದ ಸುಧಾರಣೆಯಾಗದೆ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ಯಶಸ್ವಿಯಾಗುವುದಿಲ್ಲ ಎಂಬ ಕಾರಣಕ್ಕೆ ಹಿಂದೂ ಕೋಡ್‌ ಬಿಲ್‌ ಜಾರಿಗೆ ಮುಂದಾದರು. ಆದರೆ, ಸಂಸತ್ತಿನಲ್ಲಿ ಬೆಂಬಲ ಸಿಗದೆ ಅದು ಕಾನೂನಾಗಲಿಲ್ಲ ಎಂದು ಅಸಮಾಧನ ವ್ಯಕ್ತಪಡಿಸಿದರು.

ಅಂಬೇಡ್ಕರ್ ಅವರನ್ನು ಹಿಂದೆ ನಿರ್ಲಕ್ಷ್ಯ ಮಾಡಿದವರು, ತುಚ್ಚೀಕರಿಸಿದವರು ಈಗ ಅಪ್ಪಿಕೊಂಡು ಆರಾಧನೆ ಮಾಡಲು ಶುರುಮಾಡಿದ್ದಾರೆ. ಅಂಬೇಡ್ಕರ್ ಅವರನ್ನು ದೇವರನ್ನಾಗಿಸುವ ಬದಲು ಅವರ ಸಿದ್ಧಾಂತಗಳಿಗೆ ಬದ್ಧವಾಗಿ ನಡೆದುಕೊಳ್ಳಬೇಕಿದೆ ಎಂದರು.

ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣ ಮಾಡುವ ಮೂಲಕ ಮೀಸಲಾತಿ ಕಸಿದುಕೊಳ್ಳುವ ಹುನ್ನಾರ ನಡೆಯುತ್ತಿದೆ. ಖಾಸಗೀಕರಣದಿಂದ ಜಾತಿವ್ಯವಸ್ಥೆ ಸಾದ್ಯವಿಲ್ಲ. ಖಾಸಗಿ ಮೀಸಲಾತಿ ಜಾರಿ ಬಗ್ಗೆ ಹೋರಾಟಗಳು ನಡೆಯಬೇಕಿದೆ ಎಂದರು.

ಕೇಂದ್ರ ಸರ್ಕಾರ ಎಸ್.ಸಿ ಎಸ್‌ಟಿ ಸಮುದಾಯಗಳ ಅಭಿವೃದ್ಧಿಗೆ ಮೀಸಲಿಟ್ಟ ಹಣ ₹ 85 ಸಾವಿರ ಕೋಟಿ. ಹಿಂದಿನ ಕಾಂಗ್ರೆಸ್‌ ಸರ್ಕಾರ ಮೀಸಲಿಟ್ಟ ಹಣ ₹ 28 ಸಾವಿರ ಕೋಟಿ. ದಲಿತರ ಮೇಲೆ, ಅಂಬೇಡ್ಕರ್ ಮೇಲೆ ಬದ್ಧತೆ ಯಾರಿಗೆ ಹೆಚ್ಚಿದೆ ಎಂಬುದು ಈ ಅಂಕಿ ಅಂಶಗಳು ಹೇಳುತ್ತವೆ.

ಹಿಂದುಳಿದ ವರ್ಗಗಳಿಗೆ ಸೇರಿ ಮೀಸಲಾತಿ ಸೌಲಭ್ಯ ಪಡೆದವರೂ ಮೆರಿಟ್‌ ವ್ಯವಸ್ಥೆ ಜಾರಿ ಬಗ್ಗೆ ಮಾತನಾಡುತ್ತಿರುವುದು ದುರಂತ. ದಲಿತರಿಗೆ ಮೀಸಲಾತಿ ಬೇಡ; ಎಲ್ಲ ಕ್ಷೇತ್ರಗಳಲ್ಲೂ ಜನಸಂಖ್ಯೆ ಆಧಾರಿತ ಪ್ರಾತಿನಿಧ್ಯ ಕೊಡಲಿ ಎಂದು ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಯುವಸೇನೆ ಅಧ್ಯಕ್ಷ ಹರೀಶ್ ಸಾಲ್ಯಾನ್‌ ಮಲ್ಪೆ, ಬಾರಕೋಲು ಪತ್ರಿಕೆ ಸಂಪಾದಕ ಬಿ.ಆರ್.ರಂಗಸ್ವಾಮಿ, ಮುಖಂಡರಾದ ಜಯನ್ ಮಲ್ಪೆ, ರಾಧಾ ತೊಟ್ಟಂ, ಶಶಿಕಲಾ ಪಾಲನ್‌ ತೊಟ್ಟಂ, ಅನಿಲ್ ಅಂಬಲಪಾಡಿ, ದಿನೇಶ್ ಪೂಡುಬೆಟ್ಟು, ಸಂಪತ್ ಗುಜ್ಜರಬೆಟ್ಟು, ರಮೇಶ್‌ ಮಾಬೆನ್‌ ಅಮ್ಮುಂಜೆ, ಮಂಜುನಾಥ್‌ ಕಪ್ಪೆಟ್ಟು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT