ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀನುಗಾರರ ನಾಪತ್ತೆ: ಶಾಸಕ ಸುಕುಮಾರ ಶೆಟ್ಟಿ, ನಟಿ ತಾರಾ ವಿರುದ್ಧ ಜಿ.ಶಂಕರ್ ಗರಂ

ಮೀನುಗಾರರ ಪತ್ತೆಗೆ ಆಗ್ರಹ: ಉಡಾಫೆ ಮಾತನಾಡದಂತೆ ಎಚ್ಚರಿಕೆ
Last Updated 20 ಏಪ್ರಿಲ್ 2019, 12:25 IST
ಅಕ್ಷರ ಗಾತ್ರ

ಉಡುಪಿ: ಮೀನುಗಾರರ ಸಮುದಾಯದ ಮುಖಂಡ ಹಾಗೂ ಉದ್ಯಮಿ ಜಿ.ಶಂಕರ್ ಅವರು ಬೈಂದೂರು ಶಾಸಕ ಸುಕುಮಾರ ಶೆಟ್ಟಿ ಹಾಗೂ ಬಿಜೆಪಿ ಸ್ಟಾರ್ ಪ್ರಚಾರಕರಾದ ತಾರಾ ಅವರನ್ನು ತರಾಟೆಗೆ ತೆಗೆದುಕೊಂಡ ವಿಡಿಯೋ ಜಾಲತಾಣಗಳಲ್ಲಿ ಸುದ್ದಿಯಾಗಿದೆ.

ಶುಕ್ರವಾರಬೈಂದೂರಿನ ಬಗ್ವಾಡಿಯಲ್ಲಿ ಮಹಿಷಾಸುರ ಮರ್ಧಿನಿ ದೇವಸ್ಥಾನದ ರಥೋತ್ಸವದ ಅಂಗವಾಗಿ ಧಾರ್ಮಿಕ ಸಭೆ ನಡೆಯುತ್ತಿತ್ತು. ಈ ಸಂದರ್ಭ ಅಲ್ಲಿಗೆ ಬಂದ ತಾರಾ ಹಾಗೂ ಶಾಸಕ ಸುಕುಮಾರ ಶೆಟ್ಟಿ ಅವರ ವಿರುದ್ಧ ಶಂಕರ್ ವಾಗ್ದಾಳಿ ನಡೆಸಿದರು.

‘ಸಜ್ಜನರು (ಮೊಗವೀರರು) ರೊಚ್ಚಿಗೆದ್ದರೆ ಯಾರ ಮಾತನ್ನೂ ಕೇಳುವುದಿಲ್ಲ. ಅದಕ್ಕೆ ಅವಕಾಶ ಕೊಡಬೇಡಿ. ಮೀನುಗಾರರು ನಾಪತ್ತೆಯಾಗಿ 150 ದಿನಗಳು ಕಳೆದಿವೆ. ಇನ್ನೂ ಹುಡುಕುತ್ತಲೇ ಇದ್ದೇವೆ ಎಂದರೆ ಏನರ್ಥ. ಸರ್ಜಿಕಲ್ ಸ್ಟ್ರೈಕ್ ಮಾಡಲು ಸಾಧ್ಯವಿದೆ, ಬಡಪಾಯಿ ಮೀನುಗಾರರನ್ನು ಹುಡುಕಿಕೊಡಲು ನಿಮಗೆ ಸಾಧ್ಯವಿಲ್ಲವೇ ಎಂದು ತಾರಾ ಅವರನ್ನು ಜಿ.ಶಂಕರ್ ತರಾಟೆಗೆ ತೆಗೆದುಕೊಂಡರು.

‘ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಈಚೆಗೆ ನಾಪತ್ತೆಯಾದ ಮೀನುಗಾರರ ಕುಟುಂಬಕ್ಕೆ ಭೇಟಿನೀಡಿ ಸಾಂತ್ವನ ಹೇಳಿದ್ದಾರೆ. ಶೋಧ ಕಾರ್ಯಾಚರಣೆಯನ್ನು ಖುದ್ದು ಪರಿಶೀಲಿಸುವ ಭರವಸೆ ನೀಡಿದ್ದಾರೆ. ಈ ವಿಚಾರದಲ್ಲಿ ಬಿಜೆಪಿ ನಿರ್ಲಕ್ಷ್ಯ ಮಾಡಿಲ್ಲ ಎಂದು ತಾರಾ ಸಮಜಾಯಿಷಿ ನೀಡಿದರು.

ಮೀನುಗಾರರ ಸಂಕಷ್ಟಗಳಿಗೆ ಸ್ಪಂದಿಸಲು ಕೇಂದ್ರದಲ್ಲಿ ಪ್ರತ್ಯೇಕ ಮೀನುಗಾರಿಕಾ ಇಲಾಖೆ ರಚಿಸಲು ಮೋದಿ ಸರ್ಕಾರ ಮುಂದಾಗಿದೆ. ಮೀನುಗಾರರ ಅಭಿವೃದ್ಧಿಗೆ ಹಿಂದಿನ ಯಾವುದೇ ಸರ್ಕಾರಗಳು ಮಾಡದಂತಹ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿ.ಶಂಕರ್, ‘ನಾನು ಮೋದಿ ಅಭಿಮಾನಿಯಾಗಿದ್ದೆ. ಆದರೆ, ಪ್ರಧಾನಿ ಭರವಸೆಗಳನ್ನು ಕೊಟ್ಟಿದ್ದು ಬಿಟ್ಟರೆ ಈಡೇರಿಸಲಿಲ್ಲ. ಮೀನುಗಾರರನ್ನು ಫಾಲಿಶ್‌ ಮಾಡಲು ಬರಬೇಡಿ. ನಾವು ಈಗಾಗಲೇ ನೊಂದಿದ್ದೇವೆ. ಈ ವಿಚಾರವನ್ನು ಯಡಿಯೂರಪ್ಪ ಅವರ ಗಮನಕ್ಕೆ ತನ್ನಿ’ ಎಂದು ಕಟುವಾಗಿ ಹೇಳಿದರು.

ಜಿ.ಶಂಕರ್ ಅವರ ಮಾತಿನಿಂದ ಸಿಟ್ಟಾದ ತಾರಾ ‘ನಮ್ಮದು ಪಾಲಿಶ್ ಮಾಡುವ ಪಕ್ಷವಲ್ಲ. 60 ವರ್ಷ (ಕಾಂಗ್ರೆಸ್‌) ಪಾಲಿಶ್ ಮಾಡಿಸಿಕೊಂಡಾಗಿದೆ. ನೀವು ಅವರನ್ನು ಕೇಳಿ’ ಎಂದು ಸ್ಥಳದಿಂದ ತೆರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT