ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: ಸ್ವಚ್ಛ ಭಾರತ ಕಲ್ಪನೆ ಸಾಕಾರಕ್ಕೆ ಕೈಜೋಡಿಸಿ

ಗಾಂಧಿ ಜಯಂತಿಯಲ್ಲಿ ಶಾಸಕ ರಘುಪತಿ ಭಟ್ ಕರೆ
Last Updated 2 ಅಕ್ಟೋಬರ್ 2021, 15:02 IST
ಅಕ್ಷರ ಗಾತ್ರ

ಉಡುಪಿ: ಮಹಾತ್ಮಾ ಗಾಂಧೀಜಿ ತತ್ವ ಹಾಗೂ ಚಿಂತನೆಗಳಲ್ಲಿ ಸ್ವಚ್ಛತೆಯೂ ಒಂದಾಗಿದ್ದು, ಗಾಂಧೀಜಿ ಆಶಯದಂತೆ ಸ್ವಚ್ಛ ಭಾರತ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಶಾಸಕ ರಘುಪತಿ ಭಟ್ ಹೇಳಿದರು.

ಅಜ್ಜರಕಾಡು ಭುಜಂಗ ಪಾರ್ಕ್‌ನಲ್ಲಿ ನಗರಸಭೆಯಿಂದ ಆಯೋಜಿಸಿದ್ದ ಮಹಾತ್ಮ ಗಾಂಧಿ ಜಯಂತಿಯಲ್ಲಿ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾತಿ ಮಾತನಾಡಿದರು.

ಗಾಂಧೀಜಿ ಅವರ ಚಿಂತನೆಯಂತೆ ಸ್ವಚ್ಛತೆ ಸುತ್ತಮುತ್ತಲಿನ ಪರಿಸರದಲ್ಲಿ ಮಾತ್ರವಲ್ಲ ಪ್ರತಿಯೊಬ್ಬರ ಮನದಲ್ಲೂ ಮೂಡಬೇಕು. ಪ್ರಧಾನಿ ನರೇಂದ್ರ ಮೋದಿ ಅವರು ಗಾಂಧೀಜಿ 150ನೇ ಜನ್ಮ ದಿನಾಚರಣೆ ಸಂದರ್ಭ ನೀಡಿದ ಕರೆಯಂತೆ ದೇಶದಾದ್ಯಂತ ಸ್ವಚ್ಛತಾ ಅಭಿಯಾನ ಆರಂಭಗೊಂಡಿದೆ. ಉಡುಪಿಯನ್ನು ಸ್ವಚ್ಛ ಉಡುಪಿ ಮಾಡಲು ಪ್ರತಿಯೊಬ್ಬರೂ ಸಂಕಲ್ಪ ಮಾಡಬೇಕಿದೆ ಎಂದರು.

ಸ್ವಚ್ಛ ಭಾರತ್ ಮಿಷನ್-ನಗರ ಮತ್ತು ಅಮೃತ್ 2ನೇ ಹಂತದ ಯೋಜನೆಯಂತೆ, ರಾಷ್ಟ್ರದಾದ್ಯಂತ ತ್ಯಾಜ್ಯವನ್ನು ಸಮರ್ಪಕ ರೀತಿಯಲ್ಲಿ ತೆರವುಗೊಳಿಸಲು ಕೇಂದ್ರ ಸರ್ಕಾರ ನೆರವು ನೀಡಲಿದ್ದು, ಈ ಯೋಜನೆಯಡಿ ಉಡುಪಿಯ ಕರ್ವಾಲಿನಲ್ಲಿರುವ ತ್ಯಾಜ್ಯ ರಾಶಿಯನ್ನು ತೆರವು ಮಾಡಬೇಕಿದೆ.

ನದಿನೀರು ಕಲುಷಿತಗೊಳ್ಳುವುದನ್ನು ತಪ್ಪಿಸಲು ಕೇಂದ್ರದ ನೆರವು ಸಿಗಲಿದ್ದು, ನಗರದಲ್ಲಿ ಒಳಚರಂಡಿ ವ್ಯವಸ್ಥೆಯ ಅವ್ಯವಸ್ಥೆಯಿಂದ ಕಲುಷಿತಗೊಂಡಿರುವ ಸ್ವರ್ಣಾ ನದಿಯನ್ನು ಸ್ವಚ್ಛಗೊಳಿಸಬೇಕಿದೆ. ಈಗಾಗಲೇ ಉಡುಪಿ ಒಳಚರಂಡಿ ಕಾಮಗಾರಿಗೆ ₹ 320 ಕೋಟಿ ಡಿಪಿಆರ್ ಸಲ್ಲಿಕೆಯಾಗಿದ್ದು, ಮಂಜೂರಾತಿ ಕೂಡ ದೊರೆತಿದೆ. ನಗರಸಭೆಯಿಂದ ಒಳಚರಂಡಿ ವ್ಯವಸ್ಥೆ ಸರಿಪಡಿಸಿ ನಗರವನ್ನು ಸ್ವಚ್ಛವಾಗಿಡಲಾಗುವುದು ಎಂದರು.

ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಮಾತನಾಡಿ, ಗಾಂಧೀಜಿ ಜಯಂತಿ ಜೊತೆಯಲ್ಲಿ ಲಾಲ್ ಬಹದ್ದೂರ್ ಶಾಸ್ತ್ರೀ ಜಯಂತಿ ಕೂಡ ಆಚರಿಸಲಾಗುತ್ತಿದ್ದು, ಇಬ್ಬರು ಮಹಾನ್ ವ್ಯಕ್ತಿಗಳ ಸರಳ ಜೀವನ ಎಲ್ಲರಿಗೂ ಮಾದರಿ ಎಂದರು.

ಅ.1 ರಿಂದ 31ರವರೆಗೆ ಕ್ಲೀನ್ ಇಂಡಿಯಾ ಕಾರ್ಯಕ್ರಮ ನಡೆಯುತ್ತಿದ್ದು, ಅನುಪಯುಕ್ತ ಪ್ಲಾಸ್ಟಿಕ್ ಸಂಗ್ರಹಿಸಿ ವಿಲೇವಾರಿ ಮಾಡುವ ಮೂಲಕ ಪ್ಲಾಸ್ಟಿಕ್ ಮುಕ್ತ ಉಡುಪಿ ಜಿಲ್ಲೆ ಮಾಡುವ ಆಭಿಯಾನ ನಡೆಯುತ್ತಿದೆ. ಸಾರ್ವಜನಿಕರು ಈ ಕಾರ್ಯಕ್ಕೆ ಸಹಕಾರ ನೀಡಬೇಕು ಎಂದರು.

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಕ್ಲೀನ್ ಇಂಡಿಯಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಳಿಕ ರಸ್ತೆ ಬದಿಯಲ್ಲಿ ಬಿದ್ದಿದ್ದ ಅನುಪಯುಕ್ತ ಪ್ಲಾಸ್ಟಿಕ್ ವಸ್ತುಗಳನ್ನು ಹೆಕ್ಕಿ ವಿಲೇವಾರಿ ಮಾಡಲಾಯಿತು.

ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ನಗರಾಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್, ಎಸ್‌ಪಿ ವಿಷ್ಣುವರ್ಧನ್, ನಗರಾಭಿವೃಧ್ದಿ ಕೋಶದ ಯೋಜನಾ ನಿರ್ದೇಶಕಿ ಪ್ರತಿಭಾ ಮತ್ತಿತರರು ಉಪಸ್ಥಿತರಿದ್ದರು.

ಪೌರಾಯುಕ್ತ ಉದಯ ಶೆಟ್ಟಿ ಸ್ವಾಗತಿಸಿದರು. ನಗರಸಭೆ ಎಂಜಿನಿಯರ್ ಮೋಹನ್ ರಾಜ್ ವಂದಿಸಿದರು. ಧನಂಜಯ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT