ಬುಧವಾರ, ನವೆಂಬರ್ 13, 2019
23 °C
ಗಾಂಧೀಜಿ ಛಾಯಾಚಿತ್ರಗಳ ಪ್ರದರ್ಶನ

ಗಾಂಧೀಜಿ ಜೀವನವೇ ಸಂದೇಶ: ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್

Published:
Updated:
Prajavani

ಉಡುಪಿ: ಮಹಾತ್ಮ ಗಾಂಧೀಜಿ ಹೇಳಿದ ‘ನನ್ನ ಜೀವನವೇ ಒಂದು ಸಂದೇಶ’ ಎಂಬ ಮಾತುಗಳು ಪ್ರತಿಯೊಬ್ಬರಿಗೂ ದಾರಿದೀಪವಾಗಬೇಕು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್‌ ಹೇಳಿದರು.

ಗುರುವಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ನಗರದ ಬೋರ್ಡ್ ಹೈಸ್ಕೂಲ್‍ನಲ್ಲಿ ಆಯೋಜಿಸಿದ್ದ ಗಾಂಧೀಜಿ ಅಪೂರ್ವ ಛಾಯಾಚಿತ್ರಗಳ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

ಗಾಂಧೀಜಿ ಸರ್ವಕಾಲಕ್ಕೂ ಪ್ರಸ್ತುತ. ಗ್ರಾಮ ಸ್ವರಾಜ್ಯ, ಸ್ವಚ್ಛ ಭಾರತದಂತಹ ಅವರ ಉದಾತ್ತ ಚಿಂತನೆಗಳನ್ನು ನಾವೆಲ್ಲ ಕಾರ್ಯರೂಪಕ್ಕೆ ತರಬೇಕಿದೆ ಎಂದರು.‌

ಗಾಂಧೀಜಿಯವರ ಮಾತು ಮತ್ತು ಕೃತಿಯಲ್ಲಿ ವ್ಯತ್ಯಾಸವಿರಲಿಲ್ಲ. ಸರಳವಾಗಿ ಜೀವಿಸುವುದು, ಪರಿಣಾಮಕಾರಿ ಹೋರಾಟದ ಹಾದಿಯನ್ನು ಜನರಿಗೆ ತೋರಿಸಿಕೊಟ್ಟಿದ್ದಾರೆ. ಸ್ವತಃ ಶೌಚಾಲಯವನ್ನು ಶುಚಿಗೊಳಿಸಿ ಯಾವುದೇ ಕೆಲಸ ಕೀಳಲ್ಲ ಎಂದು ತೋರಿಸಿದರು. ಅವರ ಹಾದಿಯಲ್ಲಿ ಎಲ್ಲರೂ ಸಾಗಬೇಕಿದೆ ಎಂದರು.

ಗಾಂಧೀಜಿ ಜೀವನ ಚರಿತ್ರೆಯನ್ನು ಫೋಟೋಗ್ರಫಿ ಹಾಗೂ ವೀಡಿಯೋ ಮೂಲಕ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಪ್ರದರ್ಶಿಸುತ್ತಿರುವುದು ಶ್ಲಾಘನೀಯ ಎಂದರು.

ಬಹುತೇಕ ಮಕ್ಕಳಿಗೆ ಗಾಂಧೀಜಿ ಬಗ್ಗೆ ತಿಳಿದಿಲ್ಲ. ಅವರ ಜೀವನ ಹೋರಾಟದ ಬಗ್ಗೆ ಮಾಹಿತಿ ಇಲ್ಲ. ವಿಶ್ವವೇ ಪೂಜ್ಯನೀಯವಾಗಿ ನೋಡುವ ವ್ಯಕ್ತಿ ಗಾಂಧೀಜಿ, ಸತ್ಯ, ಅಹಿಂಸೆ, ತ್ಯಾಗ ಹಾಗೂ ಉನ್ನತ ಮೌಲ್ಯಗಳಿಂದ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು ಎಂಬ ವಿಚಾರವೇ ಹೆಚ್ಚಿನ ಮಕ್ಕಳಿಗೆ ತಿಳಿದಿರುವುದು ವಿಷಾದನೀಯ ಎಂದರು.

ಪೋಷಕರು ಗಾಂಧೀಜಿ ಕುರಿತು ಮಕ್ಕಳಿಗೆ ತಿಳಿಸಬೇಕು. ಗಾಂಧಿ ಕುರಿತ ಛಾಯಾಚಿತ್ರ ಮತ್ತು ವೀಡಿಯೋವನ್ನು ಮಕ್ಕಳು ಹಾಗೂ ಸಾರ್ವಜನಿಕರು ವೀಕ್ಷಣೆ ಮಾಡಬೇಕು. ಈ ಮೂಲಕ ಗಾಂಧೀ ತತ್ವಗಳಿಂದ ಪ್ರೇರಣೆ ಪಡೆಯಬೇಕು ಎಂದು ಡಿಸಿ ಸಲಹೆ ನೀಡಿದರು.

ಬೋರ್ಡ್ ಹೈಸ್ಕೂಲ್‍ನಲ್ಲಿ ನ.9ರವರೆಗೆ ಬೆಳಿಗ್ಗೆ 9 ರಿಂದ ಸಂಜೆ 5ರವರೆಗೆ ಛಾಯಾಚಿತ್ರ ಪ್ರದರ್ಶನ ನಡೆಯಲಿದೆ. 

ಕಾರ್ಯಕ್ರಮದಲ್ಲಿ ಡಿಡಿಪಿಐ ಶೇಷಶಯನ ಕಾರಿಂಜ, ಬೋರ್ಡ್ ಪಿಯು ಕಾಲೇಜಿನ ಪ್ರಾಂಶುಪಾಲ ವಿಲಾಸ್ ಕುಮಾರ್, ಹೈಸ್ಕೂಲ್ ವಿಭಾಗದ ಪ್ರಾಂಶುಪಾಲ ಸುರೇಶ್ ಭಟ್ ಉಪಸ್ಥಿತರಿದ್ದರು. ಜಿಲ್ಲಾ ವಾರ್ತಾಧಿಕಾರಿ ಖಾದರ್ ಷಾ ಸ್ವಾಗತಿಸಿದರು.

ಪ್ರತಿಕ್ರಿಯಿಸಿ (+)