ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಲ್ಲೂರು: ಗಣೇಶ್‌ ಕಿಣಿ ಬೆಳ್ವೆ ರಾಜಿನಾಮೆ

ಧಾರ್ಮಿಕ ದತ್ತಿ ಇಲಾಖೆ ಆಯುಕ್ತರಿಗೆ ಪತ್ರ ರವಾನೆ
Last Updated 26 ಮಾರ್ಚ್ 2021, 13:24 IST
ಅಕ್ಷರ ಗಾತ್ರ

ಕುಂದಾಪುರ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ನೂತನವಾಗಿ ನೇಮಕಗೊಂಡಿದ್ದ ಉದ್ಯಮಿ ಗಣೇಶ್ ಕಿಣಿ ಬೆಳ್ವೆ ಅವರು ರಾಜ್ಯ ಮುಜರಾಯಿ ಸಚಿವಾಲಯದ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರಿಗೆ ರಾಜಿನಾಮೆ ಪತ್ರ ಸಲ್ಲಿಸಿದ್ದಾರೆ.

ವ್ಯವಸ್ಥಾಪನಾ ಸಮಿತಿ ಸದಸ್ಯನಾಗಿ ನೇಮಕಗೊಂಡಿದ್ದು ದೇವರ ಒದಗಿಸಿಕೊಟ್ಟ ಅವಕಾಶ. ಆದರೆ ಸಮಿತಿ ಸದಸ್ಯರ ನೇಮಕಾತಿ ನಡೆದು 5 ತಿಂಗಳು ಆದರೂ ವ್ಯವಸ್ಥಾಪನಾ ಸಮಿತಿ ಸಭೆ ನಡೆದಿಲ್ಲ. ಜತೆಗೆ ಯಾವುದೆ ನಿರ್ಧಾರ ತೆಗೆದುಕೊಂಡಿಲ್ಲ. ಕೆಲವರ ಪ್ರತಿಷ್ಠೆ ಈ ವಿಳಂಭಕ್ಕೆ ಕಾರಣ ಎಂದು ತಿಳಿದು ಬಂದಿದ್ದು, ಇಂತಹ ವ್ಯವಸ್ಥೆಯಲ್ಲಿ ಮುಂದುವರಿಯುವುದು ಸರಿಯಲ್ಲ ಎಂಬ ಕಾರಣದಿಂದ ರಾಜಿನಾಮೆ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.

ಗಣೇಶ್ ಕಿಣಿ ಬೆಳ್ವೆ ಅವರು ರಾಜಿನಾಮೆ ನಿರ್ಧಾರ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದ್ದಂತೆ ಅವರ ಸ್ನೇಹಿತ ಬಳಗ ಹಾಗೂ ಹಿತೈಷಿಗಳು ಅವರನ್ನು ಸಂಪರ್ಕಿಸಿ ರಾಜಿನಾಮೆ ಹಿಂತೆಗೆತಕ್ಕೆ ಒತ್ತಾಯಿಸಿದ್ದಾರೆ.

‘2020 ಅಕ್ಟೋಬರ್‌ 21 ರಂದು ಬೆಂಗಳೂರಿನಲ್ಲಿ ನಡೆದಿದ್ದ ರಾಜ್ಯ ಧಾರ್ಮಿಕ ಪರಿಷತ್‌ ಸಭೆಯಲ್ಲಿ ಕೊಲ್ಲೂರಿನ ಮೂಕಾಂಬಿಕಾ ದೇವಸ್ಥಾನಕ್ಕೆ ನೂತನ ವ್ಯವಸ್ಥಾಪನಾ ಸಮಿತಿ ರಚಿಸುವ ಕುರಿತು ತೆಗೆದುಕೊಂಡ ನಿರ್ಧಾರದಂತೆ ಅ. 27 ರಂದು 9 ಮಂದಿ ಸದಸ್ಯರನ್ನು ನೇಮಕಾತಿ ಮಾಡಿ ಆದೇಶ ಹೊರಡಿಸಲಾಗಿತ್ತು’.

ರಾಮಚಂದ್ರ ಅಡಿಗ, ರತ್ನಾ ಆರ್. ಕುಂದರ್, ಸಂಧ್ಯಾ ರಮೇಶ್, ಗೋಪಾಲಕೃಷ್ಣ, ಕೆರಾಡಿ ಚಂದ್ರಶೇಖರ ಶೆಟ್ಟಿ, ಡಾ.ಅತುಲ ಕುಮಾರ ಶೆಟ್ಟಿ, ಗಣೇಶ್ ಕಿಣಿ, ಜಯಾನಂದ ಹೋಬಳಿದಾರ್ ಹಾಗೂ ಶೇಖರ ಪೂಜಾರಿ ಅವರನ್ನು ನೇಮಕ ಮಾಡಲಾಗಿತ್ತು.

ಸಮಿತಿಗೆ ನೇಮಕ ಸದಸ್ಯರು ತಮ್ಮ ಪ್ರಥಮ ಸಭೆಯಲ್ಲಿ ತಮ್ಮಲ್ಲಿ ಒಬ್ಬರನ್ನು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಆಯ್ಕೆ ಮಾಡಿ, ನಡವಳಿಯನ್ನು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿ ಇಲಾಖೆಯ ಆಯುಕ್ತರ ಕಚೇರಿಗೆ ಕಳುಹಿಸುವಂತೆ ಆದೇಶ ಪತ್ರದಲ್ಲಿ ಸೂಚಿಸಲಾಗಿತ್ತು.

ನೇಮಕಾತಿ ನಡೆದು ಬರೊಬ್ಬರಿ 5 ತಿಂಗಳು ಕಳೆದಿದ್ದರೂ ಇನ್ನೂ ನೂತನ ಸದಸ್ಯರ ಸಭೆ ನಡೆಯದೆ ಇರುವುದರಿಂದ ವ್ಯವಸ್ಥಾಪನ ಸಮಿತಿಗೆ ಹೊಸ ಅಧ್ಯಕ್ಷರ ಆಯ್ಕೆ ನಡೆದಿಲ್ಲ. ಪೂರ್ಣ ಪ್ರಮಾಣದ ಸಮಿತಿಗೆ ಆದೇಶವಾಗಿದ್ದರೂ ಅಧ್ಯಕ್ಷರ ಆಯ್ಕೆ ನಡೆಯದೆ ಇರುವುದರಿಂದ ಕುಂದಾಪುರದ ಉಪ ವಿಭಾಗಾಧಿಕಾರಿಯವರೇ ದೇವಸ್ಥಾನದ ಆಡಳಿತಾಧಿಕಾರಿ ಆಗಿ ಮುಂದುವರಿಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT