ಭಾನುವಾರ, ನವೆಂಬರ್ 27, 2022
26 °C

ಮೀನುಗಾರಿಕಾ ಜೆಟ್ಟಿ ಕುಸಿತ: ನಿಷ್ಪಕ್ಷಪಾತ ತನಿಖೆಗೆ ಗೋಪಾಲ ಪೂಜಾರಿ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಂದಾಪುರ: ‘ಮೀನುಗಾರಿಕಾ ಜೆಟ್ಟಿ ಕಾಮಗಾರಿಯಲ್ಲಿ ಸಾಕಷ್ಟು ಲೋಪಗಳು ಉಂಟಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಯಾರಿಂದ, ಎಲ್ಲಿ, ಏನೆಲ್ಲಾ ತಪ್ಪುಗಳಾಗಿವೆ ಎನ್ನುವುದನ್ನು ತಿಳಿದಕೊಳ್ಳಲು ಸರ್ಕಾರ ಕೂಡಲೇ ನಿಷ್ಪಕ್ಷಪಾತ ತನಿಖೆ ನಡೆಸಬೇಕು’ ಎಂದು ಬೈಂದೂರಿನ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಒತ್ತಾಯಿಸಿದರು.

 ಗಂಗೊಳ್ಳಿ ಜೆಟ್ಟಿ ಕುಸಿತ ಸ್ಥಳಕ್ಕೆ ಗುರುವಾರ ಭೇಟಿ ನೀಡಿ ಹಾನಿಯ ಪರಿಶೀಲನೆ ನಡೆಸಿ, ಮೀನುಗಾರರ ಸಮಸ್ಯೆಗಳನ್ನು ಆಲಿಸಿದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

‘ಜೆಟ್ಟಿ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ ಎಂಬ ಆರೋಪವಿದೆ. ಅದು ಕಳಪೆಯಾಗಲು ಕಾರಣ ಏನು? ಈ ಕಾಮಗಾರಿ ನಡೆಸಲು ಒಪ್ಪಿಗೆ ನೀಡಿರುವ ತಾಂತ್ರಿಕ ಪರಿಣತರು ಯಾರು? ಅವರ ಅರ್ಹತೆ ಏನು? ಎನ್ನುವ ಎಲ್ಲ ಅಂಶಗಳು ಬಹಿರಂಗವಾಗಬೇಕಾದರೇ ಪೂರ್ತಿ ಪ್ರಕರಣವನ್ನು ಯಾವುದಾದರೂ ಸಂಸ್ಥೆಯಿಂದ ಪೂರ್ಣ ಪ್ರಮಾಣದ ತನಿಖೆ ನಡೆಯಬೇಕು. ಕಾಮಗಾರಿ ಇನ್ನೂ ಸಂಪೂರ್ಣಗೊಳ್ಳುವ ಮೊದಲೇ ₹10 ಕೋಟಿ ವರೆಗೆ ಹಣ ಬಿಡುಗಡೆ ಮಾಡಲಾಗಿದೆ ಎನ್ನುವ ದೂರು ಇದೆ. ಹಣವನ್ನು ಬಿಡುಗಡೆ ಮಾಡಲು ಸೂಚನೆ ನೀಡಿದವರು ಯಾರು? ಯಾಕಾಗಿ ಕಾಮಗಾರಿಯ ಕಳಪೆಯ ಕುರಿತು ಸಾರ್ವಜನಿಕ ಆರೋಪಗಳಿರುವಾಗ ಯೋಜನೆಯ ಬಹುಭಾಗ ಅನುದಾನವನ್ನು ಬಿಡುಗಡೆ ಮಾಡಲಾಗಿದೆ ಎನ್ನುವ ಅಂಶಗಳು ಬಹಿರಂಗವಾಗಬೇಕು. ಕಾಮಗಾರಿಯ ಕುರಿತು ಸರ್ಕಾರ ಹಾಗೂ ಅಧಿಕಾರಿಗಳ ಮುತುವರ್ಜಿ ಇಲ್ಲದ ಕಾರಣ ಈ ಎಲ್ಲ ಸಮಸ್ಯೆ ಉಂಟಾಗಿದೆ’ ಎಂದು ಅವರು ದೂರಿದ್ದಾರೆ.

ಯೋಜನೆಯ ವಿನ್ಯಾಸ ರೂಪಿಸುವಾಗಲೂ ತರಾತುರಿ ನಿರ್ಧಾರವನ್ನು ಮಾಡಲಾಗಿದೆ. ಸಾಮಾನ್ಯವಾಗಿ ಇಂತಹ ಕಾಮಗಾರಿಗಳ ವಿನ್ಯಾಸವನ್ನು ಪುಣೆಯ ಸಿಡಬ್ಲ್ಯುಪಿಆರ್‌ಎಸ್ ಸಂಸ್ಥೆಗೆ ವಹಿಸಲಾಗುತ್ತದೆ. ಆದರೆ, ರಾಜ್ಯ ಸರ್ಕಾರ ಕಮಿಷನ್ ಆಸೆಗಾಗಿ ಬೆಂಗಳೂರಿನ ಕಂಪನಿಗೆ ವಿನ್ಯಾಸದ ಕೆಲಸ ವಹಿಸಿದೆ. ಖಾಸಗಿಯವರಿಂದ ನೀಲ ನಕಾಶೆ ತಯಾರಿಸಿ ಮೀನುಗಾರಿಕಾ ಇಲಾಖೆಯಿಂದ ಅನುಮೋದನೆ ಪಡೆಯಲಾಗಿದೆ ಎಂದು ಆರೋಪಿಸಿದರು.

ಶೇ 40 ಕಮಿಷನ್ ವಾಸನೆ: ‘ಬಿಜೆಪಿ ಸರ್ಕಾರದ ಮೇಲೆ ಈಗಾಗಲೇ 40 ಪರ್ಸೆಂಟ್ ಕಮಿಷನ್ ಆರೋಪವಿದ್ದು, ಇದೀಗ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿಯೂ ಕಮಿಷನ್ ವಾಸನೆ ಹೊಡೆಯುತ್ತಿದೆ. ಜನರ ಹಣ ಸಮುದ್ರ ಪಾಲಾಗಿದೆ ಎಂಬ ಜನರ ಆರೋಪಗಳಿಗೆ, ಇಲ್ಲಿನ ಕುಸಿದ ದೃಶ್ಯಗಳೇ ಕಣ್ಣೆದುರು ಕಾಣುತ್ತಿದೆ. ಜೆಟ್ಟಿ ಕುಸಿತದಿಂದ ಈ ಭಾಗದ ಮೀನುಗಾರರಿಗೆ ಮೀನುಗಾರಿಕೆ ನಡೆಸಲು ಸಾಕಷ್ಟು ತೊಂದರೆಯುಂಟಾಗುತ್ತಿದ್ದು, ಸರ್ಕಾರ ಕೂಡಲೇ ಮೀನುಗಾರರ ಸಮಸ್ಯೆಗಳಿಗೆ ಸ್ಪಂದಿಸಬೇಕು’ ಎಂದು ಆಗ್ರಹಿಸಿದ ಅವರು ಪ್ರಕರಣದ ಕುರಿತು ವಿಪಕ್ಷ ನಾಯಕ ಸಿದ್ದರಾಮಯ್ಯ ಮಾಹಿತಿ ಕೇಳಿದ್ದು, ಅವರಿಗೆ ಮಾಹಿತಿ ನೀಡುವುದಾಗಿ ತಿಳಿಸಿದರು.

ಸ್ಥಳೀಯ ಮುಖಂಡರಾದ ಮಂಜುಳಾ ದೇವಾಡಿಗ, ದೇವು ಖಾರ್ವಿ, ಪ್ರದೀಪ್ ಖಾರ್ವಿ, ದುರ್ಗರಾಜ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು