ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗಂಗೊಳ್ಳಿ ಬಂದರಿಗೆ ಸರ್ಕಾರದ ಅವಕೃಪೆ’

ಮೀನುಗಾರಿಕಾ ಬಂದರಿನ ಅವ್ಯವಸ್ಥೆ ಸರಿಪಡಿಸುವಂತೆ ಮೀನುಗಾರರ ಮನವಿ
Last Updated 1 ಅಕ್ಟೋಬರ್ 2022, 4:06 IST
ಅಕ್ಷರ ಗಾತ್ರ

ಕುಂದಾಪುರ: ‘ಗಂಗೊಳ್ಳಿಯ ಮೀನುಗಾರಿಕಾ ಬಂದರಿನಲ್ಲಿ ನಡೆಯುತ್ತಿರುವ ಕಾಮಗಾರಿಗಳಿಂದಾಗಿ ಇಲ್ಲಿ ಬೋಟ್ ಹಾಗೂ ದೋಣಿಗಳನ್ನು ನಿಲ್ಲಿಸಲು ಸಾಧ್ಯವಾಗುತ್ತಿಲ್ಲ. ಮೀನುಗಳನ್ನು ಇಳಿಸಲು ಸರಿಯಾದ ಜಾಗದ ವ್ಯವಸ್ಥೆ ಇಲ್ಲ. ಈ ಕಾರಣದಿಂದಾಗಿ ನಮ್ಮ ಬೋಟ್ ಹಾಗೂ ದೋಣಿಗಳನ್ನು ನೆರೆಯ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ, ತದಡಿ ಹಾಗೂ ಮಲ್ಪೆಯಲ್ಲಿ ನಿಲ್ಲಿಸಿ ಬರುವಂತಹ ಪರಿಸ್ಥಿತಿ ಇದೆ’ ಎನ್ನುವುದು ಗಂಗೊಳ್ಳಿಯ ಮೀನುಗಾರರ ಅಳಲು.

ಬುಧವಾರ ನಡೆದ ಜೆಟ್ಟಿ ಕುಸಿತ ಸುದ್ದಿ ಸಂಚಲನ ಸೃಷ್ಟಿಸುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಮೀನುಗಾರಿಕಾ ಸಚಿವ ಎಸ್.ಅಂಗಾರ ಅವರು, ಹಾನಿಯ ಪರಿಶೀಲನೆ ನಡೆಸಿದ ಬಳಿಕ ಗಂಗೊಳ್ಳಿಯ ಮೀನುಗಾರಿಕಾ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಉಪಸ್ಥಿತಿಯಲ್ಲಿ ಗುರುವಾರ ಮೀನುಗಾರ ಸಂಘಟನೆಯ ಮುಖಂಡರೊಂದಿಗೆ ಚರ್ಚಿಸಿದರು.

ರಾಜ್ಯದ ಬೇರೆ ಬೇರೆ ಭಾಗಗಳ ಮೀನುಗಾರಿಕಾ ಬಂದರುಗಳು ನಿರೀಕ್ಷೆಗೆ ಮೀರಿ ಅಭಿವೃದ್ಧಿಯಾಗುತ್ತಿದ್ದರೂ, 20 ವರ್ಷಗಳಿಂದ ಗಂಗೊಳ್ಳಿ ಬಂದರು ಸರ್ಕಾರದ ಅವಕೃಪೆಗೆ ಒಳಗಾಗಲು ಕಾರಣವೇನು? ಬೇರೆ ಕಡೆಗಳಲ್ಲಿ ಮೂರನೇ ಹಂತದ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದರೂ, ಇಲ್ಲಿ ಇನ್ನೂ ಮೊದಲನೇ ಹಂತದ ಕಾಮಗಾರಿಗಳೇ ವ್ಯವಸ್ಥಿತವಾಗಿ ಮುಗಿದಿಲ್ಲ. ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಸ್ಥಳೀಯ ಮೀನುಗಾರ ಸಂಘಟನೆಯೊಂದಿಗೆ ಸಮನ್ವಯ ಇಟ್ಟುಕೊಂಡಿಲ್ಲ. ಕಾಮಗಾರಿಯ ಅವ್ಯವಸ್ಥೆಯ ಕುರಿತು ಗಮನಕ್ಕೆ ತಂದರೂ, ಯಾವುದೇ ಪರಿಹಾರ ಕ್ರಮ ತೆಗೆದುಕೊಳ್ಳುತ್ತಿಲ್ಲ. ಅಂದಾಜು ₹ 12.7 ಕೋಟಿ ವೆಚ್ಚದಲ್ಲಿ 370 ಮೀ ಉದ್ದದ ಕಾಮಗಾರಿಯ ಯೋಜನೆ ರೂಪಿಸಲಾಗಿದೆ. ಇಲ್ಲಿ ತೋರಿಕೆಗೆ 100-125 ಮೀ. ದೂರದ ಕಾಮಗಾರಿ ಕಾಣಿಸುತ್ತಿದ್ದರೂ 200 ಮೀ. ಉದ್ದದ ಕಾಮಗಾರಿ ಆಗಿದೆ ಎಂದು ಮಾಹಿತಿ ನೀಡುತ್ತಿದ್ದಾರೆ. ಯೋಜನೆಯ ಒಟ್ಟು ವೆಚ್ಚದ ಶೇ 70ರಷ್ಟು ಹಣವನ್ನು ಪಡೆದುಕೊಂಡಿದ್ದಾರೆ. ಶೇ 50 ರಷ್ಟು ಕಾಮಗಾರಿಗಳೇ ಪೂರ್ತಿಯಾಗದೆ ಇರುವಾಗ ಕೆಲಸಕ್ಕಿಂತ ಹೆಚ್ಚು ಬಿಲ್ಲು ಪಾವತಿ ಹೇಗೆ ಸಾಧ್ಯ ಎಂದು ಮೀನುಗಾರರು ಪ್ರಶ್ನಿಸಿದರು.

ದೇಶದ ಹೆಚ್ಚಿನ ಬಂದರು ಅಭಿವೃದ್ಧಿ ಕಾಮಗಾರಿಯ ವಿನ್ಯಾಸವನ್ನು ನೀಡುವ ಪುಣೆಯ ಸಿಡಬ್ಲ್ಯುಪಿಆರ್‌ಎಸ್ ಸಂಸ್ಥೆಯ ಬದಲು, ಈ ಉದ್ದೇಶಿತ ಕಾಮಗಾರಿಗೆ ಬೆಂಗಳೂರಿನ ಖಾಸಗಿ ಸಂಸ್ಥೆಯವರಿಂದ ಜೆಟ್ಟಿ ಪುನರ್ ನಿರ್ಮಾಣ ಕಾಮಗಾರಿ ವಿನ್ಯಾಸ ಮಾಡಿಸುವ ಹುನ್ನಾರ ಯಾಕೆ ನಡೆಯಿತು ಎಂದು ಪುನರ್ ಪ್ರಶ್ನಿಸಿದರು.

ಕೆಲ ಸಮಯದ ಹಿಂದೆ ಜೆಟ್ಟಿಯ ಕಾಮಗಾರಿ ನಡೆಯುವ ಸ್ಥಳದಲ್ಲಿ ಮೊದಲ ಬಾರಿಗೆ ಕುಸಿತ ಉಂಟಾಗಿತ್ತು ಈ ವಿಚಾರವನ್ನು ಇಲಾಖೆಯ ಎಂಜಿನಿಯರ್‌ ಗಮನಕ್ಕೆ 4-5 ಬಾರಿ ತಂದಿದ್ದರೂ, ಅವರು ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಈ ನಿರ್ಲಕ್ಷ್ಯದ ಪರಿಣಾಮವೇ ಬುಧವಾರ ಸಂಜೆ ಎರಡನೇ ಬಾರಿ ಕುಸಿತವಾಗಿದೆ. ಅಸರ್ಮಪಕ ಕಾಮಗಾರಿಗಳಿಂದ ಇಲ್ಲಿನ ಮೀನುಗಾರರು ಹಾಗೂ ಕಾರ್ಮಿಕರು ಭಯದ ವಾತಾವರಣದಲ್ಲಿ ಇದ್ದಾರೆ. ಇದೀಗ ನಿರ್ಮಾಣವಾಗಿರುವ ಹೊಸ ಡಾಕ್‌ನಲ್ಲಿ ನಿಂತು ಕೆಲಸ ಮಾಡಬಹುದಾ? ಬೋಟ್‌ ಹಾಗೂ ದೋಣಿಗಳು ಬಂದಾಗ ಅಲೆಯ ರಭಸದಲ್ಲಿ ಜೆಟ್ಟಿಯ ಗೋಡೆಗೆ ತಾಗಿದರೆ ಮತ್ತೆ ಕುಸಿತದ ಅಪಾಯವಾಗಬಹುದೇ ಎನ್ನುವ ಗೊಂದಲದ ಸ್ಥಿತಿ ಇದೆ. ಈ ಅವೈಜ್ಞಾನಿಕ ಕಾಮಗಾರಿಯ ತಪ್ಪಿನ ಹೊಣೆ ಯಾರದ್ದು ಎಂದು ಖಾರವಾಗಿ ಪ್ರಶ್ನಿಸಿದ ಮೀನುಗಾರರು, ಈ ಎಲ್ಲಾ ಸಂಗತಿಗಳು ಬಯಲಾಗಬೇಕಾದರೆಪಾರದರ್ಶಕ ತನಿಖೆ ನಡೆಯಬೇಕು ಎಂದರು.

ಇಲ್ಲಿ ಬೋಟು ನಿಲ್ಲಿಸಲು ಸ್ಥಳಾವಕಾಶದ ಕೊರತೆಯಿರುವುದರಿಂದ ಬಂದರು ಇಲಾಖೆ ಅಧೀನದಲ್ಲಿರುವ ಮ್ಯಾಂಗನೀಸ್ ವಾರ್ಫ್ ಕಿರು ಬಂದರನ್ನು, ಮೀನುಗಾರಿಕೆ ಇಲಾಖೆಗೆ ಹಸ್ತಾಂತರಿಸಿದರೆ, ಮೀನುಗಾರರಿಗೆ ಪ್ರಯೋಜನವಾಗಲಿದೆ ಎಂದು ಮೀನುಗಾರರು ಸಚಿವರಲ್ಲಿ ಮನವಿ ಮಾಡಿಕೊಂಡರು. ಇದಕ್ಕೆ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿಯವರು ಸಹಮತ ವ್ಯಕ್ತಪಡಿಸಿದರಲ್ಲದೆ, ತ್ವರಿತವಾಗಿ ತೀರ್ಮಾನ ಕೈಗೊಳ್ಳುವಂತೆ ಸಚಿವರನ್ನು ಕೋರಿದರು. ಈ ಬಗ್ಗೆ ಕ್ರಮವಹಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ಮೀನುಗಾರರ ಪ್ರಶ್ನೆಗಳನ್ನು ತಾಳ್ಮೆಯಿಂದ ಆಲಿಸಿದ ಸಚಿವ ಎಸ್.ಅಂಗಾರ, ‘ಇಲ್ಲಿನ ಎಲ್ಲ ಅವ್ಯವಸ್ಥೆಗಳ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಮೀನುಗಾರರಿಗೆ ಅಗತ್ಯವಾಗಿರುವ ವ್ಯವಸ್ಥೆಗಳನ್ನು ಕಲ್ಪಿಸಲು ಶೀಘ್ರದಲ್ಲಿ ಅಧಿಕಾರಿಗಳ ಸಭೆ ಕರೆದು ಸೂಚನೆ ನೀಡುತ್ತೇನೆ. ಮೀನುಗಾರರ ಬೇಡಿಕೆಯಂತೆ ಮುಂದಿನ ಜನವರಿಯೊಳಗೆ ಕಾಮಗಾರಿ ಪೂರ್ಣಗೊಳಿಸಲು ಆದ್ಯತೆ ನೀಡುತ್ತೇವೆ’ ಎಂದರು. ಮುಖಂಡರಾದ ರಮೇಶ್ ಕುಂದರ್, ರಾಮಪ್ಪ ಖಾರ್ವಿ, ಯಶವಂತ್ ಖಾರ್ವಿ, ಸದಾಶಿವ ಖಾರ್ವಿ, ಬಸವ ಖಾರ್ವಿ, ಜನಾರ್ದನ ಖಾರ್ವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT