ಮಂಗಳವಾರ, ಮಾರ್ಚ್ 2, 2021
23 °C
ವಿದೇಶಗಳಲ್ಲಿ ಉನ್ನತ ಹುದ್ದೆ ಅಲಂಕರಿಸಿರುವ ಜಿಲ್ಲೆಯ ಮಹಿಳೆಯರು; ಡಿಡಿಪಿಐ ಎನ್‌.ಎಚ್‌.ನಾಗೂರ

ಕರಾವಳಿಯಲ್ಲಿ ‌ಹೆಣ್ಣು ಮಕ್ಕಳೇ ಸ್ಟ್ರಾಂಗು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆಯನ್ನು ದೇಶದೆಲ್ಲೆಡೆ ಆಚರಿಸಲಾಗುತ್ತಿದ್ದರೂ ಕಾರ್ಯಕ್ರಮದ ಹಿಂದಿನ ಆಶಯಗಳು ಇನ್ನೂ ಪೂರ್ಣ ಪ್ರಮಾಣದಲ್ಲಿ ಈಡೇರಿಲ್ಲ ಎಂಬ ನೋವಿದೆ ಎಂದು ಡಿಡಿಪಿಐ ಎನ್‌.ಎಚ್‌.ನಾಗೂರ ಅಭಿಪ್ರಾಯಪಟ್ಟರು.

ನಗರದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಭಾನುವಾರ ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆಯಲ್ಲಿ ಮಾತನಾಡಿದ ಅವರು, 2008ರಿಂದ ಹೆಣ್ಣುಮಕ್ಕಳ ದಿನಾಚರಣೆ ಆಚರಿಸಲಾಗುತ್ತಿದೆ. ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ಶೋಷಣೆ ತಡೆಯುವುದು, ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ, ಹೆಣ್ಣುಮಕ್ಕಳ ಕಳ್ಳ ಸಾಗಣೆಯಂತಹ ಕ್ರೌರ್ಯಕ್ಕೆ ಕಡಿವಾಣ ಬಿದ್ದಾಗ ಹೆಣ್ಣುಮಕ್ಕಳ ದಿನ ಆಚರಣೆಗೆ ನಿಜವಾದ ಅರ್ಥ ಬರಲಿದೆ ಎಂದರು.

ಹೆಣ್ಣುಮಕ್ಕಳ ರಕ್ಷಣೆಗೆ ಕಾನೂನಿನಡಿ ಇರುವ ಸೌಲಭ್ಯಗಳನ್ನು ತಿಳಿಸುವಂತಹ ಕೆಲಸ ಆಗಬೇಕು. ಸಮಾಜ ಸ್ತ್ರೀಯರನ್ನು ಗೌರವಿಸುವ ಗುಣ ಬೆಳೆಸಿಕೊಳ್ಳಬೇಕು. ಮಹಿಳಾ ಶಿಕ್ಷಣಕ್ಕೆ ಹೆಚ್ಚು ಒತ್ತು ಸಿಗಬೇಕು ಎಂದರು.

ಶಿಕ್ಷಣ ಮಾತ್ರವಲ್ಲ, ಕ್ರೀಡೆ, ತಂತ್ರಜ್ಞಾನದಲ್ಲೂ ಹೆಣ್ಣು ಮಕ್ಕಳು ಸಾಧನೆ ಮಾಡಿದ್ದಾರೆ. ಕರಾವಳಿಯ ಹೆಣ್ಣುಮಕ್ಕಳು ವಿದೇಶಗಳಲ್ಲೂ ದೊಡ್ಡ ಹುದ್ದೆಯಲ್ಲಿರುವುದು ಹೆಮ್ಮೆಯ ವಿಚಾರ. ಇದರ ನಡುವೆ ಈಚೆಗೆ ಲಿಂಗಾನುಪಾತದಲ್ಲಿ ಕುಸಿತ ಕಾಣುತ್ತಿರುವುದು ಆಘಾತಕಾರಿ ವಿಚಾರ. ಗಂಡು ಹಾಗೂ ಹೆಣ್ಣಿನ ಲಿಂಗಾನುಪಾತ ಸಮನಾಗಿರಬೇಕು ಎಂದರು.

ಹೆಣ್ಣುಮಕ್ಕಳಿಗೆ ಶಿಕ್ಷಣದ ಜತೆಗೆ, ಮಾನಸಿಕ ಸ್ಥೈರ್ಯ ಹೆಚ್ಚಿಸುವ ಕಾರ್ಯವಾಗೇಬೇಕು. ಧೈರ್ಯ, ಸಾಹಸಯುತ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಪ್ರೇರೇಪಿಸಬೇಕು. ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯಕ್ಕೆ ಕಾನೂನಿನಡಿ ಕಠಿಣ ಶಿಕ್ಷೆಯಾಗಬೇಕು ಎಂದು ಅಭಿಪ್ರಾಯಪಟ್ಟರು.

ದಕ್ಷಿಣ ಕನ್ನಡ ಹಾಗೂ ಉಡುಪಿ ಸಹಕಾರ ಮೀನುಮಾರಾಟ ಫೆಡರೇಷನ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ ಕಾರ್ಯಕ್ರಮ ಉದ್ಘಾಟಿಸಿದರು.

ಉಡುಪಿ ಬೋರ್ಡ್ ಹೈಸ್ಕೂಲ್‌ನಲ್ಲೂ ರಾಷ್ಟ್ರೀಯ ಹೆಣ್ಣುಮಕ್ಕಳ ದಿನ ಆಚರಿಸಲಾಯಿತು. ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಮಂಜುಳಾ, ಶಾಲೆಯ ಮುಖ್ಯ ಶಿಕ್ಷಕ ಸುರೇಶ್ ಭಟ್ ಉಪಸ್ಥಿತರಿದ್ದರು.

ಸಂಗೀತ, ನೃತ್ಯ, ಭಾಷಣ, ಆಟೋಟ ಸ್ಪರ್ಧೆಗಳು ನಡೆದವು. ಶಾಂತಿ ಪೈ ಕಾರ್ಯಕ್ರಮ ನಿರೂಪಿಸಿದರು. ಸತ್ಯಶಂಕರ್ ರಾವ್ ವಂದಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು