‘ಮಕ್ಕಳಿಗೆ ಸಮರ್ಪಕ ಪೌಷ್ಟಿಕಾಂಶ ಆಹಾರ ನೀಡಿ’

7
ಹಾಲಿನ ಗುಣಮಟ್ಟ ಪರಿಶೀಲನೆ, ಶೌಚಾಲಯ ಶುಚಿಯಾಗಿಟ್ಟುಕೊಳ್ಳಲು ಸಚಿವೆ ಜಯಮಲಾ ಸೂಚನೆ

‘ಮಕ್ಕಳಿಗೆ ಸಮರ್ಪಕ ಪೌಷ್ಟಿಕಾಂಶ ಆಹಾರ ನೀಡಿ’

Published:
Updated:
Deccan Herald

ಉಡುಪಿ: ಎರಡು ದಿನಗಳಿಂದ ಜಿಲ್ಲಾ ಪ್ರವಾಸದಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲಾ ಗುರುವಾರ ಮಹಿಳಾ ನಿಲಯ ಹಾಗೂ ಅಂಗನವಾಡಿ ಕೇಂದ್ರಗಳಿಗೆ ಭೇಟಿನೀಡಿ ಅಲ್ಲಿನ ವ್ಯವಸ್ಥೆ ಪರಿಶೀಲಿಸಿದರು.

ಬೆಳಿಗ್ಗೆ ಕಡಿಯಾಳಿಯಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ಭೇಟಿನೀಡಿ ಅಲ್ಲಿನ ಮಕ್ಕಳ ಜತೆ ಆತ್ಮೀಯವಾಗಿ ಬೆರೆತರು. ಸರ್ಕಾರದಿಂದ ಪೂರೈಕೆಯಾಗುತ್ತಿರುವ ಪೌಷ್ಟಿಕ ಆಹಾರ ಪದಾರ್ಥಗಳು ಸಮರ್ಪಕವಾಗಿ ಮಕ್ಕಳಿಗೆ ತಲುಪುತ್ತಿವೆಯೇ ಎಂದು ಖಾತ್ರಿಪಡಿಸಿಕೊಂಡರು.

ಖುದ್ದು ಮೊಳಕೆ ಕಟ್ಟಿದ ಹೆಸರುಕಾಳು ಹಾಗೂ ಕೆನೆಭರಿತ ಹಾಲು ಸೇವಿಸಿ ಆಹಾರ ಪದಾರ್ಥಗಳ ಗುಣಮಟ್ಟವನ್ನು ಪರಿಶೀಲಿಸಿದರು. ಅಂಗನವಾಡಿ ಕೇಂದ್ರಕ್ಕೆ ಇಂಟರ್‌ಲಾಕ್‌ ವ್ಯವಸ್ಥೆ ಮಾಡಿಸುವಂತೆ, ಶೌಚಾಲಯ ಸ್ವಚ್ಛವಾಗಿಟ್ಟುಕೊಳ್ಳುವಂತೆ ಹಾಗೂ ಅಂಗನವಾಡಿ ಎದುರಿನ ಜಾಗವನ್ನು ವಿಸ್ತರಣೆಮಾಡಿ, ಇತರ ಚಟುವಟಿಕೆಗಳಿಗೆ ಬಳಸಿಕೊಳ್ಳುವ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಕ್ಕಳೊಂದಿಗೆ ಕೆಲಹೊತ್ತು ಆತ್ಮೀಯವಾಗಿ ಕಾಲ ಕಳೆದ ಸಚಿವರು, ಕಲಿಕೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ಸರ್ಕಾರದಿಂದ ಪೂರೈಕೆಯಾಗುವ ಆಹಾರ ಪದಾರ್ಥಗಳು ಮಕ್ಕಳಿಗೆ ತಲುಪುತ್ತಿವೆಯೇ ಎಂದು ವಿಚಾರಿಸಿದರು.

ಬಳಿಕ ನಿಟ್ಟೂರಿನ ಕೊಡಂಕೂರು ಅಂಗನವಾಡಿ ಕೇಂದ್ರಕ್ಕೆ ಭೇಟಿನೀಡಿ, ಮಕ್ಕಳಿಗೆ ಹೊರಾಂಗಣ ಆಟದ ವ್ಯವಸ್ಥೆ, ನೀರಿನ ಶೇಖರಣೆಗೆ ಸಿಂಟೆಕ್ಸ್‌ ಟ್ಯಾಂಕ್ ಇಲ್ಲದಿರುವುದನ್ನು ಮನಗಂಡು, ಅಗತ್ಯ ಸೌಲಭ್ಯಗಳನ್ನು ಒದಗಿಸುವಂತೆ ಅಧಿಕಾರಿಗೆ ಸೂಚನೆ ನೀಡಿದರು. 

ಜತೆಗೆ ಸ್ಥಳೀಯರಿಂದ ಅಂಗನವಾಡಿ ಕೇಂದ್ರದ ಚಟುವಟಿಕೆಗಳ ಕುರಿತು ಮಾಹಿತಿ ಕಲೆಹಾಕಿದರು. ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಆಹಾರ ಪದಾರ್ಥಗಳು ಸಿಗುತ್ತಿವೆಯೇ ಎಂಬ ಬಗ್ಗೆ ವಿಚಾರಿಸಿದರು.

ಬಳಿಕ, ರಾಜ್ಯ ಮಹಿಳಾ ನಿಲಯಕ್ಕೆ ಭೇಟಿನೀಡಿದ ಸಚಿವರು, ಅಲ್ಲಿನ ವ್ಯವಸ್ಥೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ನಂತರ ನಿಲಯದಲ್ಲಿದ್ದ 61 ಮಂದಿಯನ್ನು ಮಾತನಾಡಿಸಿ ಅವರ ಕೌಟುಂಬಿಕ ಹಿನ್ನೆಲೆ, ವೈಯಕ್ತಿಕ ಸಮಸ್ಯೆಗಳನ್ನು ಆಲಿಸಿದರು. ಎಲ್ಲರ ಜತೆಯೂ ಮುಕ್ತವಾಗಿ ಮಾತನಾಡಿ, ಧೈರ್ಯ ತುಂಬಿದರು.

ಬಳಿಕ ಹುಣಸೆಹಣ್ಣು ಸಂರಕ್ಷಣಾ ಘಟಕ, ಅಗರಬತ್ತಿ ತಯಾರಿಕಾ ಘಟಕಕ್ಕೆ ಭೇಟಿನೀಡಿ ಕಾರ್ಯವೈಖರಿಯನ್ನು ವೀಕ್ಷಿಸಿದರು. ಮಹಿಳಾ ನಿಲಯದ ನಿವಾಸಿಗಳನ್ನು ತೋಟಗಾರಿಕೆ ಚಟುವಟಿಕೆಗಳಿಗೆ ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳುವಂತೆ, ಎಲ್ಲರಿಗೂ ಗ್ರಂಥಾಲಯ ಸೌಲಭ್ಯವನ್ನು ನೀಡುವಂತೆ, ಹೊರಾಂಗಣ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುವಂತೆ ವಾರ್ಡನ್‌ಗೆ ಸೂಚನೆ ನೀಡಿದರು.

ಮಹಿಳೆಯರ ಜತೆ ಪ್ರೀತಿಯಿಂದ ನಡೆದುಕೊಳ್ಳಬೇಕು. ನಿವಾಸಿಗಳಿಗೆ ಅನುಗುಣವಾಗಿ ಅಕ್ಕಿ ಸರಬರಾಜಾಗುವಂತೆ ಕ್ರಮತೆಗೆದುಕೊಳ್ಳಲು ಆದೇಶಿಸಿದರು. ಈ ಸಂದರ್ಭ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಗ್ರೆಸಿ ಗೋನ್ಸಾಲ್ವಿಸ್‌ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !