ಗುರುವಾರ , ನವೆಂಬರ್ 21, 2019
21 °C
ಮೊದಲ ಹಂತದಲ್ಲಿ ಭೂಮಿ ಕಳೆದುಕೊಂಡವರಿಗೆ ಸಿಕ್ಕಿಲ್ಲ ಪರಿಹಾರ: ಆರೋಪ

ಸಂತ್ರಸ್ತರಿಗೆ ನ್ಯಾಯಯುತ ಪರಿಹಾರ ನೀಡಿ

Published:
Updated:
Prajavani

ಉಡುಪಿ: ‘ಪಾದೂರು ಕಚ್ಚಾತೈಲ ಸಂಗ್ರಹಣಾ ಘಟಕಕ್ಕೆ ಮೊದಲ ಹಂತದಲ್ಲಿ ಭೂಮಿ ಹಾಗೂ ಮನೆ ಕಳೆದುಕೊಂಡವರಿಗೆ ಪೂರ್ಣ ಪ್ರಮಾಣದ ಪರಿಹಾರ ಸಿಕ್ಕಿಲ್ಲ. ಹೀಗಿರುವಾಗ 2ನೇ ಹಂತದ ಕಾಮಗಾರಿಗೆ ಸಿದ್ಧತೆ ನಡೆಯುತ್ತಿದೆ. ಸಂತ್ರಸ್ತರಿಗೆ ಮೊದಲು ನ್ಯಾಯಯುತ ಪರಿಹಾರ ಕೊಟ್ಟು ನಂತರ ಕಾಮಗಾರಿ ಆರಂಭಿಸಲಿ’ ಎಂದು ಮಾಸ್ ಇಂಡಿಯಾ ಎನ್‌ಜಿಒ ಅಧ್ಯಕ್ಷ ಜಿ.ಎ. ಕೋಟ್ಯಾರ್ ಒತ್ತಾಯಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮೊದಲ ಹಂತದ ಯೋಜನೆಗೆ 120 ಕುಟುಂಬಗಳು ಭೂಮಿ ಕಳೆದುಕೊಂಡಿವೆ. ಕಲ್ಲುಬಂಡೆ ಸ್ಫೋಟದಿಂದ 68 ಮನೆಗಳಿಗೆ ಹಾನಿಯಾಗಿದೆ. ಇವರಿಗೆಲ್ಲ ನ್ಯಾಯಯುತ ಪರಿಹಾರ ವಿತರಿಸಬೇಕು. ಸಂತ್ರಸ್ತರ ಕುಟುಂಬದ ಸದಸ್ಯರಿಗೆ ಐಎಸ್‌ಪಿಆರ್‌ಎಲ್‌ ಕಂಪನಿಯಲ್ಲಿ ಉದ್ಯೋಗ ನೀಡಬೇಕು’ ಎಂದು ಆಗ್ರಹಿಸಿದರು.

‘ಇದೀಗ 2ನೇ ಹಂತದ ಕಚ್ಚಾತೈಲ ಸಂಗ್ರಹಣಾ ಘಟಕದ ಕಾಮಗಾರಿಗೆ ಸಿದ್ಧತೆಗಳು ನಡೆದಿದ್ದು, 210 ಎಕರೆ ಪ್ರದೇಶವನ್ನು ಕೆಐಡಿಬಿ ಗುರುತಿಸಿದೆ. ಕಾಮಗಾರಿ ಆರಂಭಕ್ಕೂ ಮುನ್ನ ಸ್ಥಳೀಯರ ಒಪ್ಪಿಗೆ ಪಡೆಯಬೇಕು. ಭೂಮಿ, ಮನೆ ಕಳೆದುಕೊಳ್ಳುವವರಿಗೆ ಮಾರುಕಟ್ಟೆ ದರಕ್ಕಿಂತ ನಾಲ್ಕು ಪಟ್ಟು ಹೆಚ್ಚು ಪರಿಹಾರ ನೀಡಬೇಕು. ಮಧ್ಯವರ್ತಿಗಳಿಗೆ ಪರಿಹಾರದ ಹಣ ನೀಡದೆ ನೇರವಾಗಿ ಸಂತ್ರಸ್ತರ ಬ್ಯಾಂಕ್‌ ಖಾತೆಗಳಿಗೆ ವರ್ಗಾವಣೆ ಮಾಡಬೇಕು’ ಎಂದು ಕೋಟ್ಯಾರ್ ಒತ್ತಾಯಿಸಿದರು.

‘ಭೂಮಿಯ 8 ಅಡಿ ಆಳದಲ್ಲಿ ಪೈಪ್‌ಲೈನ್ ಮಾರ್ಗ ಸಾಗಬೇಕಿರುವುದರಿಂದ ಸಿಡಿಮದ್ದುಗಳನ್ನು ಬಳಸಿ ಕಲ್ಲುಬಂಡೆಗಳನ್ನು ಸಿಡಿಸಬೇಕಾಗುತ್ತದೆ. ಇದರಿಂದ ಹಲವು ಮನೆಗಳಿಗೆ ಹಾನಿ ಸಂಭವಿಸುವ ಸಾಧ್ಯತೆಗಳಿದ್ದು, ಸೂಕ್ತ ಪರಿಹಾರ ನೀಡಬೇಕು. ಇಲ್ಲವಾದರೆ ಹೋರಾಟ ಮಾಡಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಪಾದೂರು ಕಚ್ಚಾತೈಲ ಘಟಕ ನಿರ್ಮಾಣಕ್ಕೆ ವಿರೋಧವಿಲ್ಲ. ಆದರೆ, ಭೂಮಿ ಕಳೆದುಕೊಂಡವರಿಗೆ ನ್ಯಾಯಯುತ ಪರಿಹಾರ ಸಿಗಬೇಕು ಎಂಬುದಷ್ಟೆ ಕಾಳಜಿ ಎಂದರು.‌

ಸುದ್ದಿಗೋಷ್ಠಿಯಲ್ಲಿ ಮಾಸ್ ಇಂಡಿಯಾ ಸಂಘಟನೆಯ ಐರಿನ್ ಥಾವ್ರೊ, ಹರಿಕೃಷ್ಣ ತಂತ್ರಿ, ಪ್ರವೀಣ್ ಕೊರ್ಡಾ, ಜಯಪೂಜಾರಿ, ಗೀತಾ ಸುವರ್ಣ, ವಿಠಲ್ ಜತ್ತನ್ನ ಇದ್ದರು.

ಪ್ರತಿಕ್ರಿಯಿಸಿ (+)