ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಸಿ ಗೋತಳಿ ಸಂರಕ್ಷಣೆಗೆ ‘ಗೋಧಾಮ’ ಸಂಕಲ್ಪ

ಮುನಿಯಾಲಿನಲ್ಲಿ 27 ಎಕರೆಯಲ್ಲಿ ಸಂಜೀವಿನಿ ಫಾರ್ಮ್‌
Last Updated 28 ಅಕ್ಟೋಬರ್ 2022, 8:30 IST
ಅಕ್ಷರ ಗಾತ್ರ

ಹೆಬ್ರಿ: ದೇಸಿ ಗೋತಳಿಗಳ ಉಳಿವಿಗೆ ಹಾಗೂ ರಕ್ಷಣೆಗೆ ಉದ್ಯಮಿ ಮೂಡಬಿದರೆಯ ಎಸ್‌ಕೆಎಫ್‌ ಉದ್ಯಮ ಸಮೂಹದ ಅಧ್ಯಕ್ಷ ಜಿ. ರಾಮಕೃಷ್ಣ ಆಚಾರ್ ಮುನಿಯಾಲಿನ 27 ಎಕರೆ ವಿಸ್ತೀರ್ಣದಲ್ಲಿ ‘ಸಂಜೀವಿನಿ ಫಾರ್ಮ್‌ ಮತ್ತು ಡೇರಿಯ ಗೋಧಾಮ ಹಾಗೂ ದೇಶಿಯ ಗೋತಳಿಗಳ ಅಭಿವೃದ್ಧಿ ಕೇಂದ್ರ ಸ್ಥಾಪಿಸಿದ್ದಾರೆ.

ಗೋಧಾಮದಲ್ಲಿ ಗೋವುಗಳು ಸ್ವಚ್ಛಂದವಾಗಿ ತಿರುಗಾಡಲು 8 ಎಕರೆ ಜಾಗ ಹಾಗೂ ಮೇವು ಬೆಳೆಯಲು 8 ಎಕರೆ ಜಾಗ ಮೀಸಲಿರಿಸಲಾಗಿದೆ. ಶುದ್ಧ ದೇಸಿ ಗಿರ್ ಹಸುಗಳ ಹಾಲಿನಿಂದ ತುಪ್ಪ, ಮಜ್ಜಿಗೆ ಮತ್ತು ಲಸ್ಸಿ ತಯಾರಿಕೆಯು ನಡೆಯುತ್ತಿದ್ದು ಸ್ವಾವಲಂಬನೆಗೆ ಹಾಗೂ ಉದ್ಯೋಗ ಸೃಷ್ಟಿಗೆ ಕಾರಣವಾಗಿದೆ.

ವಿದೇಶಿ ಸಂಸ್ಕೃತಿಗೆ ಮಾರುಹೋಗಿ ದೇಸಿ ಸಂಸ್ಕಂತಿ, ಸ್ವಂತಿಕೆ ಕಳೆದುಕೊಂಡಿರುವಂತಹ ಸ್ಥಿತಿಯಲ್ಲಿ ಗೋಧಾಮದಲ್ಲಿ ಪ್ರಾಚೀನ ಭಾರತದ ಹಳ್ಳಿಯ ಜೀವನ, ಗೋಸಾಕಾಣಿಕೆ, ಪ್ರಾಣಿ ಪಕ್ಷಿಗಳು, ಕೃಷಿ ಆಧಾರಿತ ಜೀವನಕ್ಕೆ ಪೂರಕವಾಗಿ ಮುಂದಿನ ಜನಾಂಗವು ‘ಮರಳಿ ಹಳ್ಳಿಗೆ' ಬರುವಂತೆ ಆಕರ್ಷಿಸುವ ಕೆಲಸ ನಡೆಯುತ್ತಿದೆ.

ಸಾಫ್ಟ್‌ವೇರ್, ಮೆಡಿಕಲ್, ಎಂಜಿನಿಯರಿಂಗ್ ಅಥವಾ ಇತರ ವೃತ್ತಿಪರ ಉದ್ಯೋಗಗಳಂತೆ ಹೈನುಗಾರಿಕೆಯು ಮೌಲ್ಯಯುತ ಎಂಬುದನ್ನು ಸಮಾಜಕ್ಕೆ ಮನದಟ್ಟು ಮಾಡುವ ಪ್ರಯತ್ನದಲ್ಲಿದ್ದೇವೆ ಎನ್ನುತ್ತಾರೆ ಗೋಧಾಮದ ಸಂಸ್ಥಾಪಕ ರಾಮಕೃಷ್ಣ ಆಚಾರ್‌.

ಹೈನುಗಾರಿಕೆಯನ್ನು ಸಣ್ಣ ಉದ್ಯಮವನ್ನಾಗಿ ಪರಿಗಣಿಸಿ, ಉದ್ಯೋಗ ಸೃಷ್ಟಿಗೆ ಒತ್ತು ನೀಡಲಾಗಿದೆ. ಹಸುವಿನ ಹಾಲಿನ ಉಪ ಉತ್ಪನ್ನಗಳಾದ ಮಜ್ಜಿಗೆ, ಬೆಣ್ಣೆ, ತುಪ್ಪ, ಪನೀರ್ ತಯಾರಿಕೆಯ ಮೂಲಕ ಸ್ವಾವಲಂಬನೆಗೆ ಒತ್ತು ನೀಡಲಾಗಿದೆ.

ಹೈನುಗಾರಿಕೆಯ ಮೂಲಕ ಸಮುದಾಯ ಅಭಿವೃದ್ಧಿ ಹೊಂದುವ ಮೂಲಕ ದೇಶದ ಆರ್ಥಿಕ ಬೆಳವಣಿಗೆಗೆ ಕೊಡುಗೆ ನೀಡುವಂತೆ ಪ್ರೇರೇಪಿಸುವುದು ಗೋಧಾಮದ ಉದ್ದೇಶ ಎಂಂದು ಟ್ರಸ್ಟಿ ಸವಿತಾ ಆರ್. ಆಚಾರ್‌ ತಿಳಿಸಿದರು.

ದೇಸಿ ತಳಿಗಳ ಅಭಿವೃದ್ಧಿ ಕೇಂದ್ರ: ಹೆಚ್ಚಿನ ಹಾಲು ಉತ್ಪಾದನೆಗೆ ವಿದೇಶಿ ತಳಿಗಳನ್ನು ಹೆಚ್ಚು ಸಾಕಲಾಗುತ್ತಿರುವ ಪರಿಣಾಮ ದೇಸಿ ಗೋತಳಿಗಳು ಅಳಿವಿನಂಚಿನಲ್ಲಿವೆ. ದೇಸಿ ಗೋತಳಿಗಳನ್ನು ಸಂರಕ್ಷಿಸಿ, ಅಭಿವೃದ್ಧಿಗೊಳಿಸಿ, ಗೋವಿನ ಮೌಲ್ಯವನ್ನು ಮುಂದಿನ ಯುವ ಪೀಳಿಗೆಗೆ ತಿಳಿಸುವ ಉದ್ದೇಶದಿಂದ ಗೋಧಾಮದಲ್ಲಿ ಗಿರ್, ಕಾಂಕ್ರೆಜ್, ಪುಂಗನೂರು, ಸಹಿವಾಲ್ ಸಹಿತ ದೇಸಿ ಗೋತಳಿಗಳನ್ನು ಸಾಕಲಾಗುತ್ತಿದ್ದು, ತಳಿ ಅಭಿವೃದ್ಧಿ ಮಾಡಲಾಗುತ್ತಿದೆ.

ದೇಸಿ ಗೋವಿನ ಸೆಗಣಿ ಮತ್ತು ಗೋಮೂತ್ರದಿಂದ ಸಾವಯವ ಗೊಬ್ಬರ ತಯಾರಿಸಿ ಮಣ್ಣಿನ ಫಲವತ್ತತೆ ಹೆಚ್ಚಳ ಮಾಡಲಾಗುತ್ತಿದೆ. ಸಾವಯವ ಗೊಬ್ಬರವನ್ನು ಬಳಸಿ ರಾಸಾಯನಿಕ ಮುಕ್ತ ಜೋಳ ಬೆಳೆಯಲಾಗುತ್ತಿದೆ ಎಂದು ರಾಮಕೃಷ್ಣ ಆಚಾರ್‌ ಮಾಹಿತಿ ನೀಡಿದರು.

ಹೈನುಗಾರಿಕೆಯಿಂದ 4 ವಿಧಗಳಲ್ಲಿ ನಿಯಮಿತ ಆದಾಯ ಪಡೆಯಬಹುದು. ಪ್ರತಿದಿನ ಹಾಲಿನಿಂದ ಆದಾಯ, ಪ್ರತಿವಾರ ಹಾಲಿನ ಉತ್ಪನ್ನಗಳಾದ ಮಜ್ಜಿಗೆ, ಬೆಣ್ಣೆ, ತುಪ್ಪ, ಪನೀರ್‌ನಿಂದ ಆದಾಯ, ಗೋಆಧಾರಿತ ಸಾವಯವ ಗೊಬ್ಬರವನ್ನು ಬಳಸಿ ಹಣ್ಣು, ತರಕಾರಿ ಬೆಳೆಯಬಹುದು. ಹೈನುಗಾರಿಕೆಯಿಂದ ವರ್ಷವಿಡಿ ಆದಾಯ ಪಡೆಯಬಹುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT