ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಮಾಳಗಳ ರಕ್ಷಣೆಗೆ ಸರ್ಕಾರ ಮುಂದಾಗಲಿ: ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಒತ್ತಾಯ

Last Updated 29 ಸೆಪ್ಟೆಂಬರ್ 2021, 13:01 IST
ಅಕ್ಷರ ಗಾತ್ರ

ಉಡುಪಿ: ಗೋವುಗಳ ಮೇವಿಗೆ ಮೀಸಲಾಗಿದ್ದ ಗೋಮಾಳ ಅನ್ಯ ಉದ್ದೇಶಗಳಿಗೆ ಬಳಕೆಯಾಗುತ್ತಿದ್ದು, ಗೋಮಾಳಗಳನ್ನು ಸರ್ಕಾರ ಸಂರಕ್ಷಿಸಬೇಕು ಎಂದು ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಒತ್ತಾಯಿಸಿದರು.

ಸರ್ಕಾರ ಪ್ರತಿ ಜಿಲ್ಲೆ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಗೋಶಾಲೆಗಳನ್ನು ತೆರೆಯಲು ನಿರ್ಧರಿಸಿರುವುದು ಸ್ವಾಗತಾರ್ಹ. ಇದರ ಜತೆಗೆ ಪ್ರತಿ ಗ್ರಾಮಗಳಲ್ಲಿರುವ ಗೋಮಾಳ ಜಾಗವನ್ನು ಗುರುತಿಸಿ, ಹದ್ದುಬಸ್ತು ಮಾಡಿ ಮೇವು ಬೆಳೆಯಲು ಮೀಸಲಿರಿಸಬೇಕು. ಉಡುಪಿ ಜಿಲ್ಲೆಯ 233 ಗ್ರಾಮಗಳಲ್ಲಿ 3,000 ಎಕರೆಗೂ ಹೆಚ್ಚು ಗೋಮಾಳ ಪ್ರದೇಶವಿದ್ದು, ಅನ್ಯ ಉದ್ದೇಶಗಳಿಗೆ ಪರಭಾರೆಯಾಗದಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಗೋಶಾಲೆಗಳಲ್ಲಿ ಗೋವುಗಳ ಪಾಲನೆಗೆ ನಿಗದಿಪಡಿಸಿರುವ ದರವನ್ನು ಹೆಚ್ಚಳ ಮಾಡಬೇಕು. ಗ್ರಾಮಗಳಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಗೋಕಳ್ಳತನ ತಡೆಗೆ ಕಠಿಣ ಕಾನೂನುಗಳನ್ನು ಜಾರಿಗೆ ತರಬೇಕು. ಆಯುಧಗಳನ್ನು ತೋರಿಸಿ ಜೀವ ಬೆದರಿಕೆ ಹಾಕಿ ಗೋವುಗಳನ್ನು ಕಳ್ಳತನ ಮಾಡುತ್ತಿರುವ ಘಟನೆಗಳು ನಡೆಯುತ್ತಿದ್ದು ಇದಕ್ಕೆ ಕಡಿವಾಣ ಬೀಳಬೇಕು ಎಂದು ಸ್ವಾಮೀಜಿ ಒತ್ತಾಯಿಸಿದರು.

ಸ್ವಾತಂತ್ರ್ಯ ಪೂರ್ವದಲ್ಲಿಯೇ ಮೇವಿಗಾಗಿ ಗೋಮಾಳಗಳನ್ನು ಮೀಸಲಿರಿಸಲಾಗಿತ್ತು. ಕಾಲಾನಂತರ ಗೋವುಗಳ ಸಂಖ್ಯೆ ಕಡಿಮೆಯಾಗಿ ಗೋಮಾಳಗಳು ಅನ್ಯ ಉದ್ದೇಶಗಳಿಗೆ ಬಳಕೆಯಾಯಿತು, ಹೆಚ್ಚಿನ ಭೂಮಿ ಪರಭಾರೆಯೂ ಆಯಿತು. ಈಗ ಸರ್ಕಾರ ರಾಜ್ಯದಾದ್ಯಂತ ಗೋಶಾಲೆಗಳನ್ನು ತೆರೆಯಲು ನಿರ್ಧರಿಸಿದೆ. ಆದರೆ, ವೇವು ಬೆಳೆಯಲು ಗೋಮಾಳಗಳ ಕೊರತೆ ಎದುರಾಗಿದೆ ಎಂದರು.

ಗೋ ಹಿತರಕ್ಷಣಾ ಒಕ್ಕೂಟದ ಸಂಚಾಲಕ ಗಣೇಶ್ ಕಿಣಿ ಮಾತನಾಡಿ, ಗೋಸಂತತಿಯನ್ನು ಉಳಿಸಿ ಬೆಳೆಸುವ ಕಾರ್ಯ ಉಡುಪಿಯಿಂದ ಆರಂಭವಾಗಬೇಕು ಎಂಬ ನಿಟ್ಟಿನಲ್ಲಿ ಸಮಿತಿಯು ಗೋಮಾಳಗಳ ರಕ್ಷಣೆಗೆ ಮುಂದಾಗಿದೆ. ಜಿಲ್ಲೆಯಲ್ಲಿರುವ ಗೋಮಾಳಗಳ ರಕ್ಷಣೆಗಾಗಿ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.

ಈ ಸಂದರ್ಭ ಸಮಿತಿ ಕಾರ್ಯದರ್ಶಿ ವಿಜಯ್ ಪ್ರಕಾಶ್ ಬೈಲಕೆರೆ, ಶ್ರೀನಿವಾಸ್ ಶೆಟ್ಟಿಗಾರ್, ಡಾ.ಅಣ್ಣಯ್ಯ ಕುಲಾಲ್, ಸೂರ್ಯನಾರಾಯಣ ಗಾಣಿಗ, ಕೃಷ್ಣಾನಂದ ಛಾತ್ರ, ದೇವದಾಸ್ ಹೆಬ್ಬಾರ್, ಭಾಸ್ಕರ್ ಶೆಟ್ಟಿ ನಾವುಂದ, ಶ್ರೀಧರ ಆಚಾರ್ಯ, ಶಶಾಂಕ್ ಶಿವತ್ತಾಯ, ವಿಶ್ವನಾಥ ನಾಯ್ಕ, ಸುರೇಶ್ ಬೆಟ್ಟಿನ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT