ಹೆಲಿಟೂರಿಸಂಗೆ ಮನಸೋತ ಪ್ರವಾಸಿಗರು

7
ಕಳೆದ 3 ದಿನಗಳಿಂದ ನಡೆದ ಹೆಲಿಟೂರಿಸಂ ಯಶಸ್ವಿ

ಹೆಲಿಟೂರಿಸಂಗೆ ಮನಸೋತ ಪ್ರವಾಸಿಗರು

Published:
Updated:
Prajavani

ಉಡುಪಿ: ಇಲ್ಲಿನ ಆದಿ ಉಡುಪಿ ಎನ್‌ಸಿಸಿ ಗ್ರೌಂಡ್‌ನಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ಹೆಲಿಟೂರಿಸಂಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಯಶಸ್ವಿಯಾಗಿ ಮುಕ್ತಾಯವಾಯಿತು.

ಜಿಲ್ಲೆಯ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಿ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ಉದ್ದೇಶದಿಂದ ಮಲ್ಪೆ ಬೀಚ್‌ ಅಭಿವೃದ್ಧಿ ಸಮಿತಿಯು ಜಿಲ್ಲಾಡಳಿತದ ಜೊತೆಗೂಡಿ ಆಯೋಜಿಸಿದ್ದ ಹೆಲಿಟೂರಿಸಂಗೆ ನಿರೀಕ್ಷೆಗೂ ಮೀರಿದ ಜನರು ಆಗಮಿಸಿದ್ದರು.

ಮಲ್ಪೆ ಬೀಚ್‌, ಸೇಂಟ್ ಮೇರಿಸ್‌ ಐಲ್ಯಾಂಡ್‌, ಕೋಡಿ ಬೆಂಗ್ರೆಯ ಡೆಲ್ಟಾ ಪಾಯಿಂಟ್‌, ಮಣಿಪಾಲದ ಗಗನಚುಂಬಿ ಕಟ್ಟಡಗಳು ಹಾಗೂ ಶ್ರೀಕೃಷ್ಣ ಮಠದ ಪರಿಸರ ಹೀಗೆ ಉಡುಪಿ ಪ್ರಸಿದ್ಧ ಪ್ರವಾಸಿತಾಣಗಳನ್ನು ಪ್ರವಾಸಿಗರು ಆಗಸದೆತ್ತರದಿಂದ ನೋಡಿ ಕಣ್ತುಂಬಿಕೊಂಡರು.

8, 10, 13 ನಿಮಿಷಗಳ ರೈಡ್‌ ಪ್ಯಾಕೇಜ್‌ ವ್ಯವಸ್ಥೆ ಇತ್ತು. ₹ 2500 ಆರಂಭಿಕ ದರ ನಿಗಧಿಪಡಿಸಲಾಗಿತ್ತು. ಫೋನ್‌ ಮೂಲಕ ಹಾಗೂ ಸ್ಥಳದಲ್ಲೇ ಬುಕ್ಕಿಂಗ್ ವ್ಯವಸ್ಥೆ ಇದ್ದ ಕಾರಣ ಪ್ರವಾಸಿಗರಿಗೆ ಸಮಸ್ಯೆಯಾಗಲಿಲ್ಲ.   

ಮಂಗಳೂರು, ಕಾರವಾರ, ಚಿಕ್ಕಮಗಳೂರು, ಶಿವಮೊಗ್ಗ, ಬೆಂಗಳೂರು ಹಾಗೂ ದೆಹಲಿ ಮೊದಲಾದ ಕಡೆಗಳಿಂದ ಆಗಮಿಸಿದ್ದ ಪ್ರವಾಸಿಗರು ಹೆಲಿಕಾಫ್ಟರ್‌ನಲ್ಲಿ ಹಾರಾಡುವ ಕನಸನ್ನು ಈಡೇರಿಸಿಕೊಂಡರು.

ನಿರೀಕ್ಷೆಗೂ ಮೀರಿದ ರೈಡ್: ಜ.11ರಿಂದ 13ರ ವರೆಗೆ ನಡೆದ ಹೆಲಿಟೂರಿಸಂನಲ್ಲಿ 100ಕ್ಕಿಂತಲೂ ಹೆಚ್ಚಿನ ರೈಡ್‌ಗಳು ನಡೆದವು. ಆರಂಭಗೊಂಡ ದಿನ ಶುಕ್ರವಾರ 24ರಿಂದ 25 ರೈಡ್‌ಗಳಲ್ಲಿ ಪ್ರವಾಸಿಗರು ಪ್ರಯಾಣ ಮಾಡಿದರೆ, ಶನಿವಾರ ನಿರೀಕ್ಷೆಗೂ ಮೀರಿ 35 ರೈಡ್‌ಗಳು ನಡೆದವು. ರಜಾ ದಿನವಾದ ಭಾನುವಾರ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿತ್ತು. ಬೆಳಿಗ್ಗಿನಿಂದಲೇ ಹೆಲಿಕಾಪ್ಟರ್ ರೈಡ್ ಮಾಡಲು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ಕೊನೆಯ ದಿನ 45ಕ್ಕೂ ಹೆಚ್ಚು ರೈಡ್‌ಗಳು ನಡೆದಿದ್ದು ವಿಶೇಷವಾಗಿತ್ತು.

ಮೇ ತಿಂಗಳಲ್ಲಿ ಮತ್ತೊಮ್ಮೆ: ಕಳೆದ ಮೂರು ವರ್ಷಗಳಿಂದ ಯಶಸ್ವಿಯಾಗಿ ಹೆಲಿ ಟೂರಿಸಂ ಆಯೋಜಿಸುತ್ತಿದ್ದೇವೆ. ಪ್ರತಿಬಾರಿಯೂ ಪ್ರವಾಸಿಗರಿಂದ ಉತ್ತಮ ಸ್ಪಂದನ ದೊರೆತಿದೆ. ಆದರೆ, ಈ ಬಾರಿ ಪ್ರವಾಸಿಗರಿಂದ ನಿರೀಕ್ಷೆಗೂ ಮೀರಿದ ಸ್ಪಂದನೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಲೋಕಸಭೆ ಚುನಾವಣೆ ಮುಗಿದ ಬಳಿಕ ಏಪ್ರಿಲ್‌ ಅಥವಾ ಮೇ ತಿಂಗಳಿನಲ್ಲಿ ಮತ್ತೆ ಹೆಲಿಟೂರಿಸಂ ಆಯೋಜಿಸುವ ಚಿಂತನೆ ನಡೆಸಲಾಗಿದೆ ಎನ್ನುತ್ತಾರೆ ಮಲ್ಪೆ ಬೀಚ್‌ ಅಭಿವೃದ್ಧಿ ಪ್ರಾಧಿಕಾರದ ವ್ಯವಸ್ಥಾಪಕ ಸುದೇಶ್ ಶೆಟ್ಟಿ.

ಚಿಪ್ಸನ್‌ ಏವಿಯೇಷನ್, ಮಂತ್ರ ಸಂಸ್ಥೆ, ಮೇರಿಡಿಯನ್ ಬೇ, ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಹೆಲಿಟೂರಿಂಸ ನಡೆಯಿತು. ಜ.4ರಿಂದ6ರವರೆಗೆ ಕುಂದಾಪುರದ ಕೋಟೇಶ್ವರ ಬಳಿಯ ಯುವ ಮೆರಿಡಿಯನ್ ರೆಸಾರ್ಟ್ ಬಳಿ ಹೆಲಿಟೂರಿಸಂ ನಡೆದಿತ್ತು. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !