ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಸಿ ಪ್ರಜ್ಞೆಯ ರಂಗ ನಿರ್ದೇಶಕ ಗೋಪಾಲಕೃಷ್ಣ ನಾಯರಿ

ಶ್ರದ್ಧಾಂಜಲಿ ಸಭೆಯಲ್ಲಿ ಯಕ್ಷಗಾನ ಕಲಾವಿದ ಎಚ್‌.ಸುಜಯೀಂದ್ರ ಹಂದೆ
Last Updated 19 ಜನವರಿ 2023, 6:12 IST
ಅಕ್ಷರ ಗಾತ್ರ

ಕುಂದಾಪುರ: ಗೋಪಾಲಕೃಷ್ಣ ನಾಯರಿ ಹೊಸತನಕ್ಕಾಗಿ ತುಡಿಯುವ ಪ್ರಯೋಗಶೀಲ ಗುಣದ ದೇಸಿ ಪ್ರಜ್ಞೆಯ ರಂಗ ನಿರ್ದೇಶಕ ಎಂದು ಖ್ಯಾತ ಯಕ್ಷಗಾನ ಕಲಾವಿದ ಎಚ್.ಸುಜಯೀಂದ್ರ ಹಂದೆ ಹೇಳಿದರು‌.

ನಾಯರಿ ಜನಾಂಗೀಯ ಅಧ್ಯಯನ ಮತ್ತು ಸಂಶೋಧನಾ ಪ್ರತಿಷ್ಠಾನದ ವತಿಯಿಂದ ಕಾರ್ಕಡ–ಸಾಲಿಗ್ರಾಮದಲ್ಲಿ ಖ್ಯಾತ ರಂಗ ನಿರ್ದೇಶಕ ಗೋಪಾಲಕೃಷ್ಣ ನಾಯರಿ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿ, ಸಂಸ್ಕೃತ ನಾಟಕಗಳನ್ನು ಸಮಕಾಲೀನಗೊಳಿಸಿ ಜನಪದ ಪ್ರಕಾರಗಳಲ್ಲಿ ಪ್ರಯೋಗ ಮಾಡಿದ ಅಪರೂಪದ ಕಲಾವಿದರಾಗಿದ್ದವರು ಗೋಪಾಲಕೃಷ್ಣ ನಾಯರಿ.

ಅವರ ನಿಧನ ರಂಗಭೂಮಿ ಹಾಗೂ ಜಾನಪದ ಕಲಾ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದ್ದು, ಪ್ರತಿಭಾವಂತ ಕಲಾವಿದ ಹಾಗೂ ಮಾರ್ಗದರ್ಶಕರನ್ನು ಕಳೆದುಕೊಂಡಂತಾಗಿದೆ ಎಂದು ನುಡಿ ನಮನ ಸಲ್ಲಿಸಿದರು‌.

ಸಾಲಿಗ್ರಾಮ ಪಟ್ಟಣ ಪಂಚಾಯತಿಯ ಮಾಜಿ ಅಧ್ಯಕ್ಷ ರಾಜು ಪೂಜಾರಿ ಮಾತನಾಡಿ ಕಾರ್ಕಡ ಸಾಲಿಗ್ರಾಮ ಪರಿಸರದ ಗೋಪಾಲಕೃಷ್ಣ ನಾಯರಿ ವಿಶಿಷ್ಟ ವ್ಯಕ್ತಿತ್ವದ ಮೂಲಕ ನಾಟಕ, ಯಕ್ಷಗಾನ ಹಾಗೂ ಜಾನಪದ ಕಲಾ ಕ್ಷೇತ್ರದಲ್ಲಿ ಅಚ್ಚಳಿಯದ ಸಾಧನೆ ಮಾಡಿದ್ದಾರೆ. ಅವರ ಸಾಧನೆ ಗುರುತಿಸಿ ಸರ್ಕಾರ ಮರಣೋತ್ತರ ಪ್ರಶಸ್ತಿ ನೀಡಬೇಕು ಎಂದು ಒತ್ತಾಯಿಸಿದರು.

ಪ್ರತಿಷ್ಠಾನದ ಸ್ಥಾಪಕ ಸದಸ್ಯ ಕೆ.ರಾಘವೇಂದ್ರ ನಾಯರಿ ಪ್ರಾಸ್ತಾವಿಕವಾಗಿ ಮಾತನಾಡಿ ಗೋಪಾಲಕೃಷ್ಣ ನಾಯರಿ ನಾಡು ಕಂಡ ಪ್ರತಿಭಾವಂತ ಕಲಾವಿದರಾಗಿದ್ದರು. ದೇಸಿ ಹಾಗೂ ಪ್ರಯೋಗಶೀಲ ರಂಗ ನಿರ್ದೇಶಕರಾಗಿ ಹೆಸರಾಗಿದ್ದರು‌ ಎಂದರು.

ಪ್ರತಿಷ್ಠಾನದ ಕಾರ್ಯದರ್ಶಿ ದಾಸು ನಾಯರಿ ಮಾತನಾಡಿ ಗೋಪಾಲಕೃಷ್ಣ ನಾಯರಿ 38 ವರ್ಷಗಳಿಂದ ರಂಗ ಭೂಮಿಯಲ್ಲಿ ದುಡಿದಿದ್ದು ನೆನಪಿನಲ್ಲಿಡುವಂತಹ ಕೆಲಸಗಳನ್ನು ಮಾಡಿ ಹೋಗಿದ್ದಾರೆ. ಬೆಂಗಳೂರು, ತುಮಕೂರು, ಸಾಲಿಗ್ರಾಮ, ಚಿತ್ರದುರ್ಗ, ಹರಪನಹಳ್ಳಿಯಲ್ಲಿ ಪ್ರತಿಭಾವಂತ ಕಲಾವಿದರನ್ನು ಗುರುತಿಸಿ ರಂಗ ತರಬೇತಿ ನೀಡಿದ್ದಾರೆ. ರಂಗಭೂಮಿ ಚಟುವಟಿಕೆಗಳನ್ನು ಜೀವಂತವಾಗಿರಿಸುವಲ್ಲಿ ವಿಶಿಷ್ಟ ಕೊಡುಗೆ ನೀಡಿದ್ದಾರೆ ಎಂದರು.

ನಾಯರಿ ಜನಾಂಗೀಯ ಅಧ್ಯಯನ ಮತ್ತು ಸಂಶೋಧನಾ ಪ್ರತಿಷ್ಠಾನದ ಅಧ್ಯಕ್ಷ ರಾಧಾಕೃಷ್ಣ ನಾಯರಿ ಮಾತನಾಡಿ, ಕಲಾ ಸೇವೆಯ ಜೊತೆಗೆ ಸಂಶೋಧನಾ ಕ್ಷೇತ್ರದಲ್ಲೂ ಆಸಕ್ತಿ ಹೊಂದಿದ್ದ ನಾಯರಿಯವರು ಜನಾಂಗೀಯ ಅಧ್ಯಯನ ಮತ್ತು ಸಂಶೋಧನಾ ಪ್ರತಿಷ್ಠಾನ ಸ್ಥಾಪಿಸುವ ಮೂಲಕ ಅತ್ಯಂತ ಕಡಿಮೆ ಜನ ಸಂಖ್ಯೆ ಹೊಂದಿರುವ ಮತ್ತು ಅತ್ಯಂತ ಶ್ರೀಮಂತ ಆಚರಣೆ, ಸಂಸ್ಕೃತಿ, ಪರಂಪರೆ ಹೊಂದಿರುವ ನಾಯರಿ ಸಮುದಾಯದ ಬಗ್ಗೆ ಹೆಚ್ಚು ಸಂಶೋಧನೆಗಳು ನಡೆಯಬೇಕು ಎಂಬ ಮಹತ್ವಾಕಾಂಕ್ಷೆ ಹೊಂದಿದ್ದರು‌. ಅವರ ಆಸೆಯನ್ನು ಪ್ರತಿಷ್ಠಾನ ಈಡೇರಸಲಿದೆ ಎಂದರು.

ಕರ್ನಾಟಕ ರಾಜ್ಯ ನಾಯರಿ ಸಮಾಜ ಸುಧಾರಕ ಸಂಘದ ಅಧ್ಯಕ್ಷ ಚಂದ್ರಶೇಖರ ನಾಯರಿ, ಮುರಳೀಧರ ನಾಯರಿ ನುಡಿ ನಮನ ಸಲ್ಲಿಸಿದರು.

ಶ್ರದ್ಧಾಂಜಲಿ ಸಭೆಯಲ್ಲಿ ರಾಜ್ಯ ನಾಯರಿ ಸಮಾಜ ಸುಧಾರಕ ಸಂಘದ ಅಧ್ಯಕ್ಷ ಚಂದ್ರಶೇಖರ ನಾಯರಿ, ಕಾರ್ಯದರ್ಶಿ ಪ್ರಭಾಕರ ನಾಯರಿ ಹಾಗೂ ಬಾಬಯ್ಯ ನಾಯರಿ, ಸಿ.ಮಂಜುನಾಥ್ ನಾಯರಿ, ಮುರಳಿಧರ ನಾಯರಿ, ರಾಮಚಂದ್ರ ನಾಯರಿ, ವಿ.ಶಿವಕುಮಾರ ನಾಯರಿ, ಚಂದ್ರಶೇಖರ ನಾಯರಿ, ಸೋಮಶೇಖರ್ ನಾಯರಿ, ಬದರಿನಾಥ ನಾಯರಿ, ನಾಗರಾಜ್ ನಾಯರಿ, ಮಾಧವ ನಾಯರಿ, ವಿ.ಸೂರ್ಯಕಲಾ, ವಿ.ಚಂದ್ರಕಲಾ, ಡಾ.ಉದಾತ್ತ, ಮಂಜುನಾಥ್ ನಾಯರಿ, ಪ್ರಶಾಂತ್ ನಾಯರಿ, ಪದ್ಮಾ, ಮಂಜುನಾಥ್, ನಾಗರಾಜ್ ನಾಯರಿ, ಡಾ.ರಶ್ಮಿ ಮುರಳೀಧರ್, ಗಣೇಶ್, ಪ್ರತಾಪ್, ಲಕ್ಷ್ಮಿ, ಗೋಪಾಲಕೃಷ್ಣ ನಾಯರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT