ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ ಬೇಟೆಗೆ ಇಳಿದ ಅಭ್ಯರ್ಥಿಗಳು

ಮನೆ, ಮನೆ ಪ್ರಚಾರದಲ್ಲಿ ಪಾಲ್ಗೊಂಡ ವಿವಿಧ ಪಕ್ಷಗಳ ಮುಖಂಡರು, ಬೆಂಬಲಿಗರ ಸಾಥ್‌
Last Updated 29 ಏಪ್ರಿಲ್ 2018, 10:10 IST
ಅಕ್ಷರ ಗಾತ್ರ

ದಾವಣಗೆರೆ: ನಾಮಪತ್ರ ಹಿಂದಕ್ಕೆ ಪಡೆಯುವ ಗಡುವು ಶುಕ್ರವಾರ ಮುಗಿದಿದ್ದು, ಕಣದಲ್ಲಿರುವವರು ಯಾರು ಎಂಬುದು ಈಗ ಸ್ಪಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಶನಿವಾರ ಇನ್ನಷ್ಟು ಹುರುಪಿನಿಂದ ಮನೆ, ಮನೆ ಭೇಟಿ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡು, ಮತಯಾಚನೆ ಮಾಡಿದರು.

ಮತದಾರರ ಮನವೊಲಿಕೆಗೆ ಪಕ್ಷೇತರರು ಸೇರಿದಂತೆ ಎಲ್ಲಾ ಪಕ್ಷಗಳ ಅಭ್ಯರ್ಥಿಗಳು, ತಮ್ಮ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ರಸ್ತೆಯಲ್ಲಿ ಓಡಾಡಿದರು. ಆದರೆ, ಇವರೆಲ್ಲರಿಗೂ ಪ್ರಖರ ಬಿಸಿಲು ಅಡ್ಡಿಯಾಗಿದ್ದು, ದಣಿವು ಆರಿಸಿಕೊಳ್ಳುತ್ತಲೇ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡರು.

ಅಭಿವೃದ್ಧಿ ಕೆಲಸಗಳೇ ಶ್ರೀರಕ್ಷೆ: ‘ಕಾಂಗ್ರೆಸ್‌ನಿಂದ ಯಾವುದೇ ಅಭಿವೃದ್ಧಿ ಕಾರ್ಯವೂ ಆಗಿಲ್ಲವೆಂಬ ಬಿಜೆಪಿ ಮುಖಂಡರ ಟೀಕೆ ಹಾಸ್ಯಾಸ್ಪದ’ ಎಂದು ಉತ್ತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯೂ ಆದ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ತಿರುಗೇಟು ನೀಡಿದರು.

ಶನಿವಾರ ನಗರದ 21ನೇ ವಾರ್ಡಿನಲ್ಲಿನ ಶ್ರೀಗುಳ್ಳಮ್ಮ ದೇವಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ, ಅಭಿಮಾನಿಗಳು ಮತ್ತು ಕಾರ್ಯಕರ್ತರ ಜೊತೆಗೂಡಿ ಮತ ಯಾಚನೆ ಮಾಡಿ, ಮಾತನಾಡಿದರು.

‘ನಾವು ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಕೆಲಸಗಳೇ ನಮಗೆ ಶ್ರೀರಕ್ಷೆ. ಚುನಾವಣಾ ಪ್ರಚಾರಕ್ಕೆ ಹೋದ ಕಡೆಯಲ್ಲೆಲ್ಲ ಜನರು ಅಭಿಮಾನದಿಂದ ಬರಮಾಡಿಕೊಳ್ಳು ತ್ತಿದ್ದಾರೆ. ಉತ್ಸಾಹಿ ಯುವಪಡೆ ನಮ್ಮ ಬೆನ್ನಿಗೆ ಕವಚವಾಗಿ ನಿಂತಿದೆ. ಇದೆಲ್ಲವನ್ನು ಸಹಿಸಿಕೊಳ್ಳಲಾಗದ ಬಿಜೆಪಿ ಮುಖಂಡರು ನನ್ನ ಬಗ್ಗೆ ಇಲ್ಲಸಲ್ಲದ ಅಪಪ್ರಚಾರದಲ್ಲಿ ತೊಡಗಿದ್ದಾರೆ’ ಎಂದು ಟೀಕಿಸಿದರು.

ಪಾಲಿಕೆ ಸದಸ್ಯ ದಿನೇಶ್ ಕೆ. ಶೆಟ್ಟಿ, ಉತ್ತರ ವಲಯ ಕಾಂಗ್ರೆಸ್ ಅಧ್ಯಕ್ಷ ಎ.ಎಸ್. ಮೃತ್ಯುಂಜಯ, ಮುಖಂಡರಾದ ಎ.ನಾಗರಾಜ್, ಅಜ್ಜಪ್ಪ ಪವಾರ್, ಪಿಸಾಳೆ ನಾಗರಾಜ್ ಇದ್ದರು.

ಸಿದ್ದೇಶ್ವರ ಬಿರುಸಿನ ಪ್ರಚಾರ: ಸಂಸದ ಜಿ.ಎಂ. ಸಿದ್ದೇಶ್ವರ ಅವರು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಯಶವಂತರಾಜ್‌ ಜಾಧವ್‌ ಪರ ಬಿರುಸಿನ ಪ್ರಚಾರ ನಡೆಸಿದರು.

ಬೇತೂರು ರಸ್ತೆಯ ದೇವರಾಜ ನಗರದಲ್ಲಿ ಆಂಜನೇಯ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿ ಮನೆ, ಮನೆಗೆ ತೆರಳಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡರು. ಮುಖಂಡರಾದ ರಾಜನಹಳ್ಳಿ ಶಿವಕುಮಾರ, ಎಚ್.ಎಸ್. ನಾಗರಾಜ್, ವೈ. ಮಲ್ಲೇಶ್, ಬಿ.ಎಂ. ಸತೀಶ್, ಎಚ್.ಎಂ. ರುದ್ರಮುನಿಸ್ವಾಮಿ, ರಮೇಶ್ ನಾಯ್ಕ ಅವರೂ ಇದ್ದರು.

ಸಭೆ ನಡೆಸಿದ ರವೀಂದ್ರನಾಥ್‌: ನಗರದ 26ನೇ ವಾರ್ಡ್‌ನಲ್ಲಿ ನಡೆದ ಕಾರ್ನರ್ ಮೀಟಿಂಗ್‌ನಲ್ಲಿ ಉತ್ತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್‌.ಎ. ರವೀಂದ್ರನಾಥ ಭಾಗವಹಿಸಿದ್ದರು.ಕಟ್ಟಡ ಕಾರ್ಮಿಕ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳಾದ ಬಿ. ನಾಗರಾಜ್ ಹಾಗೂ ಎಂ. ಸುರೇಶಾಚಾರ್ ಬಿಜೆಪಿಗೆ ಸೇರ್ಪಡೆಯಾದರು. ಸಭೆಯಲ್ಲಿ ಮುಕುಂದ, ಸವಿತಾ ರವಿಕುಮಾರ್ ಅವರೂ ಇದ್ದರು.

ಮಾಯಕೊಂಡದಲ್ಲೂ ಪ್ರಚಾರ ಬಿರುಸು: ಮಾಯಕೊಂಡ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಎಸ್. ಬಸವರಾಜ್ ಅವರಿಗೆ ಕಾಟ್ಟಳ್ಳಿ, ಕಾಟ್ಟಳ್ಳಿ ತಾಂಡಾ, ಹೆಬ್ಬಾಳು, ಮಂಡಳೂರು, ಮಂಡಳೂರು ಗೊಲ್ಲರಹಟ್ಟಿ ಗ್ರಾಮಗಳಲ್ಲಿ ಬೆಂಬಲಿಗರೊಂದಿಗೆ ಚುನಾವಣಾ ಪ್ರಚಾರ ಕೈಗೊಂಡರು. ಇದೇ ವೇಳೆಯಲ್ಲಿ ಗ್ರಾಮಸ್ಥರಿಂದ ಬಸವರಾಜ್ ಅವರಿಗೆ ಆರತಿ ಮಾಡಿ ಸ್ವಾಗತಿಸಲಾಯಿತು. ಶಿವಮೂರ್ತಿ, ತಿಪ್ಪೇರುದ್ರಪ್ಪ, ಎಸ್.ಎಂ. ಮಲ್ಲಿಕಾರ್ಜುನ, ಜಿ.ಎಂ. ಮಲ್ಲಿಕಾರ್ಜುನ ಅವರೂ ಇದ್ದರು.

ಬಿಜೆಪಿ ಅಭ್ಯರ್ಥಿ ಪ್ರೊ.ಲಿಂಗಣ್ಣ ಕೂಡ ಕ್ಷೇತ್ರದಲ್ಲಿ ಬೆಂಬಲಿಗರೊಂದಿಗೆ ಬಿರುಸಿನ ಪ್ರಚಾರ ಕೈಗೊಂಡರು.

‘ಶಾ ತಂತ್ರ ದಾವಣಗೆರೆಯಲ್ಲಿ ಫಲಿಸದು’

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಚಾಣಕ್ಯ ತಂತ್ರ ಇಲ್ಲಿ ಫಲಿಸದು. ಖುದ್ದು ಪ್ರಧಾನಿ ನರೇಂದ್ರ ಮೋದಿಯವರೇ ಬಂದರೂ ಇಲ್ಲಿನ ಮತದಾರರ ಮನಸ್ಸನ್ನು ಬದಲಿಸಲು ಸಾಧ್ಯವಿಲ್ಲ ಎಂದು ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT