ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶತಮಾನದ ಶಾಲೆಗೆ ಸಿಕ್ಕಿತು ಕಾಯಕಲ್ಪ

ಕಂಡ್ಲೂರು ಕನ್ನಡ ಸರ್ಕಾರಿ ಶಾಲೆ ಉಳಿಸಲು ಪಣತೊಟ್ಟು ಯಶಸ್ವಿಯಾದ ಗ್ರಾಮಸ್ಥರು
Last Updated 22 ಜೂನ್ 2019, 18:42 IST
ಅಕ್ಷರ ಗಾತ್ರ

ಉಡುಪಿ: ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚುವ ಸ್ಥಿತಿ ತಲುಪಿದ್ದ ಶತಮಾನದ ಶಾಲೆಯೊಂದು ಮರುಹುಟ್ಟು ಪಡೆದಿದೆ. ಕಳೆದ ಶೈಕ್ಷಣಿಕ ವರ್ಷದಲ್ಲಿ ಕೇವಲ 14 ವಿದ್ಯಾರ್ಥಿಗಳಿದ್ದ ಶಾಲೆಯಲ್ಲಿ, ಈ ವರ್ಷ 91 ಮಕ್ಕಳು (ಎಲ್‌ಕೆಜಿ ಸೇರಿ) ಕಲಿಯುತ್ತಿದ್ದಾರೆ. ಕುಂದಾಪುರ ತಾಲ್ಲೂಕಿನ ಕಂಡ್ಲೂರು ಕನ್ನಡ ಸರ್ಕಾರಿ ಶಾಲೆಯ ಯಶೋಗಾಥೆ ಇದು.

ಶತಮಾನದ ಶಾಲೆ:ಕಂಡ್ಲೂರು ಶಾಲೆ ಆರಂಭವಾಗಿದ್ದು 1884ರಲ್ಲಿ. 134 ವರ್ಷಗಳಿಂದ ಈ ಭಾಗದ ಸಾವಿರಾರು ಮಕ್ಕಳಿಗೆ ಶಾಲೆ ಶಿಕ್ಷಣ ನೀಡಿದೆ. ಈಚೆಗೆ ಖಾಸಗಿ ಶಾಲೆಗಳ ಮೇಲಿನ ವ್ಯಾಮೋಹದಿಂದಾಗಿ ಕಳೆದ ವರ್ಷ ವಿದ್ಯಾರ್ಥಿಗಳ ಸಂಖ್ಯೆ 14ಕ್ಕೆ ಕುಸಿದಿತ್ತು. ಪರಿಣಾಮ ಪಕ್ಕದ ಉರ್ದು ಶಾಲೆಯೊಂದಿಗೆ ಕಂಡ್ಲೂರು ಶಾಲೆಯನ್ನು ವಿಲೀನಗೊಳಿಸುವ ಆತಂಕ ಎದುರಾಗಿತ್ತು ಎನ್ನುತ್ತಾರೆ ಕುಂದಾಪುರದ ಬಿಆರ್‌ಸಿರಾಮನಾಥ ಶೆಣೈ

ಶಾಲಾ ಅಭ್ಯುದಯ ಸಮಿತಿ ರಚನೆ:ಶತಮಾನದ ಶಾಲೆಗೆ ಬಂದ ದುಸ್ಥಿತಿಯನ್ನರಿತ ಸ್ಥಳೀಯ ಕನ್ನಿಕಾ ವಿದ್ಯಾಭಾರತಿ ಮಹಿಳಾ ಸಂಘ, ಹಳೆಯ ವಿದ್ಯಾರ್ಥಿಗಳು, ಊರಿನ ಮುಖಂಡರು, ಜನಪ್ರತಿನಿಧಿಗಳು, ಎಸ್‌ಡಿಎಂಸಿ ಸದಸ್ಯರು ಶಾಲೆ ಉಳಿಸುವ ಸಂಕಲ್ಪ ಮಾಡಿದರು. ಕನ್ನಡ ಶಾಲಾ ಅಭ್ಯುದಯ ಸಮಿತಿ ರಚಿಸಿ, ಅಧ್ಯಕ್ಷರನ್ನಾಗಿ ಕಾವ್ರಾಡಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಗೌರಿ ಆರ್‌.ಶ್ರೀಯಾನ್ ಅವರನ್ನು ಆಯ್ಕೆ ಮಾಡಲಾಯಿತು ಎಂದು ಬಿಆರ್‌ಸಿ ಮಾಹಿತಿ ನೀಡಿದರು.

ಶಾಲೆ ಉಳಿಸಲು ಯೋಜನೆ:ಅಭ್ಯುದಯ ಸಮಿತಿ ನಿರಂತರಸಭೆಗಳನ್ನು ನಡೆಸಿ, ಬೇಸಗೆ ರಜೆಯಲ್ಲಿ ಸುತ್ತಮುತ್ತಲಿನ ಗ್ರಾಮಗಳ ಮನೆಮನೆಗೆ ತೆರಳಿ ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸುವಂತೆ ಪೋಷಕರ ಮನವೊಲಿಸಿತು. ಖಾಸಗಿ ಶಾಲೆಯಲ್ಲಿ ಸಿಗುವ ಎಲ್ಲ ಸೌಲಭ್ಯಗಳನ್ನು ಕೊಡುವುದಾಗಿ ಭರವಸೆ ನೀಡಿತು.

ಶಾಲೆಯ ಅಭಿವೃದ್ಧಿಗೆ ಆರ್ಥಿಕ ಸಂಪನ್ಮೂಲ ಕ್ರೂಢೀಕರಿಸಲು ಹಳೆಯ ವಿದ್ಯಾರ್ಥಿಗಳು, ಉದ್ಯಮಿಗಳು, ದಾನಿಗಳನ್ನು ಸಂಪರ್ಕಿಸಿ ನೆರವು ಪಡೆಯಲಾಯಿತು. ₹ 23 ಲಕ್ಷ ವೆಚ್ಚದ ಕ್ರಿಯಾಯೋಜನೆ ಸಿದ್ಧಪಡಿಸಿ, ಶಾಲೆಗೆ ವಿವಿಧ ಸೌಲಭ್ಯಗಳನ್ನು ಒದಗಿಸಲಾಯಿತು ಎನ್ನುತ್ತಾರೆ ಶಾಲೆಯ ಅಭ್ಯುದಯ ಸಮಿತಿ ಅಧ್ಯಕ್ಷೆ ಗೌರಿ ಶ್ರೀಯಾನ್‌.

ಯಾವ ಸೌಲಭ್ಯಗಳು ಲಭ್ಯ:ಮಕ್ಕಳನ್ನು ಆಕರ್ಷಿಸಲು ಶಾಲೆಗೆ ಸುಣ್ಣಬಣ್ಣ ಬಳಿದು ಚಿತ್ರಗಳನ್ನು ಬರೆಸಲಾಗಿದೆ. ದೂರದ ಹಳ್ಳಿಗಳಿಂದ ಬರುವ ಮಕ್ಕಳನ್ನು ಉಚಿತವಾಗಿ ಶಾಲೆಗೆ ಕರೆತರಲು ಮಿನಿ ಬಸ್‌ ವ್ಯವಸ್ಥೆ ಮಾಡಲಾಗಿದೆ.ಕನ್ನಡ ಶಾಲೆಯ ಮಕ್ಕಳು ಇಂಗ್ಲೀಷ್ ಕಲಿಯಬೇಕು ಎಂದು ಸ್ಪೋಕನ್ ಇಂಗ್ಲೀಷ್‌ ಕ್ಲಾಸ್‌, ಸ್ಮಾರ್ಟ್‌ ಕ್ಲಾಸ್‌ ಆರಂಭಿಸಿ, ಮೂವರು ಸ್ನಾತಕೋತ್ತರ ಪದವಿ ಪಡೆದ ಗೌರವ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ಗೌರಿ ತಿಳಿಸಿದರು.

ಮಕ್ಕಳನ್ನು ಶಾಲೆಗೆ ಕರೆತರಲು ಪ್ರತಿತಿಂಗಳು 30000 ಭರಿಸಲಾಗುತ್ತಿದೆ. ಸಮಿತಿಯ ಬಳಿ ಸಂಪನ್ಮೂಲದ ಕೊರತೆಯಿದ್ದು, ದಾನಿಗಳು ನೆರವು ನೀಡಿದರೆ ಬಡ ಮಕ್ಕಳ ಶಿಕ್ಷಣಕ್ಕೆ ನೆರವಾಗುತ್ತದೆ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT