ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಉಡುಪಿ: ಜಿಲ್ಲೆಯಾದ್ಯಂತ ಗಣಪನ ಆರಾಧನೆ, ಜನಪರ ಉತ್ಸವ

ಗಣೇಶೋತ್ಸವ ಸಮಿತಿಗಳಿಂದ ಸಾರ್ವಜನಿಕವಾಗಿ ಹಬ್ಬ ಆಚರಣೆ
Published : 9 ಸೆಪ್ಟೆಂಬರ್ 2024, 5:33 IST
Last Updated : 9 ಸೆಪ್ಟೆಂಬರ್ 2024, 5:37 IST
ಫಾಲೋ ಮಾಡಿ
Comments

ಉಡುಪಿ: ವಕ್ರತುಂಡನ ಉತ್ಸವವನ್ನು ಕೇವಲ ಹಬ್ಬವಾಗಿ ಆಚರಿಸದೆ, ಜನರನ್ನು ಒಗ್ಗೂಡಿಸುವ ಮೂಲಕ ಜನಪರವಾಗಿ ಎಲ್ಲೆಡೆ ಆಚರಿಸಲಾಗುತ್ತದೆ.

ಹಲವು ದಶಕಗಳಿಂದಲೂ ಸಾರ್ವಜನಿಕ ಗಣೇಶೋತ್ಸವ ಹಮ್ಮಿಕೊಳ್ಳುವ ಹಲವು ಸಮಿತಿಗಳು ಜಿಲ್ಲೆಯಲ್ಲಿವೆ. ವಿವಿಧ ಸ್ಪರ್ಧೆಗಳನ್ನು,  ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಇವುಗಳು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿವೆ. ಪ್ರತಿಯೊಂದು ಸಮಿತಿಗಳಿಗೂ ಅವುಗಳದ್ದೇ ಆದ ಇತಿಹಾಸಗಳಿವೆ. ಕೆಲವು ಗಣೇಶೋತ್ಸವ ಸಮಿತಿಗಳು ಹಬ್ಬ ಆಚರಣೆ ಜೊತೆಗೆ ಸಾಮಾಜಿಕ ಕಾರ್ಯಗಳಿಂದಲೂ ಜನಮನ್ನಣೆ ಪಡೆದಿವೆ.

ಅಂಬಲಪಾಡಿ ಬಾಲಗಣೇಶೋತ್ಸವ ಸಮಿತಿ, ಸರ್ವಿಸ್‌ ಬಸ್‌ ನಿಲ್ದಾಣದ ಸಮೀಪದ ಸಾರ್ವಜನಿಕ ಗಣೇಶೋತ್ಸವ ಸಮಿತಿ, ಕಡಿಯಾಳಿ, ಬನ್ನಂಜೆ, ರಥಬೀದಿಯ ರಿಕ್ಷಾ ಚಾಲಕರ ಗಣೇಶೋತ್ಸವ ಸಮಿತಿಯು ಉಡುಪಿ ನಗರದ ಪ್ರಮುಖ ಗಣೇಶೋತ್ಸವ ಸಮಿತಿಗಳಾಗಿವೆ. ಈ ಸಮಿತಿಗಳ ವತಿಯಿಂದ ಪ್ರತಿ ವರ್ಷ ಅದ್ದೂರಿಯಾಗಿ ಹಬ್ಬವನ್ನು ಆಚರಿಸಲಾಗುತ್ತದೆ.

ನಗರ ವ್ಯಾಪ್ತಿಯ ಬಹುತೇಕ ಗಣೇಶೋತ್ಸವ ಸಮಿತಿಗಳಲ್ಲಿ 5 ದಿನಗಳ ಕಾಲ ವಿಘ್ನ ನಿವಾರಕನನ್ನು ಪೂಜಿಸಿ ಬಳಿಕ ಮೂರ್ತಿ ವಿಸರ್ಜನೆ ಮಾಡಲಾಗುತ್ತದೆ.

ಅಲೆವೂರಿನ ಗಣಪ: ಉಡುಪಿ ನಗರ ವ್ಯಾಪ್ತಿಯ ಅಲೆವೂರಿನ ಸಾರ್ವಜನಿಕ ಗಣೇಶೋತ್ಸವ ಸಮಿತಿಯು 40 ವರ್ಷಗಳಿಂದ ಗಣೇಶೋತ್ಸವವನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸುತ್ತಿದೆ. ಈ ಬಾರಿ ಗರುಡ ವಾಹನ ಗಣಪತಿಯನ್ನು ಪ್ರತಿಷ್ಠಾಪಿಸಿದ್ದು, ಜನರನ್ನು ಆಕರ್ಷಿಸುತ್ತಿದೆ. ಶೇಖರ ಕಲ್ಮಾಡಿ ಅವರು ಈ ಮೂರ್ತಿಯನ್ನು ನಿರ್ಮಿಸಿದ್ದಾರೆ. ಗಣೇಶೋತ್ಸವ ಅಂಗವಾಗಿ ಇದೇ 11ರವರೆಗೂ ಇಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ದಿ. ಅಲೆವೂರು ನಾಗರಾಜ್‌ ಅವರು ಈ ಗಣೇಶೋತ್ಸವ ಸಮಿತಿಯ ಸಂಸ್ಥಾಪಕರಾಗಿದ್ದಾರೆ. ದಿ. ಅಲೆವೂರು ಶೇಖರ ಪೂಜಾರಿ ಅವರು ಇದರ ಗೌರವಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಇವರಿಬ್ಬರು ಅಲೆವೂರಿನ ಅಯ್ಯಪ್ಪ ಭಕ್ತವೃಂದದ ಜೊತೆ ಸೇರಿ 1985ರಲ್ಲಿ ಅಲೆವೂರಿನ ಅಶ್ವತ್ಥಕಟ್ಟೆಯಲ್ಲಿ ಗಣೇಶ ವಿಗ್ರಹ ಪ್ರತಿಷ್ಠಾಪಿಸಿ ಈ ಸಮಿತಿಗೆ ನಾಂದಿ ಹಾಡಿದ್ದರು. ಬಳಿಕ ಶಾಶ್ವತ ಆಲಯವಾದ ಗಣೇಶ ಗುಡಿಗೆ ಈ ಆಚರಣೆ ವಿಸ್ತರಿಸಿದೆ. ಗಣೇಶೋತ್ಸವ ಆಚರಣೆ ಜೊತೆ ಸಾಧಕರನ್ನು ಗುರುತಿಸುವ ಹಾಗೂ ಅಶಕ್ತರಿಗೆ ನೆರವು ನೀಡುವ ಸಾಮಾಜಿಕ ಕಾರ್ಯಗಳನ್ನೂ ಈ ಸಮಿತಿ ಮಾಡುತ್ತಿದೆ.

5 ದಿನ ವಕ್ರತುಂಡನ ಆರಾಧನೆ: ಕಾರ್ಕಳದ ಬಿ. ಮಂಜುನಾಥ ಪೈ ಸಾಂಸ್ಕೃತಿಕ ಸಭಾಭವನದ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ಕಳೆದ 40 ವರ್ಷಗಳಿಂದ ಹಬ್ಬವನ್ನು ಆಚರಿಸಲಾಗುತ್ತಿದೆ. ಇಲ್ಲಿ 5 ದಿನಗಳವರೆಗೆ ಗಣೇಶೋತ್ಸವ ನಡೆಸಲಾಗುತ್ತಿದೆ. ತಾಲ್ಲೂಕಿನಲ್ಲಿ ಈ ಗಣೇಶೋತ್ಸವ ಖ್ಯಾತಿ ಪಡೆದಿದ್ದು ತಿಂಗಳ ಕಾಲ ಸಿದ್ಧತೆ ನಡೆಸಲಾಗುತ್ತದೆ. ತಾಲ್ಲೂಕಿನ ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ ಆಕರ್ಷಕ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗುತ್ತದೆ. 

16 ವರ್ಷಗಳಿಂದ ಆಚರಣೆ: ಕಾರ್ಕಳ ಬಸ್‌ ನಿಲ್ದಾಣದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ 16 ವರ್ಷಗಳಿಂದ ಸಾರ್ವಜನಿಕ ಗಣೇಶೋತ್ಸವ ಆಚರಿಸಲಾಗುತ್ತಿದೆ. ಮೊದಲು ಒಂದು ದಿನ ನಡೆಯುತ್ತಿದ್ದ ಗಣೇಶೋತ್ಸವ ಈಗ 2 ದಿನ ನಡೆಯುತ್ತಿದೆ.

ಪಡುಬಿದ್ರಿ: ಇತಿಹಾಸ ಪ್ರಸಿದ್ಧ ಪಡುಬಿದ್ರಿ ಬಾಲಗಣಪತಿ ದೇವಸ್ಥಾನದಲ್ಲಿ ಗಣೇಶ ಚತುರ್ಥಿಯಂದು ಮೂರ್ತಿ ಪ್ರತಿಷ್ಠಾಪಿಸಲಾಗುತ್ತದೆ. ಒಂದು ತಿಂಗಳ ಕಾಲ ನಡೆಯುವ ಪೂಜೆ ವಿಜಯ ದಶಮಿಯಂದು ಕೊನೆಗೊಳ್ಳುತ್ತದೆ. ಈ ಸಂದರ್ಭದಲ್ಲಿ ಪ್ರತಿ ದಿನ ಸಂಜೆ ರಂಗ ಪೂಜೆ  ನಡೆಯುತ್ತದೆ. ಊರಿನ ಮಾತ್ರವಲ್ಲದೆ ಜಿಲ್ಲೆ, ಹೊರಜಿಲ್ಲೆಯ ಭಕ್ತರು ಪಾಲ್ಗೊಳ್ಳುತ್ತಾರೆ.

ಉಡುಪಿಯ ರಥಬೀದಿಯ ಗಣೇಶೋತ್ಸವ ಸಮಿತಿ ಮತ್ತು ರಿಕ್ಷಾ ಚಾಲಕರ ವತಿಯಿಂದ ಪ್ರತಿಷ್ಠಾಪಿಸಿರುವ ಗಣಪತಿ ಮೂರ್ತಿ
ಉಡುಪಿಯ ರಥಬೀದಿಯ ಗಣೇಶೋತ್ಸವ ಸಮಿತಿ ಮತ್ತು ರಿಕ್ಷಾ ಚಾಲಕರ ವತಿಯಿಂದ ಪ್ರತಿಷ್ಠಾಪಿಸಿರುವ ಗಣಪತಿ ಮೂರ್ತಿ
ಹೆಬ್ರಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ಪೂಜಿಸಿದ ಗಣೇಶ
ಹೆಬ್ರಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ಪೂಜಿಸಿದ ಗಣೇಶ
ಬೈಂದೂರು ಸೇನೆಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾಪನೆಗೊಂಡಿರುವ ಗಣಪತಿ
ಬೈಂದೂರು ಸೇನೆಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾಪನೆಗೊಂಡಿರುವ ಗಣಪತಿ
ಪೆರ್ಡೂರು ಯುವಕ ಸಂಘದ ವತಿಯಿಂದ ಪೂಜಿಸಲ್ಪಟ್ಟ ಗಣಪತಿ
ಪೆರ್ಡೂರು ಯುವಕ ಸಂಘದ ವತಿಯಿಂದ ಪೂಜಿಸಲ್ಪಟ್ಟ ಗಣಪತಿ

49ನೇ ವರ್ಷದ ಸಂಭ್ರಮ

ಹೆಬ್ರಿ: ಇಲ್ಲಿನ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ವತಿಯಿಂದ ಶ್ರೀರಾಮ ಮಂಟಪದಲ್ಲಿ 49ನೇ ವರ್ಷದ ಗಣೇಶೋತ್ಸವ ಭಕ್ತಿ ವೈಭವದಿಂದ ನಡೆಯುತ್ತಿದೆ. ಈ ಬಾರಿ ಇದೇ 10ರವರೆಗೆ ನಡೆಯಲಿದೆ. ಹೆಬ್ರಿಯ ಸಮಾನಮನಸ್ಕರು ಆರಂಭಿಸಿದ ಸಾರ್ವಜನಿಕ ಗಣೇಶೋತ್ಸವಕ್ಕೆ ಬರುವ ವರ್ಷ ಸುವರ್ಣ ಸಂಭ್ರಮ. ಅದಕ್ಕಾಗಿ ಸರ್ವ ಸಿದ್ಧತೆಗಳು ನಡೆಯುತ್ತಿದೆ.

ರಜತ ಸಂಭ್ರಮಕ್ಕೆ ಗಣೇಶ ಮೂರ್ತಿಗೆ ರಜತ ಕಿರೀಟ ಸಮರ್ಪಿಸಲಾಗಿತ್ತು. ಮುಂದಿನ ವರ್ಷ ಸುವರ್ಣ ಸಂಭ್ರಮದ ನೆನಪಿಗಾಗಿ ಗಣೇಶ ದೇವರಿಗೆ ಚಿನ್ನ ಲೇಪಿತ ಕಿರೀಟವನ್ನು ಅರ್ಪಿಸುವ ಸಂಕಲ್ಪವನ್ನು ಸಮಿತಿಯು ಹೊಂದಿದೆ. ಪ್ರತಿವರ್ಷವೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಕ್ರೀಡೆ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಹೆಬ್ರಿ ಪರಿಸರದ ಸಾಧಕರಿಗೆ ಸನ್ಮಾನ ನಡೆಯುತ್ತದೆ.

‘ಹೆಬ್ರಿ ಶ್ರೀರಾಮ ಮಂಟಪದ ಆಡಳಿತ ಮಂಡಳಿಯವರು ನಿರಂತರವಾಗಿ ಸ್ಥಳವಾಕಾಶ ನೀಡುತ್ತಿದ್ದಾರೆ.  ಜೊತೆಗೆ ಚೈತನ್ಯ ಯುವ ವೃಂದದ ಸದಸ್ಯರು ಹಾಗೂ ಹೆಬ್ರಿಯ ವಿವಿಧ ಸಂಘಸಂಸ್ಥೆಗಳು ಗಣೇಶೋತ್ಸವದ ಯಶಸ್ಸಿಗಾಗಿ ಶ್ರಮಿಸುತ್ತ ಬಂದಿವೆ. ಅಂದು ಹಿರಿಯರು ಹಾಕಿಕೊಟ್ಟ ದಾರಿಯಲ್ಲಿ ನಾವೆಲ್ಲರೂ ಮುನ್ನಡೆದಿದ್ದೇವೆ’ ಎನ್ನುತ್ತಾರೆ ಸಮಿತಿಯ ಅಧ್ಯಕ್ಷ ಎಚ್. ಜನಾರ್ದನ್‌.

ಯುವಕ ಸಂಘ ಸಂಘದಿಂದ ಆಚರಣೆ

ಹಿರಿಯಡಕ: ಪೆರ್ಡೂರಿನ ಯುವಕ ಸಂಘದ ವತಿಯಿಂದ ಅನಂತಪದ್ಮನಾಭ ದೇವಸ್ಥಾನದ ಮುಂಭಾಗದಲ್ಲಿ 3 ದಿನಗಳ ಕಾಲ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಗಣೇಶೋತ್ಸವ ಆಚರಿಸಲಾಗುತ್ತಿದೆ. 1977ರಲ್ಲಿ ಯುವಕ ಸಂಘದ ನೇತೃತ್ವದಲ್ಲಿ ಸಾರ್ವಜನಿಕ ಗಣೇಶೋತ್ಸವ ಪ್ರಾರಂಭವಾಗಿದ್ದು ಈ ಬಾರಿ 48ನೇ ವರ್ಷದ ಸಂಭ್ರಮದಲ್ಲಿದೆ. ಈ ಸಂಸ್ಥೆಯು ಕೇವಲ ಗಣೇಶೋತ್ಸವಕ್ಕೆ ಮಾತ್ರ ಸೀಮಿತವಾಗದೆ ಊರಿನ ಇತರ ಸಂಘ– ಸಂಸ್ಥೆಗಳ ಸಹಕಾರದೊಂದಿಗೆ ವಿವಿಧ ಸಮಾಜಮುಖಿ ಕೆಲಸಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಉಚಿತ ನೇತ್ರ ತಪಾಸಣಾ ಶಿಬಿರ ಉಚಿತ ವೈದ್ಯಕೀಯ ಮತ್ತು ರಕ್ತದಾನ ಶಿಬಿರ ಸ್ವಚ್ಛತಾ ಕಾರ್ಯಕ್ರಮ‌ ಸಂವಿಧಾನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ.

ಸಾಧು ಸಂತರಿಂದ ಆರಂಭವಾದ ಉತ್ಸವ

ಬೈಂದೂರು: ಇಲ್ಲಿನ ಶ್ರೀ ಸೇನೇಶ್ವರ ದೇವಸ್ಥಾನದಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯವರು ಪೂಜಿಸಿಕೊಂಡು ಬಂದಿರುವ ಗಣಪನಿಗೆ ಸುಮಾರು 70ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದೆ. ದೇವಸ್ಥಾನದ ಸುತ್ತು ಪೌಳಿಗಳಲ್ಲಿ ಅನೇಕ ಸಾಧು ಸಂತರು ರಾತ್ರಿ ವೇಳೆ ತಂಗುತ್ತಿದ್ದರು. ಆ ಸಂದರ್ಭದಲ್ಲಿ ಹಿರಿಯ ಸಾಧು ಒಬ್ಬರು ಗಣೇಶ ಚತುರ್ಥಿಯಂದು ಬಂಕೇಶ್ವರದ ವಿಶ್ವಕರ್ಮ ಕುಟುಂಬದ ನಾಗಪ್ಪಯ್ಯ ಆಚಾರ್ಯ ಎಂಬುವವರಿಂದ ಗಣಪತಿಯ ಸಣ್ಣ ಮಣ್ಣಿನ ವಿಗ್ರಹ ತಯಾರಿಸಿಕೊಂಡು ದೇವಸ್ಥಾನದ ವಠಾರದಲ್ಲಿ ಪ್ರತಿಷ್ಠಾಪಿಸಿ ಪೂಜೆ ಪುನಸ್ಕಾರಗಳನ್ನು ನೆರವೇರಿಸಿ ಸಂಜೆ ದೇವಳದ ಬಾವಿಯಲ್ಲಿ ವಿಸರ್ಜನೆ ಮಾಡಿದ್ದರು ಎಂದು ಹಿರಿಯರು ಹೇಳುತ್ತಾರೆ. ಕಾಲಕ್ರಮೇಣ ಸ್ಥಳೀಯರಾದ ನಿತ್ಯಾನಂದ ರಾವ್ ಮಂಜುನಾಥ ದೇವಾಡಿಗ ವಿಠಲ ಆಚಾರ್ಯ ಜಯರಾಮ ಮಹಾಬಲ ದೇವಾಡಿಗ ಮಾಧವ ರಾವ್ ಮುಂತಾದವರು ಸೇರಿಕೊಂಡು ದೇವಸ್ಥಾನದ ಓಲಗ ಮಂಟಪದಲ್ಲಿ ಗಣಪತಿ ವಿಗ್ರಹ ಪ್ರತಿಷ್ಠಾಪಿಸಿ 3 ದಿನಗಳ ಕಾಲ ಗಣೇಶೋತ್ಸವ ಆಚರಿಸುತ್ತಾ ಬಂದಿದ್ದರು. ಈಗ ಸಮಿತಿಯನ್ನು ರಚಿಸಿಕೊಂಡು 5 ದಿನ ವಿಜೃಂಭಣೆಯಿಂದ ಉತ್ಸವ ನಡೆಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT